ಚುನಾವಣೆಗೆ ಕಾಂಗ್ರೆಸ್‌ ನವ ಸಂಕಲ್ಪ: 150 ಸೀಟು ಗೆಲ್ಲಲು ಪಣ

By Govindaraj S  |  First Published Jun 3, 2022, 3:10 AM IST

ರಾಜ್ಯದಲ್ಲಿ ಶತಾಯಗತಾಯ 150 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಮುಂದಿನ 90ರಿಂದ 180 ದಿನಗಳಲ್ಲಿ ಕೆಪಿಸಿಸಿ, ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ನಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು.


ಬೆಂಗಳೂರು (ಜೂ.03): ರಾಜ್ಯದಲ್ಲಿ ಶತಾಯಗತಾಯ 150 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಮುಂದಿನ 90ರಿಂದ 180 ದಿನಗಳಲ್ಲಿ ಕೆಪಿಸಿಸಿ, ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ನಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು, ಪಕ್ಷದ ಶಿಸ್ತು, ಸಂಘಟನೆಗೆ ಆದ್ಯತೆ ನೀಡುವ ಮೂಲಕ ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಬೇಕು ಎಂದು ರಾಜ್ಯ ಮಟ್ಟದ ನವ ಸಂಕಲ್ಪ ಶಿಬಿರದಲ್ಲಿ ರಾಜ್ಯ ಕಾಂಗ್ರೆಸ್‌ ಸಂಕಲ್ಪ ತೊಟ್ಟಿದೆ.

ಇದೇ ವೇಳೆ ರಾಜ್ಯಸಭೆ, ವಿಧಾನಪರಿಷತ್‌ನಲ್ಲಿ ಟಿಕೆಟ್‌ ತಪ್ಪಿರುವವರು ಸೇರಿದಂತೆ ಯಾರೂ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ. ಪಕ್ಷದ ಆಂತರಿಕ ಚರ್ಚೆಗಳ ಬಗ್ಗೆ ಮಾಧ್ಯಮಗಳಿಗೂ ಹೇಳಿಕೆ ನೀಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಸಭೆ ಮೂಲಕ ರವಾನಿಸಲಾಗಿದೆ. ನಗರ ಹೊರವಲಯದ ರೆಸಾರ್ಚ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ನವ ಸಂಕಲ್ಪ ಶಿಬಿರದ ಮೊದಲ ದಿನವಾದ ಗುರುವಾರ ಪಕ್ಷದಲ್ಲಿನ ಕೊರತೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು 150 ಸ್ಥಾನಗಳಿಂದ ಗೆಲ್ಲಲು ಅಗತ್ಯವಿರುವ ಮಾರ್ಪಾಡುಗಳ ಬಗ್ಗೆ ಚರ್ಚೆ ನಡೆಸಲಾಯಿತು.

Tap to resize

Latest Videos

ಕಾಂಗ್ರೆಸ್‌ನಿಂದ ಹೊರನಡೆದ ಮತ್ತೊಬ್ಬ ನಾಯಕ: ಆಮ್‌ ಆದ್ಮಿಯಾಗ್ತಾರ ಬ್ರಿಜೇಶ್‌ ಕಾಳಪ್ಪ?

ಉದಯಪುರದಲ್ಲಿ ನಡೆದಿದ್ದ ರಾಷ್ಟ್ರ ಮಟ್ಟದ ನವ ಸಂಕಲ್ಪ ಶಿಬಿರದ ನಿರ್ಣಯಗಳನ್ನು ಆಧರಿಸಿ ಗುರುವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ರಾಜ್ಯ ಕಾಂಗ್ರೆಸ್‌ಗೆ ಕೆಲವೊಂದು ಸೂಚನೆಗಳನ್ನು ನೀಡಿದರು. ಇದರ ಆಧಾರದ ಮೇಲೆಯೇ ಅಂತಿಮ ನಿರ್ಣಯಗಳನ್ನು ಮಾಡಲಾಗುವುದು ಎಂದು ಹೇಳಿದರು. ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬರೇ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. 

ಹೀಗಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ 15 ದಿನದಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಪೂರ್ಣಗೊಳ್ಳಬೇಕು. 3 ರಿಂದ 6 ತಿಂಗಳೊಳಗೆ ಪ್ರತಿಯೊಂದು ಸಮಿತಿಗೂ ಪೂರ್ಣ ಪ್ರಮಾಣದಲ್ಲಿ ಪದಾಧಿಕಾರಿಗಳು ನೇಮಕವಾಗಿರಬೇಕು. ಜತೆಗೆ ಎಲ್ಲ ಸಮಿತಿಗಳಲ್ಲೂ ಶೇ.50 ರಷ್ಟುಸ್ಥಾನ 50 ವರ್ಷದೊಳಗಿನವರಿಗೆ ಅವಕಾಶ ನೀಡಬೇಕು. ಸಮನ್ವಯತೆ ಸಾಧಿಸಲು ಬ್ಲಾಕ್‌ ಹಾಗೂ ಗ್ರಾಮ ಸಮಿತಿ ನಡುವೆ ಮಂಡಲ ಸಮಿತಿ ರಚನೆಯಾಗಬೇಕು ಎಂದು ಸೂಚನೆ ನೀಡಿದರು.

ಕ್ಷೇತ್ರವಾರು ಉಸ್ತುವಾರಿಗಳ ನೇಮಕ: ಕೆಪಿಸಿಸಿ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ಕ್ಷೇತ್ರಗಳ ಉಸ್ತುವಾರಿ ನೀಡಲಾಗುವುದು. ಈ ಎಲ್ಲ ವಿಚಾರವಾಗಿ ನಾನು ಚರ್ಚೆ ಮಾಡಿ, ಖುದ್ದು ಮೇಲ್ವಿಚಾರಣೆ ಮಾಡುತ್ತೇನೆ. ಇನ್ನು ಕೆಪಿಸಿಸಿ ಸಭೆ, ಜಿಲ್ಲಾ ಕಾಂಗ್ರೆಸ್‌ ಸಭೆಗಳು ನಡೆಯುತ್ತಿಲ್ಲ. ಹೀಗಾಗಿ ಅಧ್ಯಕ್ಷರು ತಮ್ಮ ಕಾರ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರ ಜತೆಗೂಡಿ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸಭೆ ನಡೆಸಬೇಕು. 6 ತಿಂಗಳಿಗೊಮ್ಮೆ ಕೆಪಿಸಿಸಿ ಸಮಿತಿಯ ಸಭೆ ನಡೆಸಬೇಕು ಎಂದು ಹೇಳಿದರು.

ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ: ಕೆಪಿಸಿಸಿ ಹಾಗೂ ಜಿಲ್ಲಾ ಕಾಂಗ್ರೆಸ್‌ ರಾಜಕೀಯ ವಿಚಾರ ಚರ್ಚೆ ಮಾಡುವುದರ ಜತೆಗೆ ಜನ ಸಾಮಾನ್ಯರು ಹಾಗೂ ನಿರ್ದಿಷ್ಟವರ್ಗದವರನ್ನು ಕಾಡುತ್ತಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು. ಮಹಿಳೆಯರು, ಪರಿಶಿಷ್ಟಜಾತಿ, ಪಂಗಡ, ಅಲ್ಪಸಂಖ್ಯಾತರ ವಿಚಾರಗಳನ್ನು ಚರ್ಚೆ ಮಾಡಲು ಪ್ರತ್ಯೇಕ ಅಧಿವೇಶನ ನಡೆಸಬೇಕು ಎಂದು ಸಲಹೆ ನೀಡಿದರು. ಈ ಸಭೆಯಲ್ಲಿ ಆರ್ಥಿಕತೆ, ಬೆಲೆ ಏರಿಕೆ, ಸಾಮಾಜಿಕ ನ್ಯಾಯ, ಪಕ್ಷದ ಸಂಘಟನೆ, ಕೃಷಿ ಹಾಗೂ ರೈತರು, ಯುವಕರು, ಮಹಿಳೆಯರು, ಶಿಕ್ಷಣ ಹಾಗೂ ಉದ್ಯೋಗ, ಶೈಕ್ಷಣಿಕ ವಿಚಾರವಾಗಿ ಚರ್ಚೆ ನಡೆಸಲು ಸಮಿತಿಗಳನ್ನು ರಚಿಸಲಾಗಿದ್ದು, ಈ ಎಲ್ಲ ಸಮಿತಿಗಳು ಚರ್ಚೆ ನಡೆಸಿದ ನಂತರ ಸಭೆಯ ನಿರ್ಣಯಗಳನ್ನು ಕೈಗೊಳ್ಳಲಾಗುವುದು.

