
ಆತ್ಮಭೂಷಣ್
ಮಂಗಳೂರು (ಏ.20): ಕರಾವಳಿಯಲ್ಲಿ ಬಿಜೆಪಿ ಭದ್ರಕೋಟೆ ಎನಿಸಿದ ಪುತ್ತೂರಿನಲ್ಲಿ ಈ ಅಸೆಂಬ್ಲಿ ಚುನಾವಣೆ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಬಿಜೆಪಿ ವರ್ಸಸ್ ಹಿಂದುತ್ವ ನಡುವಿನ ಜಿದ್ದಾಜಿದ್ದಿ ಏರ್ಪಡುತ್ತಿದೆ. ಇದರಿಂದಾಗಿ ಪುತ್ತೂರು ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುವಂತಾಗಿದೆ.
ಪುತ್ತೂರಿನ ಹಿಂದು ಫೈರ್ ಬ್ರಾಂಡ್ ಎಂದೇ ಕರೆಸಿಕೊಳ್ಳುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸೋಮವಾರ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಪುತ್ತಿಲ ಅವರ ಸ್ಪರ್ಧೆ ಈಗ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಪುತ್ತಿಲ ಅವರಿಗೆ ಸಿಗುತ್ತಿರುವ ಹಿಂದೂ ಕಾರ್ಯಕರ್ತರ ಬೆಂಬಲ ನೋಡಿ ಬಿಜೆಪಿ ಕಂಗೆಟ್ಟಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಪರ ಪ್ರಚಾರಕ್ಕೆ ಇಡೀ ಸಂಘಪರಿವಾರ ಧುಮುಕಿದೆ. ವಿಶೇಷವೆಂದರೆ ಬಿಜೆಪಿ ತ್ಯಜಿಸಿದ ಉದ್ಯಮಿ ಅಶೋಕ್ ಕುಮಾರ್ ರೈ ಅವರು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ.
ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಸುಪ್ರೀಂಕೋರ್ಟ್ ನಿರಾಕರಣೆ
ಈ ಹಿಂದೆ ಪುತ್ತೂರಲ್ಲಿ ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟಾಗ ಶಕುಂತಳಾ ಶೆಟ್ಟಿಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆಗ ಕೂಡ ಸಂಘಪರಿವಾರ ಅಖಾಡಕ್ಕೆ ಇಳಿದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟಿತ್ತು. ಈ ಬಾರಿ ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರೇ ಅಖಾಡಕ್ಕೆ ಧುಮುಕಿದ್ದು, ಉಳಿದ ಸಂಘ ಪರಿವಾರದ ಮುಖಂಡರು ಸಾಥ್ ನೀಡುತ್ತಿದ್ದಾರೆ. ಮೊದಲ ಹಂತದಲ್ಲಿ ಅತೃಪ್ತಿಯನ್ನು ಶಮನಗೊಳಿಸುವ ಕೆಲಸಕ್ಕೆ ಕೈಹಾಕಿದೆ.
ಕಳೆದ ನಾಲ್ಕು ದಿನಗಳಿಂದ ಸಂಘಪರಿವಾರದ ಮುಖಂಡರು ಹಲವು ಸುತ್ತು ಬೈಠಕ್‌ಗಳನ್ನು ನಡೆಸುತ್ತಿದ್ದು, ಅತೃಪ್ತಿ ಶಮನಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ 17 ಸುತ್ತು ಕೇಂದ್ರಗಳನ್ನು ರಚಿಸಿ, ಒಂದೇ ದಿನ ಪ್ರವಾಸ ಮಾಡಿ ಅಸಮಾಧಾನ ತಣಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಈ ಕಾರ್ಯದಲ್ಲಿ ಡಾ.ಪ್ರಭಾಕರ ಭಟ್ ಸಹಿತ ಸಂಘಪರಿವಾರದ ಎಲ್ಲ ಮುಖಂಡರು ಓಡಾಟ ನಡೆಸುತ್ತಿದ್ದಾರೆ. ಪುತ್ತೂರು ಕ್ಷೇತ್ರ ವ್ಯಾಪ್ತಿಯ ಎಲ್ಲ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳನ್ನು ಸಂಪರ್ಕಿಸುತ್ತಿದ್ದು, ಅಸಮಾಧಾನಿತರ ಮನೆಗೆ ನೇರವಾಗಿ ತೆರಳಿ ಸಮಾಧಾನ ಪಡಿಸುವ ಪ್ರಯತ್ನ ನಡೆಸಲಾಗಿದೆ. ಇನ್ನೂ ಕೆಲ ಕಡೆ ಸಂಘಪರಿವಾರದಿಂದ ಬೆದರಿಕೆ ತಂತ್ರ ಅನುಸರಿಸುತ್ತಿರುವ ಬಗ್ಗೆ ಪುತ್ತಿಲರ ಗುಂಪು ಆರೋಪಿಸುತ್ತಿದೆ.
ಜಾಲತಾಣದಲ್ಲಿ ಪುತ್ತಿಲ ಸೆಡ್ಡು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರ ಏಳೆಂಟು ವಾಟ್ಸಪ್ ಗುಂಪುಗಳನ್ನು ರಚಿಸಲಾಗಿದ್ದು, ಅವುಗಳ ಮೂಲಕ ಪುತ್ತಿಲ ಪರ ಪ್ರಚಾರ ನಡೆಸಲಾಗುತ್ತಿದೆ. ಜತೆಗೆ ಗ್ರಾಮವಾರು ಸಭೆಗಳನ್ನೂ ನಡೆಸುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರನ್ನು ಸೇರಿಸುತ್ತಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಜೆಡಿಎಸ್‌ನಲ್ಲಿ ಒಟ್ಟು 54 ಒಕ್ಕಲಿಗರಿಗೆ, 37 ಲಿಂಗಾಯತರಿಗೆ ಟಿಕೆಟ್
ಪುತ್ತಿಲ ಜತೆ ಸಂಧಾನ ಬಂದ್: ಅರುಣ್ ಕುಮಾರ್ ಪುತ್ತಿಲರನ್ನು ಮನವೊಲಿಸುವ ವಿಚಾರದಿಂದ ಸಂಘಪರಿವಾರ ಹಿಂದೆ ಸರಿದಿದೆ. ಇನ್ನು ಮುಂದೆ ಬಂದ ಪರಿಸ್ಥಿತಿ ಎದುರಿಸಿಕೊಂಡು ಮುನ್ನೆಡೆಯಲು ನಿರ್ಧರಿಸಿದೆ. ಕಣದಿಂದ ಹಿಂದೆ ಸರಿಯುವಂತೆ ಸಂಘಪರಿವಾರ ಮುಖಂಡರು ಹಾಗೂ ಪಕ್ಷದ ನಾಯಕರು, ಮಠಾಧೀಶರು ಮಾಡಿದ ವಿನಂತಿಗೆ ಪುತ್ತಿಲ ಬೆಲೆ ನೀಡಿಲ್ಲ. ಇನ್ನು ಅಂತಿಮ ಕ್ಷಣದಲ್ಲಿ ನಾಮಪತ್ರ ವಾಪಸ್ ಮಾಡುತ್ತಾರೆ ಎಂಬ ನಂಬಿಕೆ ಇಲ್ಲ. ಹಾಗಾಗಿ ಇನ್ನು ಪುತ್ತಿಲ ಜತೆ ಮಾತುಕತೆ ನಡೆಸುವುದರಲ್ಲಿ ಅರ್ಥ ಇಲ್ಲ ಎಂಬ ತೀರ್ಮಾನಕ್ಕೆ ಸಂಘಪರಿವಾರ ಬಂದಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.