ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಮೆ.13): ಕರ್ನಾಟಕ (Karnataka) ಮಹಾರಾಷ್ಟ್ರ (Maharashtra) ಗಡಿ ವಿವಾದ (border issues) ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಮಧ್ಯೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ದಿನಕ್ಕೊಂದು ಪುಂಡಾಟಿಕೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದರೂ ಕರ್ನಾಟಕ ಸರ್ಕಾರ ಈವರೆಗೆ ಗಡಿ ಉಸ್ತುವಾರಿ ಸಚಿವರ ನೇಮಿಸಿಲ್ಲ. ಗಡಿ ಉಸ್ತುವಾರಿ ಸಚಿವರ ನೇಮಕಕ್ಕೆ ಹಿಂದಿನಿಂದಲೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರಕ್ಕೆ ಜನಸಾಮಾನ್ಯರ ಧ್ವನಿ ಮುಟ್ಟಿಸಬೇಕಿದ್ದ ವಿಪಕ್ಷಗಳು ಸಹ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ಇದರ ವಿರುದ್ದ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮಹಾರಾಷ್ಟ್ರ ಸರ್ಕಾರಕ್ಕೆ ಎಂಇಎಸ್ ಮನವಿ: ಕಳೆದ 18 ವರ್ಷಗಳಿಂದ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿ ಸೇರಿ 814 ಕ್ಕೂ ಅಧಿಕ ಹಳ್ಳಿಗಳ ಗಡಿ ವಿವಾದ ಇತ್ಯರ್ಥ ಪಡಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮತ್ತೊಂದೆಡೆ ಕಳೆದ ಹಲವು ದಶಕಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ ಪುಂಡಾಟ ಪ್ರದರ್ಶನ ಮುಂದುವರಿಸುತ್ತಲೇ ಇದೆ. ಅತ್ತ ಮಹಾರಾಷ್ಟ್ರ ಸರ್ಕಾರ ನಾಡದ್ರೋಹಿಗಳಿಗೆ ಸದಾ ಕುಮ್ಮಕ್ಕು ನೀಡುತ್ತಿದೆ.
MRPL RECRUITMENT 2022: ಎಂಜಿನಿಯರ್ ಓದಿರುವವರಿಗೆ ಸುವರ್ಣಾವಕಾಶ
ಮಹಾರಾಷ್ಟ್ರ ಶಿವಸೇನೆ, ಎನ್‌ಸಿಪಿ ನಾಯಕರು ಬೆಳಗಾವಿಗೆ ಬಂದು ವೋಟ್ ಪಾಲಿಟಿಕ್ಸ್ ನಡೆಸುತ್ತಿದ್ದಾರೆ. ಮೊನ್ನೆಯಷ್ಟೇ ಬೆಳಗಾವಿಯಲ್ಲಿ ಎನ್‌ಸಿಪಿ ಮುಖಂಡ ಶರದ್ ಪವಾರ್ ಬೆಳಗಾವಿ ಎಂಇಎಸ್ ಮುಖಂಡರ ಜೊತೆಗೆ ಗೌಪ್ಯ ಸಭೆ ನಡೆಸಿದ್ದರು. ಈ ವೇಳೆ ಶರದ್ ಪವಾರ್‌ಗೆ ಬೆಳಗಾವಿ ಎಂಇಎಸ್ ಮುಖಂಡರು ಮನವಿಯೊಂದನ್ನು ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಕ್ಯಾಬಿನೆಟ್‌ನಲ್ಲಿ ಈಗಾಗಲೇ ಇಬ್ಬರು ಗಡಿ ಉಸ್ತುವಾರಿ ಮಂತ್ರಿ ಇದ್ದು, ಬೆಳಗಾವಿಗೆ ಹತ್ತಿರ ಇರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ಕ್ಷೇತ್ರದ ಶಾಸಕ ಹಾಗೂ ಹಾಲಿ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್‌ರನ್ನು ಗಡಿ ಉಸ್ತುವಾರಿಯಾಗಿ ನೇಮಿಸುವಂತೆ ಮನವಿ ಮಾಡಿದ್ದಾರೆ.
