ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಳಗಾವಿ (ಸೆ.12): ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಎನ್ನುವುದು ಒಂದು ನ್ಯಾಯಾಂಗ ವ್ಯವಸ್ಥೆ. ಅದು ತಾನಾಗಿಯೇ ನಡೆದುಕೊಂಡು ಹೋಗುತ್ತದೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು ಎನ್ನುವುದು ನಮ್ಮೆಲ್ಲರ ಆಸೆ. ಅವರೇ ಮುಂದುವರೆಯುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಕಂಡ ಕಂಡೋರೆಲ್ಲಾ ಸಿಎಂ ಖುರ್ಚಿ ಖಾಲಿಯಾಗ್ತಿದೆ ಅಂತಾ ಟವೆಲ್ ಹಾಕ್ತಿದ್ದಾರೆ?
ಕೋರ್ಟ್‌ನಲ್ಲಿ ಅರವಿಂದ ಕೆಜ್ರಿವಾಲ್, ಮಮತಾ ಬ್ಯಾನರ್ಜಿಯ ಕೇಸ್ ಇದೆ. ಇವರಿಗೆ ಸಿದ್ದರಾಮಯ್ಯ ಅಷ್ಟೇ ಏಕೆ ಕಾಣುತ್ತಾರೆ? ನಮ್ಮ ತಂದೆ ಸಿಎಂ ಆಗಿದ್ದ ವೇಳೆ ಇಂತಹ ಬೇಕಾದಷ್ಟು ಪ್ರಕರಣಗಳನ್ನು ನೋಡಿದ್ದೇವೆ. ಇದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ವಿರೋಧ ಪಕ್ಷದವರಿಗೂ ಸಿದ್ದರಾಮಯ್ಯ ಬಗ್ಗೆ ಭಯ ಇದೆ. ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ಒಳ್ಳೆಯವರನ್ನು ಕೆಳಗಿಳಿಸಲು ಕುತಂತ್ರ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರಾಗಿದ್ದಾರೆ. ಅವರ (ಬಿಜೆಪಿಗರು) ಹಣೆಬರಹಕ್ಕೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಬಾಂಬೆ ಬಾಯ್ಸ್ ಎಂದು ನೀವೇ ಹಾಕಿದ್ದೀರಿ ಇಂತಹ ಸಂಪ್ರದಾಯ ನಮಗೆ ಬೇಕಾ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ ಕಂಡ್ರೆ ಅಂಜಿಕೆ ಇದೆ: ಸಚಿವ ಶರಣಬಸಪ್ಪ ದರ್ಶನಾಪುರ
ದೀಪಾವಳಿ ಬಳಿಕ ಸರ್ಕಾರ ಪತವಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಬಿಜೆಪಿಯವರು ಇನ್ನೂ ನಾಲ್ಕು ದೀಪಾವಳಿ ಕಾಯಬೇಕು. ಅಲ್ಲಿಯವರೆಗೆ ಅವರು ಮನೆಯಲ್ಲಿ ದೀಪಾವಳಿ ಮಾಡಲಿ ಎಂದರು. ಶಿಕ್ಷಕರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಬೇರೆ ಬೇರೆ ಕಾರಣಗಳಿಗೆ ಶಾಲೆಗಳಿಂದ ದೂರ ಉಳಿದು ಮಕ್ಕಳಿಗೆ ತೊಂದರೆಯನ್ನು ನೀಡಬಾರದು. ಮಕ್ಕಳಿಗೆ ನಿರಂತರವಾಗಿ ಪಾಠ ಮಾಡುತ್ತಿರಬೇಕು. ಅದನ್ನು ಬಿಟ್ಟು ಬೇರೆ ಬೇರೆ ಕೆಲಸ, ಸಂಘಟನೆಯಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅಂತಹ ವ್ಯಕ್ತಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.