ಚುನಾವಣೆ ದಿನಾಂಕ ಘೋಷಣೆಗೂ ಪೂರ್ವದಲ್ಲೇ ಪ್ರಮುಖ ರಾಜಕೀಯ ಪಕ್ಷಗಳ ಹುರಿಯಾಳುಗಳು ಯಾರೆಂದು ನಿರ್ಣಯವಾಗಿರುವ ಜಿಲ್ಲೆಯ 9 ಕ್ಷೇತ್ರಗಳಲ್ಲೇ ಏಕೈಕ ಕ್ಷೇತ್ರವಾಗಿ ಸೇಡಂ ಹೊರಹೊಮ್ಮಿರುವುದರಿಂದ ಇಲ್ಲಿನ ರಾಜಕೀಯವೂ ಈಗಾಗಲೇ ರಂಗೇರಿದೆ.
ಶೇಷಮೂರ್ತಿ ಅವಧಾನಿ
ಕಲಬುರಗಿ (ಏ.05): ಕಲಬುರಗಿ ಜಿಲ್ಲೆಯ ಕಾಗಿಣಾ ನದಿ ತೀರದಲ್ಲಿರುವ ಸೇಡಂ ವಿಧಾನಸಭಾ ಕ್ಷೇತ್ರ ಹಿಂದೆಂದಿಗಿಂತಲೂ ಈ ಬಾರಿ ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ. ಚುನಾವಣೆ ದಿನಾಂಕ ಘೋಷಣೆಗೂ ಪೂರ್ವದಲ್ಲೇ ಪ್ರಮುಖ ರಾಜಕೀಯ ಪಕ್ಷಗಳ ಹುರಿಯಾಳುಗಳು ಯಾರೆಂದು ನಿರ್ಣಯವಾಗಿರುವ ಜಿಲ್ಲೆಯ 9 ಕ್ಷೇತ್ರಗಳಲ್ಲೇ ಏಕೈಕ ಕ್ಷೇತ್ರವಾಗಿ ಸೇಡಂ ಹೊರಹೊಮ್ಮಿರುವುದರಿಂದ ಇಲ್ಲಿನ ರಾಜಕೀಯವೂ ಈಗಾಗಲೇ ರಂಗೇರಿದೆ. ಬಿಜೆಪಿಯಿಂದ ಪುನರಾಯ್ಕೆ ಬಯಸಿರುವ ಹಾಲಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಧ್ಯೆ ಈ ಚುನಾವಣೆಯಲ್ಲೂ ಜಂಗಿ ಕುಸ್ತಿ ನಿಶ್ಚಿತ. ಏತನ್ಮಧ್ಯೆ ಜೆಡಿಎಸ್‌ನಿಂದ ಬಾಲರಾಜ್ ಗುತ್ತೇದಾರ್, ಕೆಆರ್‌ಪಿಪಿಯಿಂದ ಜಿ. ಲಲ್ಲೇಶರೆಡ್ಡಿ ಎಂಟ್ರಿಯಾಗಿದ್ದು, ಇದು ಸೇಡಂ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
undefined
ಹಳೆ-ಹೊಸ ಮುಖಗಳ ಸಂಗಮ: 2004ರವರೆಗೆ ಸೇಡಂ ಕ್ಷೇತ್ರ ಯಾವೊಬ್ಬ ಜನನಾಯಕನಿಗೂ 2ನೇ ಅವಧಿಗೆ ಒಲಿದಿರಲಿಲ್ಲ. ಆದರೆ ಮೊದಲ ಬಾರಿಗೆ ಕಾಂಗ್ರೆಸ್‌ನ ಡಾ. ಶರಣಪ್ರಕಾಶ ಕ್ಷೇತ್ರದ ಈ ಪರಂಪರೆಯನ್ನು ಮುರಿದು ಸತತ 3 ಬಾರಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. 2004ರ ಚುನಾವಣೆಯಲ್ಲೂ ಚತುಷ್ಕೋನ ಪೈಪೋಟಿ ಕಂಡಿತ್ತು. ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಡಾ.ಶರಣಪ್ರಕಾಶ ಪಾಟೀಲ, ಬಿಜೆಪಿಯಿಂದ ರಾಜಕುಮಾರ ಪಾಟೀಲ ತೆಲ್ಕೂರ್, ಬಿಎಸ್ಪಿಯಿಂದ ಮುಕ್ರಂಖಾನ್ ಹೊಸ ಮುಖಗಳಾಗಿ ಕಣದಲ್ಲಿದ್ದರೆ, ಜನತಾದಳದಿಂದ ಹಳೆ ಹುಲಿ ಚಂದ್ರಶೇಖರ ರೆಡ್ಡಿ ದೇಶಮುಖ ಮದನಾ ಇದ್ದರು. ಈ ಚತುಷ್ಕೋನ ಸ್ಪರ್ಧೆಯಲ್ಲಿ ಅಚ್ಚರಿ ಎಂಬಂತೆ ಡಾ.ಶರಣಪ್ರಕಾಶ ಪಾಟೀಲರ ಕೈ ಹಿಡಿದದ್ದು ಇತಿಹಾಸ. ಇದೀಗ 2023ರ ಚುನಾವಣೆಯಲ್ಲೂ ಸೇಡಂ ಚತುಷ್ಕೋನ ಪೈಪೋಟಿ ಇದೆ.
