ಬುಧವಾರ ನಡೆದ ವಿಧಾನಸಭೆ ಚುನಾವಣೆಯ ಮತದಾನ ಪ್ರಮಾಣ ಹೊಸ ದಾಖಲೆ ಬರೆದಿದೆ. ಕಳೆದ ಬಾರಿಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇಕಡಾವಾರು ಶೇ.0.75ರಷ್ಟು ಹೆಚ್ಚಾಗಿದ್ದು ಶೇ.73.19ರಷ್ಟು ಮತದಾನವಾಗಿದೆ.
ಬೆಂಗಳೂರು (ಮೇ.12): ಬುಧವಾರ ನಡೆದ ವಿಧಾನಸಭೆ ಚುನಾವಣೆಯ ಮತದಾನ ಪ್ರಮಾಣ ಹೊಸ ದಾಖಲೆ ಬರೆದಿದೆ. ಕಳೆದ ಬಾರಿಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇಕಡಾವಾರು ಶೇ.0.75ರಷ್ಟು ಹೆಚ್ಚಾಗಿದ್ದು ಶೇ.73.19ರಷ್ಟು ಮತದಾನವಾಗಿದೆ. 2018ರ ಚುನಾವಣೆಯಲ್ಲಿ ಶೇ.72ರಷ್ಟು ಮತದಾನವಾಗಿದ್ದು, 1978ರ ಚುನಾವಣೆಯಲ್ಲಿ ಶೇ.71.90ರಷ್ಟು ಮತದಾನವಾಗಿತ್ತು. ಇದೀಗ ಶೇ.73.19ರಷ್ಟು ಮತದಾನವಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. 2013ರಲ್ಲಿ ಶೇ.71.83ರಷ್ಟು ಮತದಾನವಾಗಿತ್ತು.
ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಗುರುವಾರ ಅಂತಿಮ ಮತದಾನದ ಪ್ರಮಾಣವನ್ನು ಅಧಿಕೃತವಾಗಿ ಪ್ರಕಟಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ಪ್ರಮಾಣವಾಗಿದ್ದು, ಶೇ.85.56ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ಶೇ.52.33ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ರಾಮನಗರ ಜಿಲ್ಲೆಯಲ್ಲಿ ಶೇ.85.04ರಷ್ಟು ಮತದಾನವಾಗುವ ಮೂಲಕ ಎರಡನೇ ಸ್ಥಾನದಲ್ಲಿದೆ. ಮಂಡ್ಯ ಜಿಲ್ಲೆಯಲ್ಲಿ ಶೇ.84.45ರಷ್ಟು ಮತದಾನವಾಗಿದ್ದು ಮೂರನೇ ಸ್ಥಾನದಲ್ಲಿದೆ.
Mysuru: ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು: ಎಲ್ಲರ ಚಿತ್ತ ಫಲಿತಾಂಶದತ್ತ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 10.50 ಲಕ್ಷ ಮತದಾರರಿದ್ದು, 8.98 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಶೇ.55ರಷ್ಟು ಮತ ಚಲಾಯಿಸಲಾಗಿದೆ. ಕಡಿಮೆ ಮತದಾನ ಪ್ರಮಾಣವಾಗಿರುವ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣವಾಗಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಆಯೋಗ ಬೇಸರ ವ್ಯಕ್ತಪಡಿಸಿದೆ. ಮುಂದಿನ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ರಾಜ್ಯದಲ್ಲಿ 5.30 ಕೋಟಿ ಮತದಾರರು ಮತದಾನಕ್ಕೆ ಅರ್ಹರಿದ್ದರು. ಈ ಪೈಕಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 1.96 ಕೋಟಿ ಪುರುಷರು, 1.91 ಕೋಟಿ ಮಹಿಳೆಯರು ಮತ್ತು 1037 ಇತರರು ಮತ ಚಲಾಯಿಸಿದ್ದಾರೆ. ಶೇ.73.68ರಷ್ಟು ಪುರುಷರು, ಶೇ.72.70ರಷ್ಟು ಮಹಿಳೆಯರು ಮತ್ತು ಶೇ.21.05ರಷ್ಟು ಇತರರಿಂದ ಮತದಾನವಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ: ಜಿ.ಟಿ.ದೇವೇಗೌಡ
ಈ ಬಾರಿ .384 ಕೋಟಿ ನಗದು, ವಸ್ತುಗಳ ವಶ: ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ದಿನದಿಂದ ಈವರೆಗೆ ನಗದು, ಮದ್ಯ ಸೇರಿದಂತೆ 384.46 ಕೋಟಿ ರು. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ಜಪ್ತಿ ಮಾಡಿದೆ. ಚುನಾವಣಾ ಅಕ್ರಮದ ಮೇಲೆ ಕಣ್ಗಾವಲು ಇಟ್ಟಿದ್ದ ಆಯೋಗದ ವಿವಿಧ ತನಿಖಾ ಸಂಸ್ಥೆಗಳು 153.17 ಕೋಟಿ ರು. ನಗದು ವಶಪಡಿಸಿಕೊಂಡಿವೆ. 24.26 ಕೋಟಿ ರು. ಮೌಲ್ಯದ ಉಚಿತ ಕೊಡುಗೆಗಳು, 84.93 ಕೋಟಿ ರು. ಮೌಲ್ಯದ 22.62 ಲಕ್ಷ ಲೀಟರ್ ಮದ್ಯ, 24.03 ಕೋಟಿ ರು. ಮೌಲ್ಯದ 1,995.75 ಕೆ.ಜಿ. ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 93.28 ಕೋಟಿ ರು. ಮೌಲ್ಯದ 182.28 ಕೆ.ಜಿ. ಚಿನ್ನ, 4.79 ಕೋಟಿ ರು. ಮೌಲ್ಯದ 691.94 ಕೆ.ಜಿ. ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.