ಜಯಂತ ಪಾಟೀಲ್ ಕ್ಷೇತ್ರ ಬೆಳಗಾವಿಗೆ ಹತ್ತಿರವಾಗಿದ್ದು ಅವರನ್ನೇ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ. ಸದ್ಯ ಮಹಾರಾಷ್ಟ್ರದ ಗಡಿ ಸಚಿವರಾಗಿರುವ ಛಗನ್ ಭುಜಬಲ್ ನಾಶಿಕ್ ಕ್ಷೇತ್ರದವರಾಗಿದ್ದು, ಏಕನಾಥ ಶಿಂಧೆ ಥಾಣೆ ಕ್ಷೇತ್ರದವರಿದ್ದಾರೆ. ಅವರನ್ನು ಕಾಲ ಕಾಲಕ್ಕೆ ಹೋಗಿ ಭೇಟಿಯಾಗಲು ತೊಂದರೆ ಆಗುತ್ತೆ ಅಂತಾ ಎಂಇಎಸ್ ಪುಂಡರು ಶರದ್ ಪವಾರ್‌ಗೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಗಡಿವಿವಾದ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಮಾತ್ರ ತುಟಿಬಿಚ್ಚುತ್ತಿಲ್ಲ. ಇದು ಬಿಜೆಪಿ ಸರ್ಕಾರದ ವಿರುದ್ಧ ಸಮಸ್ತ ಬೆಳಗಾವಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸರ್ಕಾರದ ಮೇಲೆ ಒತ್ತಡ ಹೇರಬೇಕಿದ್ದ ವಿಪಕ್ಷಗಳ ನಾಯಕರನ್ನು ಪ್ರಶ್ನಿಸಿದ್ರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಗಡಿ ಉಸ್ತುವಾರಿ ಸಚಿವರ ನೇಮಕ ಮಾಡುತ್ತಿಲ್ಲ ವಿಪಕ್ಷಗಳು ಸಹ ಸರ್ಕಾರ ಮೇಲೆ ಒತ್ತಡ ಹೇರುತ್ತಿಲ್ಲ.
IOCL Recruitment 2022: ವಿವಿಧ ಜೂನಿಯರ್ ಇಂಜಿನಿಯರಿಂಗ್ ಹುದ್ದೆಗಳಿಗೆ ನೇಮಕಾತಿ
ಗಡಿವಿವಾದ ಬಗ್ಗೆ ಪ್ರಸ್ತಾಪಿಸಿದ್ರೆ ನ್ಯಾಯಾಂಗ ನಿಂದನೆ ಆಗುತ್ತಂತೆ: ಇನ್ನು ಗಡಿವಾದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ, 'ಸದ್ಯ ಸುಪ್ರೀಂಕೋರ್ಟ್ ನಲ್ಲಿ ಗಡಿವಿವಾದ ಇರುವುದರಿಂದ ನ್ಯಾಯಾಂಗ ನಿಂದನೆ ಆಗುತ್ತೆ. ಹೀಗಾಗಿ ಗಡಿವಿವಾದ ಬಗ್ಗೆ ಪ್ರತಿಕ್ರಿಯಿಸಲ್ಲ. ಗಡಿ ಉಸ್ತುವಾರಿ ಸಚಿವರ ನೇಮಕಕ್ಕೆ ಆಗ್ರಹ ಕುರಿತು ನಮ್ಮ ಪಕ್ಷದ ಅಧ್ಯಕ್ಷ ಡಿಕೆಶಿ ಜೊತೆ ಮಾತನಾಡುವೆ' ಎಂದಿದ್ದಾರೆ.
ಬೆಳಗಾವಿ ರಾಜಕಾರಣಿಗಳ ವಿರುದ್ಧ ಕರವೇ ಜಿಲ್ಲಾಧ್ಯಕ್ಷ ಆಕ್ರೋಶ: ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹೆಚ್.ಕೆ.ಪಾಟೀಲ್ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿತ್ತು. ತದನಂತರ ಬಂದ ಸಮ್ಮಿಶ್ರ ಸರ್ಕಾರ ಹಾಗೂ ಸದ್ಯದ ಬಿಜೆಪಿ ಸರ್ಕಾರ ಮಾತ್ರ ಗಡಿ ಉಸ್ತುವಾರಿ ಸಚಿವರ ನೇಮಕಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಗಡಿ ವಿವಾದ ವಿಚಾರದಲ್ಲಿ ಮಹಾರಾಷ್ಟ್ರದಂತೆ ಪಕ್ಷಾತೀತವಾಗಿ ಕರ್ನಾಟಕದ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಇದು ಗಡಿ ಜಿಲ್ಲೆಯ ಕನ್ನಡ ಪರ ಸಂಘಟನೆಗಳ ಕಳವಳಕ್ಕೆ ಕಾರಣವಾಗಿದೆ.