ಬಿಎಸ್‌ವೈ, ಸಿದ್ದರಾಮಯ್ಯ ಒಳಒಪ್ಪಂದ: ದೇವೇಗೌಡ ಹೊಸ ಬಾಂಬ್
ಸೇಡಂ ‘ಕೈ’ವಶಕ್ಕೆ ಪಾಟೀಲ್ ಪ್ರಯತ್ನ: ಕಾಂಗ್ರೆಸ್‌ನಿಂದ 2004, 2008, 2013ರಲ್ಲಿ ಸತತ ಗೆದ್ದಿದ್ದರೂ 2018ರ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಡಾ.ಶರಣಪ್ರಕಾಶ ಪಾಟೀಲರ ಕೈ ಹಿಡಿಯಲಿಲ್ಲ. ಈಗ ಮತ್ತೆ ಶರಣಪ್ರಕಾಶ ಪಾಟೀಲ ಕಣಕ್ಕಿಳಿಯಲಿದ್ದಾರೆ. ಇನ್ನು ಬಿಜೆಪಿಯ ತೇಲ್ಕೂರ್ ಸತತ 3 ಬಾರಿ ಸೋಲುಂಡರೂ ಮೋದಿ ಮೋಡಿ, ಸೋಲಿನ ಅನುಕಂಪದಿಂದಲೇ ಗೆದ್ದಿದ್ದು ಇವರೀಗ ಪುನರಾಯ್ಕೆ ಬಯಸಿದ್ದಾರೆ. ಜೆಡಿಎಸ್ ಈ ಬಾರಿ ಉದ್ಯಮಿ ಬಾಲರಾಜ್ ಗುತ್ತೇದಾರ್‌ರನ್ನು ಹುರಿಯಾಳೆಂದು ಘೋಷಿಸಿದೆ. ಮೂರು ವರ್ಷದಿಂದ ಬಾಲರಾಜ ಗುತ್ತೇದಾರ್ ಸೇಡಂ ಸುತ್ತುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಈ ಮಧ್ಯೆ, ಗಾಲಿ ಜನಾರ್ಧನರೆಡ್ಡಿ ಅವರು ರೆಡ್ಡಿಗಳ ಪ್ರಾಬಲ್ಯದ ಸೇಡಂ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಳಿಯ ಜಿ.ಲಲ್ಲೇಶರೆಡ್ಡಿಯವರನ್ನು ಕಣಕ್ಕಿಳಿಸಿ ಸಂಚಲನ ಮೂಡಿಸಿದ್ದಾರೆ. ಲಲ್ಲೇಶರೆಡ್ಡಿ ಕಳೆದ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ವಿರುದ್ಧ ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.
ಕ್ಷೇತ್ರದ ಹಿನ್ನೆಲೆ: 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ 2 ಸ್ಥಾನ ಹೊಂದಿತ್ತು. 1962ರಲ್ಲಿ ಇದು ರದ್ದಾಗಿ 1978ರ ವರೆಗೂ ಮೀಸಲು ಕ್ಷೇತ್ರವಾಗಿತ್ತು. 1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಶೇರ್‌ಖಾನ್ ಗೆದ್ದಿದ್ದರು. ಅಲ್ಲಿಂದ ಇಲ್ಲಿವರೆಗೂ ಲಿಂಗಾಯತೇತರ ಯಾರೊಬ್ಬರೂ ಗೆದ್ದಿಲ್ಲ. 16 ಚುನಾವಣೆಗಳಲ್ಲಿ 4 ಬಾರಿ ಕಾಂಗ್ರೆಸ್ (ಆಕಳು- ಕರು ಚಿಹ್ನೆ) 3 ಬಾರಿ ಪಕ್ಷೇತರ, ತಲಾ 1 ಬಾರಿ ಜನತಾದಳ, ಜೆಡಿಎಸ್, 2 ಬಾರಿ ಬಿಜೆಪಿ, 5 ಬಾರಿ ಕಾಂಗ್ರೆಸ್ (ಕೈ ಚಿಹ್ನೆ) ಗೆ ಸೇಡಂ ಜನ ಹರಸಿದ್ದಾರೆ.
ಡಿ.ಕೆ.ಶಿವಕುಮಾರ್‌ಗೆ ಸಿಎಂ ಹುದ್ದೆ ಕೊಡಲ್ಲ ಎಂದಿಲ್ಲ: ಸಿದ್ದರಾಮಯ್ಯ
ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಲಿಂಗಾಯತ ರೆಡ್ಡಿ, ಕೋಲಿ ಸಮಾಜ, ಈಡಿಗ ಸಮಾಜದ ಮತಗಳು ಹೆಚ್ಚಿವೆ. ಇವೇ ನಿರ್ಣಾಯಕ ಪಾತ್ರ ವಹಿಸಲಿವೆ. ಲಿಂಗಾಯತ ಅಭ್ಯರ್ಥಿಗಳೊಂದಿಗೆ ಸ್ಪರ್ಧೆಗಿಳಿದ ಹಿಂದುಳಿದ ವರ್ಗಕ್ಕೆ ಸೇರಿದವರ ನಡುವೆ ಪೈಪೋಟಿಯಂತು ಜೋರಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.