ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು 2006-07ರಲ್ಲಿ ತಾವು ಮುಖ್ಯಮಂತ್ರಿ ಆಗಿದ್ದಾಗ 550 ಎಕರೆ ಭೂಮಿಯನ್ನು ಅಕ್ರಮವಾಗಿ ಗಣಿಗಾರಿಕೆಗೆ ನೀಡಿರುವ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಯಾವಾಗ ಕೊಡ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ ಪ್ರಶ್ನಿಸಿದ್ದಾರೆ.
ಬೆಂಗಳೂರು (ಜು.9): ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು 2006-07ರಲ್ಲಿ ತಾವು ಮುಖ್ಯಮಂತ್ರಿ ಆಗಿದ್ದಾಗ 550 ಎಕರೆ ಭೂಮಿಯನ್ನು ಅಕ್ರಮವಾಗಿ ಗಣಿಗಾರಿಕೆಗೆ ನೀಡಿರುವ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ರಾಜ್ಯಪಾಲರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ ಪ್ರಶ್ನಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು 2007ರಲ್ಲಿ ಸಿಎಂ ಆಗಿದ್ದಾಗ ಸಂಡೂರಿನಲ್ಲಿ 550 ಎಕರೆ ಭೂಮಿಯನ್ನು ಅಕ್ರಮವಾಗಿ ಗಣಿಗಾರಿಕೆಗೆ ನೀಡಿದ ಕುರಿತು ರಾಜ್ಯಪಾಲರು ವಿಚಾರಣೆಗೆ ನೀಡದಿರುವ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಪ್ರಕರಣದ ಕುರಿತಂತೆ ಚಾರ್ಜ್‌ಶೀಟ್ ಕೂಡ ಆಗಿದೆ. ಸುಪ್ರೀಂಕೋರ್ಟ್ ಕೂಡ ತನಿಖೆ ಮಾಡಲು ಸೂಚಿಸಿದ್ದು, ಅದರಂತೆ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿ ಅವರ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೋರಿದ್ದರು ಎಂಬ ಮಾಹಿತಿಯಿದೆ. ಈ ವಿಚಾರವಾಗಿ ರಾಜ್ಯಪಾಲರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡೋಣ ಎಂದು ಹೇಳಿದರು
ವಾಲ್ಮೀಕಿ, ಮುಡಾ ಹಗರಣ: ರಾಹುಲ್ ಗಾಂಧಿ ಸೌಂಡ್ ಲೆಸ್, ಖರ್ಗೆ ವಾಯ್ಸ್ ಲೆಸ್: ಸಿ.ಟಿ.ರವಿ ವಾಗ್ದಾಳಿ
ನನ್ನ, ಸಿದ್ದರಾಮಯ್ಯರನ್ನ ಜೈಲಿಗೆ ಕಳಿಸಲು ಗೌಡರ ಯತ್ನ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ದೇವೇಗೌಡ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಿಕೊಳ್ಳಲು ಅವರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಲೇಬೇಕು. ಅದಕ್ಕಾಗಿಯೇ ನಮ್ಮ ವಿರುದ್ಧ ದೂರುಗಳನ್ನು ನೀಡಿ, ಡಿ.ಕೆ. ಶಿವಕುಮಾರ್(DK Shivakumar) ಹಾಗೂ ಸಿದ್ದರಾಮಯ್ಯ(Siddaramaiah) ಅವರನ್ನು ಒಳಗೆ ಹಾಕಲೇಬೇಕು ಎಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ ಎಂದು ಹೇಳಿದರು.
ಕುಮಾರಸ್ವಾಮಿ ಆರೋಪಕ್ಕೆ ದಾಖಲೆಗಳಿಲ್ಲ:
ಪಾದಯಾತ್ರೆ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು ನನ್ನ ಮೇಲೆ ಅನೇಕ ಆರೋಪ ಮಾಡುತ್ತಿದ್ದಾರೆ. ಆ ಆರೋಪಗಳಿಗೆ ದಾಖಲೆ ಬೇಕಲ್ಲವೇ. ಆದರೆ ಕುಮಾರಸ್ವಾಮಿ ಅವರ ಆಸ್ತಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅದಕ್ಕೆ ಶುಭದಿನ, ಶುಭ ಗಳಿಗೆ, ಶುಭ ನಕ್ಷತ್ರಗಳನ್ನು ನೋಡುತ್ತಿದ್ದೇನೆ ಎಂದರು.
ವಿಪಕ್ಷಗಳದ್ದು ಜನಪರ ಪಾದಯಾತ್ರೆಯಲ್ಲ:
ಬಿಜೆಪಿ-ಜೆಡಿಎಸ್ ಜನಪರ ಉದ್ದೇಶವಿಲ್ಲದೇ ಪಾದಯಾತ್ರೆ ನಡೆಸುತ್ತಿದ್ದು, ಅದಕ್ಕೆ ಜನರಿಂದ ಸ್ಪಂದನೆ ಸಿಗುತ್ತಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಕಾವೇರಿ ನೀರಿಗಾಗಿ, ರಾಹುಲ್ ಗಾಂಧಿ ಅವರು ಭಾರತ ಒಗ್ಗೂಡಿಸಲು, ಗಣಿ ಲೂಟಿ ತಡೆಯಲು, ಮೇಕೆದಾಟು ಯೋಜನೆಗಾಗಿ ನಾವು ಪಾದಯಾತ್ರೆ ಮಾಡಿದ್ದೇವೆ. ಆದರೆ, ವಿಪಕ್ಷಗಳು ಜನರಪ ಕಾಳಜಿ ಇಲ್ಲದೆ ಪಾದಯಾತ್ರೆ ಮಾಡುತ್ತಿವೆ. ಹೀಗಾಗಿ ಅವರ ಪಕ್ಷದ ಕಾರ್ಯಕರ್ತರೇ ಪಾದಯಾತ್ರೆಗೆ ಹೋಗುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.