ಬಿಜೆಪಿಯವರು ನಮ್ಮ ಪ್ರಶ್ನೆಗೆ ಉತ್ತರ ನೀಡದಿದ್ದರೂ ನಿಮ್ಮದೇ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ ಕೊಡಬೇಕು, ಮಂತ್ರಿ ಸ್ಥಾನಕ್ಕೆ 100 ಕೋಟಿ ಕೊಡಬೇಕು. ಕೋವಿಡ್ ಸಮಯದ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗಿದೆ. ಮಾರಿಷಸ್ ಖಾತೆಗೆ 10 ಸಾವಿರ ಕೋಟಿ ಹೋಗಿದೆ ಎಂದು ಹೇಳಿದರಲ್ಲಾ. ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಉತ್ತರ ನೀಡುತ್ತಿಲ್ಲ?: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ರಾಮನಗರ(ಆ.04): ನಮ್ಮ ಪಕ್ಷದ ಒಬ್ಬ ಶಾಸಕನನ್ನು ಅಲ್ಲಾಡಿಸಲು ನಿಮ್ಮಿಂದ ಸಾಧ್ಯವಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವನ್ನು ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಇದು ನಿಮ್ಮ ಭ್ರಮೆ, ತಿರುಕನ ಕನಸು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದರು.
ನಗರದ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧದ 2ನೇ ದಿನದ ಜನಾಂದೋಲನ ಉದ್ಘಾಟಿಸಿದ ಅವರು, ನವೆಂಬರ್, ಡಿಸೆಂಬರ್ ವೇಳೆಗೆ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಈ ಸರ್ಕಾರ ಒಡೆದು ಹೋಗಲು ಮಡಕೆಯೇ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯನವರು ಯಾವುದೇ ಸಮಯದಲ್ಲಿ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು: ಸಂಸದ ಶೆಟ್ಟರ್
ನನ್ನನ್ನು ಜೈಲಿಗೆ ಹಾಕಲು ಮಿಲಿಟರಿ ಬಂದು ಕರೆದುಕೊಂಡು ಹೋಗಲಿದೆ ಎಂದು ಕುಮಾರಸ್ವಾಮಿ ಹಿಂದೆ ಹೇಳಿಕೆ ನೀಡಿದ್ದರು. ನಾನು ಕೇಂದ್ರ ಮಂತ್ರಿಯಾಗಿದ್ದು, ನಿಮ್ಮನ್ನು ತಿಹಾರ್ ಜೈಲಿಗೆ ಕಳಿಸುತ್ತೇನೆ ಎಂಬ ಅರ್ಥದಲ್ಲಿ ಆ ಮಾತು ಹೇಳಿದ್ದರು. ಮಿಸ್ಟರ್ ಕುಮಾರಸ್ವಾಮಿ, ನಾನು ತಿಹಾರ್ ಜೈಲನ್ನೂ ನೋಡಿ ಆಗಿದೆ, ನೀವು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹಾಕಿರುವ ಕೇಸ್ ಗಳನ್ನು ನೋಡಿ ಆಯಿತು. ಇದಾದ ನಂತರವೇ ಜನ ಈ ಡಿ.ಕೆ.ಶಿವಕುಮಾರ್ ನಾಯಕತ್ವಕ್ಕೆ 135 ಸೀಟುಗಳನ್ನು ಕೊಟ್ಟು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ನಿನ್ನ ನಾಯಕತ್ವಕ್ಕೆ ಜನರು ಕೇವಲ 19 ಸೀಟು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ:
ಈ ರಾಜ್ಯದಲ್ಲಿ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ನನ್ನ ವಿರುದ್ಧ ಯಾರು ಎಷ್ಟಾದರೂ ಟೀಕೆ ಮಾಡಲಿ, ನನ್ನ ಪ್ರಶ್ನೆಗೆ ಉತ್ತರ ನೀಡಲಿ. ಈ ಜಿಲ್ಲೆಯ ಜನ ನನಗೆ, ಇಕ್ಬಾಲ್ ಹುಸೇನ್, ಬಾಲಕೃಷ್ಣ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಚನ್ನಪಟ್ಟದ ವಿಚಾರ ನಾಳೆ ಮಾತನಾಡುತ್ತೇನೆ. ಬಿಜೆಪಿ ಪಾದಯಾತ್ರೆ ಸಾಗುತ್ತಿರುವ ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರುವರೆಗೂ ಕಾಂಗ್ರೆಸ್ ಶಾಸಕರೇ ಇದ್ದಾರೆ. ನಿನ್ನೆವರೆಗೂ ಪಾದಯಾತ್ರೆ ವಿಚಾರದಲ್ಲಿ ಕೇವಲ ಬಿಜೆಪಿ ಬಾವುಟವಿತ್ತು. ನಾನು ಹಾಗೂ ಪರಮೇಶ್ವರ್ ಅವರು ಪ್ರಶ್ನೆ ಮಾಡಿದ ತಕ್ಷಣ ರಾತ್ರೋರಾತ್ರಿ ಪಾದಯಾತ್ರೆಗೆ ಜೆಡಿಎಸ್ ಬಾವುಟ ಬಂದಿದೆ ಎಂದು ತಿಳಿಸಿದರು.
