ಮತದಾನ ಹೆಚ್ಚಳದ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಈ ಬಾರಿ ಚುನಾವಣಾ ಆಯೋಗ ವಿಶೇಷ ಮತಗಟ್ಟೆಗಳನ್ನು ರೂಪಿಸಿದ್ದು, ಈ ಪೈಕಿ ಇಲ್ಲಿಯ ಪ್ರಜೆಂಟೇಶನ್ ಶಾಲೆಯಲ್ಲಿ ವಿಷಯಾಧಾರಿತ (ಎಥ್ನಿಕ್) ಮತಗಟ್ಟೆ ರೂಪಿಸಿದ್ದು ಕೈ ಬೀಸಿ ಕರೆಯುತ್ತಿದೆ.
ಧಾರವಾಡ (ಮೇ.10): ಮತದಾನ ಹೆಚ್ಚಳದ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಈ ಬಾರಿ ಚುನಾವಣಾ ಆಯೋಗ ವಿಶೇಷ ಮತಗಟ್ಟೆಗಳನ್ನು ರೂಪಿಸಿದ್ದು, ಈ ಪೈಕಿ ಇಲ್ಲಿಯ ಪ್ರಜೆಂಟೇಶನ್ ಶಾಲೆಯಲ್ಲಿ ವಿಷಯಾಧಾರಿತ (ಎಥ್ನಿಕ್) ಮತಗಟ್ಟೆ ರೂಪಿಸಿದ್ದು ಕೈ ಬೀಸಿ ಕರೆಯುತ್ತಿದೆ. ಧಾರವಾಡದ ಪೇಡೆ ವಿಶ್ವವಿಖ್ಯಾತ. ಪೇಡೆಗಾಗಿಯೇ ಧಾರವಾಡ ಹೆಸರಾಗಿದ್ದು ಪ್ರಜೆಂಟೇಶನ ಶಾಲೆಯ ಮತಗಟ್ಟೆ15ರಲ್ಲಿ ಧಾರವಾಡ ಪೇಡೆಯನ್ನು ಬಿಂಬಿಸುವ ಮತಗಟ್ಟೆಯನ್ನು ರೂಪಿಸಲಾಗಿತ್ತು. ಧಾರವಾಡದಲ್ಲಿ ಹಲವು ಸಂಸ್ಥೆಗಳ ಪೇಡೆ ಉದ್ಯಮಗಳಿವೆ. ಆದರೆ, ಐತಿಹಾಸಿಕ ಹಿನ್ನಲೆಯುಳ್ಳ ಬಾಬುಸಿಂಗ್ ಠಾಕೂರ ಪೇಡೆ ಮಾತ್ರ ಪ್ರಸಿದ್ಧ.
ಹೀಗಾಗಿ ನಗರದ ಲೈನ್ ಬಜಾರ್ ಬಾಬುಸಿಂಗ್ ಪೇಡೆ ಅಂಗಡಿ ಚಿತ್ರ ಹಾಗೂ ಅಲ್ಲಿ ಮಾರಾಟವಾಗುವ ಪೇಡೆಗಳ ಚಿತ್ರಗಳು, ಫ್ಲೆಕ್ಸ್‌ಗಳ ಮೂಲಕ ಈ ಮತಗಟ್ಟೆಯನ್ನು ರೂಪಿಸಲಾಗಿತ್ತು. ಹಲವು ವರ್ಷಗಳಿಂದ ಚುನಾವಣೆ ಕೆಲಸ ಮಾಡಿದ್ದೇನೆ. ಆದರೆ, ಈ ರೀತಿ ಒಂದು ವಿಷಯದಲ್ಲಿ ಅದರಲ್ಲೂ ಧಾರವಾಡ ಪೇಡೆ ವಿಷಯವಾಗಿಟ್ಟುಕೊಂಡು ಮತಗಟ್ಟೆರೂಪಿಸಿದ್ದು ಖುಷಿ ತಂದಿದೆ. ಮತದಾರರು ಸಹ ಖುಷಿ ಖುಷಿಯಿಂದ ಮತಗಟ್ಟೆಗೆ ಬಂದು ಮತ ಹಾಕುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಮತಗಟ್ಟೆ ಸಿಬ್ಬಂದಿಯೊಬ್ಬರು ಪತ್ರಿಕೆಗೆ ಖುಷಿ ಹಂಚಿಕೊಂಡರು.
