ಮೋದಿಗೆ ರಾಜ್ಯ ಕಾಂಗ್ರೆಸ್‌ ಸಪ್ತ ಪ್ರಶ್ನೆ: ಉತ್ತರಿಸ್ತಾರಾ ಪಿಎಂ?

By Web DeskFirst Published Feb 11, 2019, 8:28 AM IST
Highlights

ಶಾಸಕರಿಗೆ ಆಮಿಷವೊಡ್ಡಲು ಬಿಜೆಪಿಗರಿಗೆ ಹಣ ಎಲ್ಲಿಂದ ಬರುತ್ತಿದೆ?| ಜಡ್ಜ್‌ಗಳ ಮೇಲೆ ನಿಮಗೆ ನಿಯಂತ್ರಣವಿದೆ ಎಂದು ಒಪ್ಪಿಕೊಳ್ಳುತ್ತೀರಾ?| ಇದಕ್ಕೆಲ್ಲ ಮೋದಿಯೇ ಉತ್ತರಿಸಲಿ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌

ಬೆಂಗಳೂರು[ಫೆ.11]: ಆಪರೇಷನ್‌ ಕಮಲ ನಡೆಸಲು ಕಾಂಗ್ರೆಸ್‌, ಜೆಡಿಎಸ್‌ನ ಇಪ್ಪತ್ತೈದರಿಂದ ಮೂವತ್ತು ಶಾಸಕರಿಗೆ ಆಮಿಷವೊಡ್ಡಲು ಬೇಕಾದ ಸುಮಾರು 200 ಕೋಟಿ ರು. ಹಣ ರಾಜ್ಯ ಬಿಜೆಪಿ ನಾಯಕರಿಗೆ ಎಲ್ಲಿಂದ ಬರುತ್ತಿದೆ ಎಂಬುದೂ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಏಳು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಕಾಂಗ್ರೆಸ್‌ ಆಗ್ರಹಿಸಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಬಿಡುಗಡೆ ಮಾಡಿದರು.

1. ‘ನ ಖಾವೂಂಗಾ, ನ ಖಾನೇದೂಂಗಾ’ ಎಂದು ಘೋಷಿಸಿ ಭ್ರಷ್ಟಾಚಾರ ಮಾಡುವುದಿಲ್ಲ, ಮಾಡುವವರಿಗೂ ಬಿಡಲ್ಲ ಎಂಬುದಾಗಿ ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್‌, ಜೆಡಿಎಸ್‌ನ ಇಪ್ಪತ್ತೈದರಿಂದ ಮೂವತ್ತು ಶಾಸಕರಿಗೆ ತಲಾ 10 ಕೋಟಿ ರು. ಹಣ, ಜೊತೆಗೆ ಮಂತ್ರಿ ಸ್ಥಾನ ಹಾಗೂ ಮುಂದಿನ ಚುನಾವಣಾ ಖರ್ಚು ಭರಿಸುವ ಆಮಿಷ ಒಡ್ಡಿದ್ದಾರೆ. ಯಡಿಯೂರಪ್ಪ ಒಡ್ಡಿರುವ ಆಮಿಷದ ಸಂಭಾಷಣೆಯ ಲೆಕ್ಕಾಚಾರ ಪ್ರಕಾರ ಇದಕ್ಕೆಲ್ಲಾ ಒಟ್ಟು 200 ಕೋಟಿ ರು.ಗಳಿಗೂ ಹೆಚ್ಚು ಹಣ ಬೇಕಾಗುತ್ತದೆ. ಅಷ್ಟೊಂದು ಹಣ ರಾಜ್ಯ ಬಿಜೆಪಿ ನಾಯಕರಿಗೆ ಎಲ್ಲಿಂದ ಬರುತ್ತಿದೆ? ನೇರವಾಗಿ ಕೇಂದ್ರ ಸರ್ಕಾರದಿಂದ ಹಣ ಬರುತ್ತಿದೆಯಾ? ಉದ್ಯಮಿಗಳಿಂದ ಬರುತ್ತಿದೆಯಾ ಅಥವಾ ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಹರಿಯಾಣ ಇಲ್ಲವೇ ಯಾವ ರಾಜ್ಯದಿಂದ ಬರುತ್ತಿದೆ?