ಅವರದ್ದು ಬೆಳಗ್ಗೆ ಒಂದು ಮಾತು, ಸಂಜೆ ಒಂದು ಮಾತು. ಅವರದು ಕೇವಲ ಹಿಟ್ ಅಂಡ್ ರನ್ ಮಾಡುವುದಷ್ಟೇ ಕೆಲಸ. ಬಿಜೆಪಿ ನಾಯಕರು ತಮ್ಮ ಮೈಸೂರು ಘಟಕದಿಂದ ಕುಮಾರಸ್ವಾಮಿರವರ ಭೂ ಅಕ್ರಮ ಕುರಿತು ನೀಡಿರುವ ಜಾಹೀರಾತು, ಶಾಸಕ ಯತ್ನಾಳ್ ಅವರು ಮಾಡಿರುವ ಆರೋಪ, ಪಿಎಸ್ಐ ಹಗರಣದ ಬಗ್ಗೆ ಉತ್ತರ ನೀಡಲಿ. ಆಮೇಲೆ ಪಾದಯಾತ್ರೆ ಮಾಡಲಿ. ಭ್ರಷ್ಟಾಚಾರವೇ ನಿಮ್ಮ, ತಾಯಿ ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ, ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಮೆಚ್ಚನಾ ಪರಮಾತ್ಮನು ಎಂದು ಬಿಜೆಪಿ - ಜೆಡಿಎಸ್ ನಾಯಕರನ್ನು ಡಿ.ಕೆ.ಶಿವಕುಮಾರ್ ಕುಟುಕಿದರು. ಯತ್ನಾಳ್ ಆರೋಪಕ್ಕೆ ಉತ್ತರ ನೀಡಲಿ:
ಬಿಜೆಪಿಯವರು ನಮ್ಮ ಪ್ರಶ್ನೆಗೆ ಉತ್ತರ ನೀಡದಿದ್ದರೂ ನಿಮ್ಮದೇ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ ಕೊಡಬೇಕು, ಮಂತ್ರಿ ಸ್ಥಾನಕ್ಕೆ 100 ಕೋಟಿ ಕೊಡಬೇಕು. ಕೋವಿಡ್ ಸಮಯದ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗಿದೆ. ಮಾರಿಷಸ್ ಖಾತೆಗೆ 10 ಸಾವಿರ ಕೋಟಿ ಹೋಗಿದೆ ಎಂದು ಹೇಳಿದರಲ್ಲಾ. ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ, ಉತ್ತರ ನೀಡುತ್ತಿಲ್ಲ? ವಿಜಯೇಂದ್ರ, ಐಟಿ ಅಧಿಕಾರಿಗಳು ನಿಮ್ಮ ಮನೆ, ನಿಮ್ಮ ಆಪ್ತರ ಮನೆ ಮೇಲೆ ದಾಳಿ ಮಾಡಿ ದಾಖಲೆ ತೆಗೆದುಕೊಂಡು ಹೋದರಲ್ಲ ಅವು ಏನಾದವು? ಇದು ಯಾಕಾಯ್ತು? ವಿಜಯೇಂದ್ರ ಅವರೇ ನೀವು ಪಾದಯಾತ್ರೆ ಮಾಡುವ ಮುನ್ನ ನಿಮ್ಮ ಪಕ್ಷದವರೇ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ನೀವು ಯಾವುದೇ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಿ.ಚಿದಂಬರಂ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲರ ಮೇಲೂ ಪ್ರಕರಣ ದಾಖಲಿಸುತ್ತಿದ್ದೀರಿ. ನೀವು ಒಂದು ಮಾತು ನೆನಪಿನಲ್ಲಿ ಇಟ್ಟುಕೊಳ್ಳಿ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ ಕೊಟ್ಟಿರುವ ಇತಿಹಾಸವಿದೆ. ಈ ದೇಶದಲ್ಲಿ ಮತ್ತೆ ಕಾಂಗ್ರೆಸ್ ಶಕ್ತಿ ಉದಯಿಸಲಿದೆ ಎಂದು ತಿಳಿಸಿದರು.
ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುತ್ತಿದ್ದಾರೆ:
ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಗಾಜಿನಮನೆಯಲ್ಲಿದ್ದುಕೊಂಡು ಬೇರೆಯವರ ಮನೆಗೆ ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹರು ಬಿಜೆಪಿಯವರೇ ಹೊರತು, ಕಾಂಗ್ರೆಸ್ ಪಕ್ಷದವರಲ್ಲ. ಪಿಎಸ್ಐ ಹಗರಣ ಆದಾಗ ಮುಖ್ಯಮಂತ್ರಿಗಳು, ಗೃಹಮಂತ್ರಿಗಳಾಗಿದ್ದವರು ಯಾರು? ಈ ಹಗರಣ ನಡೆದಿದ್ದು , ಯುವಕರ ಭವಿಷ್ಯ ನಾಶವಾಗಿದ್ದು ಸತ್ಯವಲ್ಲವೇ. ನಮ್ಮ ಜಿಲ್ಲೆಯ ಮೂವರು ಯವಕರು ಕೂಡ ಈ ಹಗರಣಕ್ಕೆ ಸಿಲುಕಿದ್ದು ಸತ್ಯವಲ್ಲವೇ? ಆಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದವರು ಗಂಡಸು ಯಾರು ಅಂತ ಗೊತ್ತಿಲ್ಲವೇ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವಿರುದ್ಧ ಕಿಡಿಕಾರಿದರು.
ಎಂಡಿಎ, ವಾಲ್ಮೀಕಿ ಹಗರಣ ತಾರ್ಕಿಕ ಅಂತ್ಯಕ್ಕಾಗಿ ಪಾದಯಾತ್ರೆ: ನಿಖಿಲ್ ಕುಮಾರಸ್ವಾಮಿ
ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವವರು, ಪಿಎಸ್ಐ ಹಗರಣವಾದಾಗ, ಯುವಕರಿಗೆ ಅನ್ಯಾಯವಾದಾಗ ಸಚಿವರಿಂದ ರಾಜೀನಾಮೆ ಏಕೆ ಪಡೆಯಲಿಲ್ಲ. ಆಗಿನ ಗೃಹ ಸಚಿವರು, ಮುಖ್ಯಮಂತ್ರಿಗಳು ಏಕೆ ರಾಜೀನಾಮೆ ನೀಡಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿ ವಾಗ್ದಾಳಿ ನಡೆಸಿದರು.
ಕೃಷಿ ಸಚಿವ ಚಲುವರಾಯಸ್ವಾಮಿ, ವಸತಿ ಸಚಿವ ಜಮೀರ್ ಅಹಮದ್ ಖಾನ್ , ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪೌರಾಡಳಿತ ಸಚಿವ ರಹೀಂ ಖಾನ್, ಉನ್ನತ ಶಿಕ್ಷಣ ಸಚಿವ ಸುಧಾಕರ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ , ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಶಾಸಕರಾದ ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ರಿಜ್ವಾನ್ ಹರ್ಷದ್, ಪುಟ್ಟಣ್ಣ, ಶಿವಣ್ಢ, ರವಿ, ಅನಿಲ್ ಕುಮಾರ್, ಕೊತ್ನೂರು ಮಂಜುನಾಥ್, ರಾಮೋಜಿಗೌಡ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ , ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಉಪಸ್ಥಿತರಿದ್ದರು.