Karnataka Election 2023: ಬಳ್ಳಾರಿಯಲ್ಲಿ ಎರಡು ಕೈ ಇಲ್ಲದ ದಿವ್ಯಾಂಗನಿಂದ ಮತದಾನ
ವಿಶೇಷ ಮತಗಟ್ಟೆಗಳು: ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಲ್ಲಿ ಸಖಿ, ವಿಶೇಷ ಚೇತನರ ಮತಗಟ್ಟೆಸೇರಿದಂತೆ 35 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಸಲ ಕಲೆ, ಸಾಹಿತ್ಯ, ಸಂಸ್ಕೃತಿ ಸಾರುವ ಎಥ್ನಿಕ್ ಮತಗಟ್ಟೆಗಳನ್ನು ತೆರೆದಿರುವುದು ವಿಶೇಷ. ಮತದಾನ ಹೆಚ್ಚಳಕ್ಕಾಗಿ ಜಿಲ್ಲಾಡಳಿತ ಸನ್ನದ್ಧವಾಗಿದ್ದು ಹಲವು ರೀತಿಯ ವಿಭಿನ್ನ ಕಾರ್ಯಕ್ರಮಗಳು ಹಾಗೂ ವಿಶೇಷ ಮತಗಟ್ಟೆಗಳನ್ನ ಸ್ಥಾಪಿಸುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯ ಮಾಡಲಾಗುತ್ತಿದೆ.
ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿರುವ ಮತಗಟ್ಟೆಗಳನ್ನು ಗುರುತಿಸಿ ಅಲ್ಲಿ ಮಹಿಳೆಯರಿಗಾಗಿಯೇ 14 ವಿಶೇಷ ಸಖಿ ಪಿಂಕ್ ಮತಗಟ್ಟೆಸ್ಥಾಪಿಸಲಾಗಿದೆ. ಇಲ್ಲಿ ಮಹಿಳಾ ಅಧಿಕಾರಿಗಳೇ ಕಾರ್ಯನಿರ್ವಹಿಸಲಿದ್ದಾರೆ. 18 ವರ್ಷ ಪೂರ್ಣಗೊಂಡ ಯುವ ಮತದಾರರನ್ನು ಸೆಳೆಯುವ ಸಲುವಾಗಿ ಈಗಾಗಲೇ ಜಿಲ್ಲೆಯಲ್ಲಿ 7 ಯುವ ಮತಗಟ್ಟೆಗಳನ್ನ ಸ್ಥಾಪಿಸಲಾಗಿದ್ದು, ಇಲ್ಲಿ ಯುವ ಸರ್ಕಾರಿ ಅಧಿಕಾರಿಗಳೇ ಕಾರ್ಯ ನಿರ್ವಹಿಸುವರು. ಕಲೆ, ಮತ್ತು ಸಂಸ್ಕೃತಿ ಕುರಿತು ಗಮನ ಸೆಳೆಯುವ ಸಲುವಾಗಿ 7 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಹಾಗೆಯೇ ವಿಶೇಷಚೇತನರನ್ನು ಮತದಾನಕ್ಕೆ ಪ್ರೇರೇಪಿಸುವ ಸಲುವಾಗಿ 7 ಪಿಡಬ್ಲ್ಯೂಡಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ.
Karnataka Election 2023: ಬಳ್ಳಾರಿಯ ಮತದಾನ ಕೇಂದ್ರದ ಆವರಣದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ!
ಏನಿದೆ ವಿಶೇಷ: ವಿಶೇಷವಾಗಿ ಕಲೆ ಮತ್ತು ಸಂಸ್ಕೃತಿ ಸಾರುವ ಕುರಿತು ಜಿಲ್ಲೆಯಲ್ಲಿ 7 ಮತಗಟ್ಟೆಗಳನ್ನ ಸ್ಥಾಪಿಸಲಾಗಿದ್ದು, ಇಲ್ಲಿ ಕಸೂತಿ ಕಲೆ, ಕಿನ್ನಾಳ ಕಲೆ, ಯಕ್ಷಗಾನ, ಭರತನಾಟ್ಯ, ಕೋಲಾಟ, ಕಲಘಟಗಿ ತೊಟ್ಟಿಲು ಕಲೆ ಸೇರಿದಂತೆ ಅಳಿವಿನಂಚಿನಲ್ಲಿರುವ ಕೌದಿ ಕಲೆಯ ಕುರಿತು ಸುಂದರ ಚಿತ್ರ ಬಿಡಿಸುವ ಮೂಲಕ ಮತಗಟ್ಟೆಗಳು ನೋಡುಗರನ್ನು ಆಕರ್ಷಿಸುವಂತಿವೆ. ಉಣಕಲ್ಲಿನಲ್ಲಿರುವ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯನ್ನು ರೈತರ ಚಿತ್ರ, ಯಕ್ಷಗಾನ ಕಲೆ ಸಾರುವ ಸುಂದರ ಚಿತ್ರಗಳನ್ನ ಬಿಡಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಇಂದು (ಮೇ.10) ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.