2. ಆಮಿಷ ಒಡ್ಡಿರುವ ಸಂಭಾಷಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನ್ಯಾಯಾಂಗದ ಮೇಲೆ ಪ್ರಧಾನಿ ನಿಯಂತ್ರಣ ಹೊಂದಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದನ್ನು ನೀವು ಖಂಡಿಸುವ ಕೆಲಸವನ್ನೂ ಮಾಡಿಲ್ಲ, ಹಾಗಾಗಿ ಈ ಅಂಶವನ್ನು ನಿಜವೆಂದು ಒಪ್ಪಿಕೊಳ್ಳುತ್ತೀರಾ?

3. ಕಳೆದ ಎರಡು ವರ್ಷಗಳಿಂದ ನರೇಗಾ ಯೋಜನೆಯಡಿ ರಾಜ್ಯಕ್ಕೆ ನೀಡಬೇಕಿರುವ 2000 ಕೋಟಿ ರು. ಅನುದಾನವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡು ಬರುತ್ತಿದೆ. ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರಕ್ಕೆ 4,714 ಕೋಟಿ ರು. ಬರ ಪರಿಹಾರ ನೀಡಿದ್ದೀರಿ. ಆದರೆ, ಸಂಪೂರ್ಣ ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆ 9,434 ಕೋಟಿ ರು. ಪರಿಹಾರ ನೀಡುವಂತೆ ಬೇಡಿಕೆ ಇಟ್ಟರೆ ಕೇವಲ 900 ಕೋಟಿ ರು. ನೀಡಿದ್ದೀರಿ. ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಈ ರೀತಿ ಮಲತಾಯಿ ಧೊರಣೆ ಅನುಸರಿಸುತ್ತಿರುವುದು ಏಕೆ?

4. ಸ್ನೇಹಿತ ಉದ್ಯಮಿ ಅನಿಲ್‌ ಅಂಬಾನಿಗೆ ರಫೇಲ್‌ ಗುತ್ತಿಗೆ ನೀಡಲು ಎಚ್‌ಎಎಲ್‌ ನಿರ್ಲಕ್ಷಿಸಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ?

5. ನಿಮ್ಮ ಸ್ವಾರ್ಥ ನಿರ್ಧಾರದಿಂದ ರಾಜ್ಯದ ಜನರಿಗೆ ಆದ ಉದ್ಯೋಗ ನಷ್ಟವನ್ನು ಹೇಗೆ ವಿವರಿಸುವಿರಿ?

6. ಧಾರವಾಡ ಐಐಟಿ ಸ್ಥಾಪನೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರ 500 ಎಕರೆ ಜಮೀನನ್ನು ಉಚಿತವಾಗಿ ಮಂಜೂರು ಮಾಡಿತ್ತು. ಆದರೆ, ಇದ್ಯಾವುದನ್ನೂ ಪರಿಗಣಿಸದೆ ಐಐಟಿ ಕೇವಲ ಕೇಂದ್ರ ಸರ್ಕಾರದ ಕೊಡುಗೆ ಎಂದು ಬಿಂಬಿಸುತ್ತಿರುವುದು ಎಷ್ಟುಸರಿ?

7. ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿರುವ ಹಂಪಿ ಅಭಿವೃದ್ಧಿಗೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ?

ಈ ಎಲ್ಲ ಪ್ರಶ್ನೆಗಳಿಗೂ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ಸಚಿವರು ಉತ್ತರ ನೀಡಬೇಕು ಎಂದು ದಿನೇಶ್‌ ಗುಂಡೂರಾವ್‌ ಆಗ್ರಹಿಸಿದರು.

ಈಗಲೂ ನಮ್ಮ ಅತೃಪ್ತ ಶಾಸಕರ ಬಗ್ಗೆ ನೋವಿದೆ. ಅವರು ಬಿಜೆಪಿಯ ಷಡ್ಯಂತ್ರಕ್ಕೆ ಬಲಿಯಾಗಿ ತಮ್ಮ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಆಮಿಷಗಳಿಗೆ ಬಲಿಯಾಗದೆ ವಾಪಸ್‌ ಬರಬೇಕು ಎಂದು ಮನವಿ ಮಾಡುತ್ತೇನೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

click me!