ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಸಮಾಧಾನದ ಜ್ವಾಲೆ ಸ್ಫೋಟಗೊಂಡಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡೋಣ ಎಂಬುದಾಗಿ ಕೈ ನಾಯಕ ಹೇಳಿದ್ದರಿಂದ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಘಟನೆ ಇಂದು ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.01): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಸಮಾಧಾನದ ಜ್ವಾಲೆ ಸ್ಫೋಟಗೊಂಡಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡೋಣ ಎಂಬುದಾಗಿ ಕೈ ನಾಯಕ ಹೇಳಿದ್ದರಿಂದ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಘಟನೆ ಇಂದು ನಡೆದಿದೆ. ಇಂದು ಚಿಕ್ಕಮಗಳೂರಿನ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
undefined
ಕಾರ್ಯಕರ್ತರ ಮಧ್ಯೆ ವಾಕ್ಸಮರ... ಗಲಾಟೆ... ಥಳಿತ: ಇತ್ತೀಚೆಗಷ್ಟೇ ಬಿಜೆಪಿ ತೊರೆದು ಬಂದಿದ್ದ ಎಚ್.ಡಿ.ತಮ್ಮಯ್ಯ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಹಲವು ದಿನಗಳಿಂದ ಕಾಂಗ್ರೆಸ್ನಲ್ಲಿ ಮಡುಗಟ್ಟಿದ್ದ ಅಸಮಾಧಾನ ಇಂದು ಸ್ಪೋಟಗೊಂಡು ಕಾರ್ಯಕರ್ತರ ನಡುವೆ ಮಾರಾಮಾರಿಗೆ ಕಾರಣವಾಯಿತು. ಘಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪದವೀಧರ ಮತ್ತು ಶಿಕ್ಷಕರ ಘಟಕದ ಅಧ್ಯಕ್ಷ ಜಿ.ಬಿ.ಪವನ್ ಗಾಯಗೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಪರ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಪರಸ್ಪರ ನೂಕಾಟ, ತಳ್ಳಾಟ, ಅವಾಚ್ಯ ನಿಂದನೆಗಳಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸುವಂತಾಯಿತು.
ಬಿಜೆಪಿ ಟಿಕೆಟ್ ವಿಚಾರದಲ್ಲಿ ಗೊಂದಲ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಎಚ್‌ಡಿ ತಮ್ಮಯ್ಯ ವಿರುದ್ದ ಕಿಡಿ: ತಮ್ಮಯ್ಯ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದ 6 ಮಂದಿ ಆಕಾಂಕ್ಷಿಗಳು ಹಾಗೂ ಕೆಲವು ಮುಖಂಡರು ಬಹಿರಂಗವಾಗಿ ತಮ್ಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಕೆಲವರು ಯಾರೇ ಅಭ್ಯರ್ಥಿ ಆದರೂ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ತಮ್ಮಯ್ಯ ಅವರಿಗೆ ಮಣೆ ಹಾಕಿದ್ದೇ ಆದಲ್ಲಿ ಈ ಬಾರಿಯೂ ಸೋಲು ಪುನರಾವರ್ತನೆ ಆಗುತ್ತದೆ. ನಮಗೆ ವಲಸೆ ಅಭ್ಯರ್ಥಿ ಬೇಡ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರೇ ಬೇಕು. ಈ ಎಲ್ಲಾ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ಹಲವು ಬಾರಿ ತರಲಾಗಿದೆ. ಇಷ್ಟಾದರೂ ಅವರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿರುವ ಡಾ. ಡಿ.ಎಲ್.ವಿಜಯಕುಮಾರ್, ಮಹಡಿಮನೆ ಸತೀಶ್, ಎ.ಎನ್.ಮಹೇಶ್, ಬಿ.ಹೆಚ್.ಹರೀಶ್ ಹಾಗೂ ನಯಾಜ್ ಅವರು ಅಭಿಪ್ರಾಯ ಮಂಡಿಸಿದರು.
ಚುನಾವಣೆ ಮಾಡುವುದು ಕಾರ್ಯಕರ್ತರು ಡಿಕೆಶಿ, ಸಿದ್ದು ಅಲ್ಲ: ಟಿಕೆಟ್ ಆಕ್ಷಾಂಕಿ ಮಹಡಿಮನೆ ಸತೀಶ್ ಮಾತನಾಡಿ, ಒಂದು ಜಾತಿ ಹಿಡಿದುಕೊಂಡು ಚುನಾವಣೆ ನಡೆಸಲು ಆಗುತ್ತದೆಯಾ? ತಮ್ಮಯ್ಯನನ್ನು ಪಕ್ಷಕ್ಕೆ ಕರೆತಂದದ್ದು ಯಾರು? ಆತ ಚುನಾವಣೆ ಆದ ಮೇಲೆ ಪಕ್ಷದಲ್ಲಿರುತ್ತಾನಾ? ಎಲ್ಲವೂ ನನಗೆ ಗೊತ್ತಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಬಂದು ಇಲ್ಲಿ ಚುನಾವಣೆ ಮಾಡಲಿಕ್ಕಾಗಲ್ಲ. ಇಲ್ಲಿನ ಕಾರ್ಯಕರ್ತರೇ ಮಾಡಬೇಕು. ಇಷ್ಟಾದರೂತಮ್ಮಯ್ಯಗೆ ಟಿಕೆಟ್ ಕೊಟ್ಟರೆ ಮುಂದಿನ ಪರಿಣಾಮ ಎದುರಿಸುತ್ತೀರಿ ಎಂದು ಮಹಡಿ ಮನೆ ಸತೀಶ್ ನೇರ ಎಚ್ಚರಿಕೆ ನೀಡಿದರು. ಸಭೆಯ ಕೊನೆ ಹಂತದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಪಕ್ಷ ಯಾರಿಗೆ ಕೊಟ್ಟರೂ ಒಗ್ಗಟ್ಟಾಗಿ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕು ಎನ್ನುತ್ತಿದ್ದಂತೆ ಒಂದು ಗುಂಪು ಆಕ್ಷೇಪಿಸಿ ತಮ್ಮಯ್ಯ ಪರ ಮಾತನಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಅಭ್ಯರ್ಥಿಗಳ ಆಯ್ಕೆ ಬಿಜೆಪಿ ಸಂಸದೀಯ ಸಭೆಯಲ್ಲಿ ಅಂತಿಮ: ಶಾಸಕ ಬಸನಗೌಡ ಯತ್ನಾಳ
ಈ ಹಂತದಲ್ಲಿ ನೂಕಾಟ, ತಳ್ಳಾಟ ಉಂಟಾಗಿ ಮಾರಾಮಾರಿಯೂ ನಡೆದು ಹೋಯಿತು. ತದನಂತರ ಅಧ್ಯಕ್ಷರ ಕಛೇರಿಯಲ್ಲಿ ಮತ್ತೋಮ್ಮೆ ಸಭೆ ಸೇರಿದ ಮುಖಂಡರು ಇಂದಿನ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುಸುವ ಪ್ರಯತ್ನದ ಬಗ್ಗೆ ಚರ್ಚೆ ನಡೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.