ಈ ನಿರ್ಣಯಗಳು ನಮ್ಮನ್ನು ನಾವು ಪುನರ್‌ ಸಂಘಟಿಸಿಕೊಳ್ಳಲು ಒಂದು ದಾರಿ ದೀಪವಾಗಲಿದೆ. ನವ ಸಂಕಲ್ಪ ಶಿಬಿರ ಮುಂದಿನ ದಿನಗಳಲ್ಲಿ ಎದುರಾಗಲಿರುವ ಚುನಾವಣೆಗಳನ್ನು ಎದುರಿಸಲು ಸೈದ್ಧಾಂತಿಕ, ರಾಜಕೀಯ ಹಾಗೂ ಸಂಘಟನಾತ್ಮಕ ವಿಚಾರವಾಗಿ ಅನೇಕ ಅವಕಾಶ ದಾರಿಗಳನ್ನು ನಮಗೆ ನೀಡಲಿದೆ. ಇಲ್ಲಿ ಚರ್ಚೆಯಾಗುವ ಜನರ ಸಮಸ್ಯೆಗಳು ಜನರ ಮಟ್ಟದಲ್ಲಿ ನಿರಂತರವಾಗಿ ಚರ್ಚೆಯಾಗಬೇಕು ಎಂದರು.

ಡಿಕೆಶಿ, ಸಿದ್ದರಾಮಯ್ಯ ದೂಷಣೆ ಮಾಡಬೇಡಿ: ವಿಧಾನಪರಿಷತ್‌ ಹಾಗೂ ರಾಜ್ಯಸಭೆ ಚುನಾವಣೆಯಲ್ಲಿ ಎಲ್ಲರಿಗೂ ಅವಕಾಶ ನೀಡಲು ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡು ಬಹಿರಂಗವಾಗಿ ಪಕ್ಷದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ರಣದೀಪ್‌ಸಿಂಗ್‌ ಸುರ್ಜೇವಾಲಾ ಪರೋಕ್ಷವಾಗಿ ಅಸಮಾಧಾನಗೊಂಡ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿದರು.ಪಕ್ಷಕ್ಕೆ ಇರುವುದು ಬೆರಳೆಣಿಕೆಯಷ್ಟುಅವಕಾಶ. ಆದರೆ 20ಕ್ಕೂ ಹೆಚ್ಚು ಮಂದಿ ಅರ್ಹ ಆಕಾಂಕ್ಷಿಗಳಿದ್ದರು. 2 ಸ್ಥಾನಗಳ ವಿಧಾನಪರಿಷತ್‌ಗೆ ಎಲ್ಲರಿಗೂ ಟಿಕೆಟ್‌ ನೀಡಲು ಸಾಧ್ಯವೇ? ಪಕ್ಷವನ್ನು ಅಧಿಕಾರಕ್ಕೆ ತಂದರೆ ಆಗ ನಿಮಗೆ ರಾಜ್ಯಸಭೆ, ಪರಿಷತ್‌ಗೆ ಆಯ್ಕೆ ಮಾಡಬಹುದು. ಈ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!

ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಸೂತ್ರ ಅಂತಿಮವಲ್ಲ: ಪಕ್ಷದಲ್ಲಿ ನಾಯಕರ ಕುಟುಂಬಗಳು ಅಥವಾ ಸಂಬಂಧಿಗಳಿಗೆ ಟಿಕೆಟ್‌ ನೀಡುವ ವಿಚಾರವಾಗಿ ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಹಾಗೆಂದ ಮಾತ್ರಕ್ಕೆ ಒಂದು ಕುಟುಂಬದಲ್ಲಿ ಮತ್ತೊಬ್ಬರಿಗೆ ಅವಕಾಶ ನೀಡುವುದೇ ಇಲ್ಲ ಎಂದಲ್ಲ. ಕುಟುಂಬದಲ್ಲಿ ಮತ್ತೊಬ್ಬರೂ ಪಕ್ಷಕ್ಕಾಗಿ 5 ವರ್ಷಗಳ ಕಾಲ ದುಡಿದಿದ್ದರೆ ಅವರಿಗೆ ಅವಕಾಶ ನೀಡಲಾಗುವುದು ಎಂದು ರಣದೀಪ್‌ಸಿಂಗ್‌ ಸುರ್ಜೇವಾಲಾ ತಿಳಿಸಿದರು.

click me!