ಸದ್ಯ ಸಂಪುಟ ವಿಸ್ತರಣೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು. ಸಂಪುಟ ವಿಸ್ತರಣೆ ಆದ್ರೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಕ್ಯಾಬಿನೆಟ್‌ನಲ್ಲಿ ಗಡಿ ಉಸ್ತುವಾರಿ ಸಚಿವರ ನೇಮಿಸಬೇಕು ಅಂತಾ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಆಗ್ರಹಿಸಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತಮಾಡಿರುವ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, 'ಗಡಿ ಉಸ್ತುವಾರಿ ಸಚಿವರ ನೇಮಕ ಮಾಡಲು ಆಡಳಿತ ಪಕ್ಷ ಮುಂದೆ ಬರುತ್ತಿಲ್ಲ. ಈ ಕುರಿತು ಆಡಳಿತ ಪಕ್ಷಕ್ಕೆ ಆಗ್ರಹಿಸಲು ವಿಪಕ್ಷಗಳು ಹಿಂದೇಟು ಹಾಕ್ತಿವೆ.
ಚುನಾವಣಾ ವರ್ಷ ಹಿನ್ನೆಲೆ ಬೆಳಗಾವಿ ರಾಜಕಾರಣಿಗಳಿಗೆ ಮರಾಠಾ ಮತಗಳು ಮುಖ್ಯವಾಗಿವೆ. ಗಡಿವಿವಾದ ಬಗ್ಗೆ ಮಾತನಾಡಿದ್ರೆ ನ್ಯಾಯಾಂಗ ನಿಂದನೆ ಆಗುತ್ತೆ ಅಂತಾ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹೇಳ್ತಾರೆ. ಮಹಾರಾಷ್ಟ್ರ ನಾಯಕರು ಮಾತನಾಡುವಾಗ ನ್ಯಾಯಾಂಗ ನಿಂದನೆ ಆಗಲ್ವಾ? ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿರುವಂತವರು. ಬೆಳಗಾವಿ ಗಡಿ ವಿವಾದ, ಇಲ್ಲಿಯ ಸಮಸ್ಯೆ ಬಗ್ಗೆ ಅವರಿಗೆ ಅರಿವಿದೆ. ಹೀಗಾಗಿ ಸಂಪುಟ ವಿಸ್ತರಣೆ ಮಾಡಿದ್ರೆ ಗಡಿ ಉಸ್ತುವಾರಿ ಸಚಿವರ ನೇಮಿಸಿ' ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಂದೆಡೆ ನಾಡದ್ರೋಹಿ ಎಂಇಎಸ್ ಪುಂಡಾಟಿಕೆ ಮುಂದುವರಿಸಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಗಡಿ ವಿವಾದದ ವಿಚಾರದಲ್ಲಿ ನಿರ್ಲಕ್ಷ್ಯ ಮನೋಭಾವನೆ ಪ್ರದರ್ಶಿಸುತ್ತಿದೆ ಎನ್ನುವುದಕ್ಕೆ ಗಡಿ ಉಸ್ತುವಾರಿ ಸಚಿವರ ನೇಮಿಸದಿರುವುದು ಜೀವಂತ ಸಾಕ್ಷಿ. ಇನ್ನಾದರೂ ಸರ್ಕಾರ ಗಡಿ ಉಸ್ತುವಾರಿ ಸಚಿವರ ನೇಮಿಸಿ ಗಡಿ ಕನ್ನಡಿಗರ ಪರ ನಾವಿದ್ದೇವೆ ಎಂಬ ಸಂದೇಶ ರವಾನಿಸುತ್ತಾ ಎಂಬುದನ್ನು ಕಾದು ನೋಡಬೇಕು.