ಸಿದ್ದುಗೆ ಕ್ಷೇತ್ರ ಇಲ್ಲ ಎಂದ ಪ್ರತಾಪ್‌ಗೇ ಈಗ ಟಿಕೆಟಿಲ್ಲ: ಕಾಂಗ್ರೆಸ್‌

By Kannadaprabha NewsFirst Published Mar 15, 2024, 11:20 PM IST
Highlights

ಪ್ರತಾಪ್‌ ಸಿಂಹ ಕಳೆದ ವಿಧಾನಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಅಂತ ಟೀಕೆ ಮಾಡಿದ್ದರು. ಈಗ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತಿದೆ. ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಚಾಮುಂಡೇಶ್ವರಿ ತಾಯಿ ಅವರಿಗೆ ಸದ್ಬುದ್ಧಿ ಕೊಡಲಿ ಎಂದ ಸಚಿವ ಬೈರತಿ ಸುರೇಶ್‌ 

ಬೆಂಗಳೂರು(ಮಾ.15):  ‘ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಅಂತ ಟೀಕಿಸಿದ್ದ ಸಂಸದ ಪ್ರತಾಪ್‌ ಸಿಂಹಗೆ ಈಗ ಅವರ ಪಕ್ಷವೇ ಟಿಕೆಟ್‌ ಕೊಡದಿರುವುದು ನೋಡಿ ಅಯ್ಯೋ ಅನಿಸುತ್ತೆ. ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರೆ ತಮಗೆ ಏನೋ ಸಿಗುತ್ತೆ ಎಂದುಕೊಂಡಿದ್ದ ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಅಧಿಕಾರ ಇದ್ದಾಗ ಹಿಗ್ಗಬಾರದು ಅನ್ನೋದನ್ನು ಇನ್ನಾದರೂ ಕಲಿಯಲಿ.’ ಹೀಗೆ ಲೋಕಸಭಾ ಚುನಾವಣೆಗೆ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಬಿಜೆಪಿ ಟಿಕೆಟ್‌ ದೊರೆಯದಿರುವುದಕ್ಕೆ ರಾಜ್ಯ ಸರ್ಕಾರದ ವಿವಿಧ ಸಚಿವ, ಶಾಸಕರು ಟೀಕೆ, ವ್ಯಂಗ್ಯದ ಮಾತುಗಳಿಂದ ತಿವಿದಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಪ್ರತಾಪ್‌ ಸಿಂಹ ಕಳೆದ ವಿಧಾನಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಅಂತ ಟೀಕೆ ಮಾಡಿದ್ದರು. ಈಗ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತಿದೆ. ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಚಾಮುಂಡೇಶ್ವರಿ ತಾಯಿ ಅವರಿಗೆ ಸದ್ಬುದ್ಧಿ ಕೊಡಲಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡಂಕಿ ದಾಟಲ್ಲ: ಸಂಸದ ಎಸ್.ಮುನಿಸ್ವಾಮಿ

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಬೈದರೆ ತಮಗೆ ಏನೋ ಸಿಕ್ಕಿಬಿಡುತ್ತದೆ ಎನ್ನುವ ಭಾವನೆ ಪ್ರತಾಪ ಸಿಂಹ ಅವರಿಗಿತ್ತು. ಕೊನೆಗೆ ಟಿಕೆಟ್ಟೂ ಸಿಗಲಿಲ್ಲ. ಹೀಗಾಗಬಾರದಿತ್ತು. ಅವರಿಗೆ ಟಿಕೆಟ್‌ ಸಿಗದಿರುವುದಕ್ಕೆ ಬಹಳ ಬೇಸರವಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಸತ್‌ನಲ್ಲಿ ಹೊಗೆ ಬಾಂಬ್‌ ಹಾಕಿದವರಿಗೆ ಪ್ರತಾಪ್‌ ಸಿಂಹ ಅವರ ಕಚೇರಿಯಿಂದಲೇ ಪಾಸ್‌ ಕೊಡಿಸಿದ್ದರು. ನಮ್ಮ ಸರ್ಕಾರದ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಅಂತ ಟೀಕಿಸಿದ್ದರು. ರಾಜ್ಯ ಸರ್ಕಾರವನ್ನು ಉದ್ದೇಶಪೂರ್ವಕವಾಗಿಯೇ ಟೀಕೆ ಮಾಡುತ್ತಿದ್ದರು. ಆದರೆ, ಯಾವ ಕಾರಣಕ್ಕೆ ಅವರಿಗೆ ಟಿಕೆಟ್‌ ಕೊಟ್ಟಿಲ್ಲ ಅಂತ ಗೊತ್ತಿಲ್ಲ. ಮೈಸೂರಿನಲ್ಲಿ ಪಕ್ಷಕ್ಕೆ ದುಡಿದವರು ಸಾಕಷ್ಟು ಮಂದಿ ಇದ್ದರು. ಅವರನ್ನೆಲ್ಲಾ ಬಿಟ್ಟು ರಾಜವಂಶಸ್ಥರನ್ನು ಕರೆತಂದಿರುವುದು ಬಿಜೆಪಿಯ ದಿವಾಳಿತನವನ್ನು ತೋರುತ್ತದೆ ಎಂದು ಟೀಕಿಸಿದರು.

click me!