
ಬೆಂಗಳೂರು(ಮೇ.14): ಎಂಬಿಪಾಟೀಲ್, ಸಚಿವ ಅಶ್ವತ್‌್ಥ ನಾರಾಯಣ್ ಭೇಟಿಯಾಗಿದ್ದರು ಎಂದು ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ನ ಕಿರಿಯ ನಾಯಕರು ಟ್ವೀಟ್‌ವಾರ್ ಮುಂದುವರೆದಿದ್ದು ಮಾಜಿ ಸಂಸದೆ ರಮ್ಯಾ ಬಗ್ಗೆ ಟೀಕಿಸಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧ ಕೆಪಿಸಿಸಿ ವಕ್ತಾರ ನಟರಾಜಗೌಡ ಹಾಗೂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಕಿಡಿ ಕಾರಿದ್ದಾರೆ. ಮತ್ತೊಂದೆಡೆ ಎಂ.ಬಿ. ಪಾಟೀಲ್ ಹಾಗೂ ಡಿ.ಕೆ. ಶಿವಕುಮಾರ್ ಒಗ್ಗಟ್ಟು ಪ್ರದರ್ಶಿಸಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರು ಬುದ್ಧಿವಾದ ಹೇಳಿರುವುದು ಕಾರಣ ಎಂಬರ್ಥದಲ್ಲಿ ರಮ್ಯಾ ಅವರು ಟ್ವೀಟ್ ಮಾಡಿರುವುದು ಕುತೂಹಲಕರವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರು ರಾಯಪುರದ ಎಐಸಿಸಿ ಸಂಕಲ್ಪ ಶಿಬಿರದಲ್ಲಿ ತಬ್ಬಿಕೊಂಡು ಒಗ್ಗಟು ಪ್ರದರ್ಶಿಸಿದ್ದರು. ಈ ಫೋಟೋ ಟ್ವೀಟರ್‌ನಲ್ಲಿ ಪ್ರಕಟಿಸಿ, ಕಾಂಗ್ರೆಸ್ ನಾಯಕ ಕೆ.ಬಿ. ಬೈಜು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಅವರಿಗೆ ‘ಉತ್ತಮವಾಗಿ ಕೆಲಸ ಮಾಡಿದ್ದೀರಿ’ ಎಂದು ರಮ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟಿ ರಮ್ಯಾ ಟ್ವೀಟ್‌ನಿಂದ ಒಡೆದ ಮನೆಯಾದ ಕಾಂಗ್ರೆಸ್!
ಮುಂದುವರೆದ ಟ್ವೀಟ್ ವಾರ್:
ಇನ್ನು ರಾಜ್ಯ ಮಟ್ಟದಲ್ಲಿ ಯುವ ನಾಯಕರ ನಡುವೆ ವಿವಾದದ ಕುರಿತ ವಾಗ್ಯುದ್ಧ ಮುಂದುವರೆದಿದೆ. ರಮ್ಯಾ ಅವರನ್ನು ಟೀಕಿಸಿರುವ ಮೊಹಮ್ಮದ್ ನಲಪಾಡ್ ಹೇಳಿಕೆ ಉದ್ದೇಶಿಸಿ ಟ್ವೀಟ್ ಮಾಡಿರುವ ರಕ್ಷಾ ರಾಮಯ್ಯ, ಪಕ್ಷದ ಆಂತರಿಕ ವಿಷಯ ಅಥವಾ ಪಕ್ಷದ ಹಿರಿಯ ನಾಯಕರ ಹೇಳಿಕೆಗಳನ್ನು ಕಿರಿಯರಾದ ನಾವು ವಿಮರ್ಶೆ ಮಾಡುವುದಾಗಲಿ, ಬೇರೆ ರೀತಿ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ನನ್ನ ಯುವ ಕಾಂಗ್ರೆಸ್‌ನ ಸ್ನೇಹಿತ ಇದನ್ನ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಮ್ಯಾ ಕರ್ನಾಟಕದ ಹೆಮ್ಮೆ:
ಇನ್ನು ಕೆಪಿಸಿಸಿ ವಕ್ತಾರ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಮುಖ್ಯಸ್ಥ ನಟರಾಜ್ ಗೌಡ, ರಮ್ಯಾ ಅವರನ್ನು ಟ್ರೋಲ್ ಮಾಡಲು ಪ್ರಚೋದಿಸಿದ್ದ ಬಿ.ಆರ್. ನಾಯ್ಡು ವಿರುದ್ಧ ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಪ್ರಖ್ಯಾತ ಬಹುಭಾಷಾ ಚಿತ್ರನಟಿ, ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಅಧ್ಯಕ್ಷೆ ರಮ್ಯಾ ಅವರು ಕರ್ನಾಟಕದ ಹೆಮ್ಮೆ. ಇವರನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್‌ಗಳನ್ನು ಮಾಡುತ್ತಿರುವುದು ಸರಿಯಲ್ಲ. ಬಿ.ಆರ್. ನಾಯ್ಡು ಅವರೇ ನಿಮ್ಮ ಹೋರಾಟ ಬಿಜೆಪಿಯ ಮೇಲಿರಲಿ ಎಂದಿದ್ದಾರೆ.
ನನ್ನ ಬೆನ್ನಿಗೆ ಚೂರಿ ಹಾಕಿದ್ದು ಡಿಕೆಶಿ, ರಮ್ಯಾ ವಾಗ್ದಾಳಿ
ನಟಿ ರಮ್ಯಾ ಮತ್ತೆ ಮಂಡ್ಯ ರಾಜಕೀಯಕ್ಕೆ ಬರುತ್ತಾರಾ?
ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಮಿಂಚಿನಂತೆ ಪ್ರತ್ಯಕ್ಷವಾಗಿ ಮಾಯವಾಗಿದ್ದ ಮಾಜಿ ಸಂಸದೆ ರಮ್ಯಾ ಅವರನ್ನು ಮತ್ತೆ ಜಿಲ್ಲಾ ರಾಜಕಾರಣಕ್ಕೆ ಕರೆತರುವ ಪ್ರಯತ್ನಗಳು ಕಾಂಗ್ರೆಸ್ ಪಾಳಯದೊಳಗೆ ಒಳಗಿಂದೊಳಗೆ ನಡೆಯುತ್ತಿವೆಯೇ ಎಂಬ ಅನುಮಾನಗಳು ಮೂಡಲಾರಂಭಿಸಿವೆ. ಸಂಸದೆ ಸುಮಲತಾಗೆ ಪ್ರತಿಸ್ಪರ್ಧಿಯಾಗಿ ಮಾಜಿ ಸಂಸದೆ ರಮ್ಯಾ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿವೆ. ಇಷ್ಟುವರ್ಷ ರಾಜಕೀಯವಾಗಿ ಮಾತನಾಡದೆ ಮೌನವಾಗಿದ್ದ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ.ಪಾಟೀಲ್ ಮತ್ತು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭೇಟಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸುವುದರೊಂದಿಗೆ ವಿಭಿನ್ನ ರೀತಿಯಲ್ಲಿ ರಾಜಕಾರಣದ ಸೆಕೆಂಡ್ ಇನ್ನಿಂಗ್‌್ಸ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಕಾಂಗ್ರೆಸ್‌ನೊಳಗೆ ಮೂಲೆಗುಂಪಾಗಿದ್ದ ರಮ್ಯಾ ಇದೀಗ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವ ಪ್ರಯತ್ನಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.