ಮುಂದಿನ ಸಿಎಂ ವಿಚಾರಕ್ಕೆ ಸುಸ್ತು: ಸುರ್ಜೇವಾಲಾ ಶೀಘ್ರ ಬದಲು?

By Kannadaprabha News  |  First Published Jul 15, 2021, 7:18 AM IST

* 10 ತಿಂಗಳ ಹಿಂದೆ ಉಸ್ತುವಾರಿಯಾದ ಸುರ್ಜೇವಾಲಾ ಉತ್ಸಾಹದಿಂದ ಕೆಲಸ

* ಸುರ್ಜೇವಾಲಾ ಶೀಘ್ರ ಬದಲು? 

* ಮುಂದಿನ ಸಿಎಂ ವಿಚಾರಕ್ಕೆ ಸುಸ್ತು


ಎಸ್‌.ಗಿರೀಶ್‌ಬಾಬು

ಬೆಂಗಳೂರು(ಜು.15): ರಾಜ್ಯ ಕಾಂಗ್ರೆಸ್‌ನ ಬಣ ರಾಜಕಾರಣದ ಬಿಸಿ ಎಷ್ಟರ ಮಟ್ಟಿಗೆ ಇದೆ ಎಂದರೆ ಖುದ್ದು ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ಕರ್ನಾಟಕದ ಸಹವಾಸ ಸಾಕಾಗಿ ಹೋಗಿದೆ! ಹೀಗಾಗಿ, ರಾಜ್ಯದ ಉಸ್ತುವಾರಿಯಿಂದ ಮುಕ್ತಿ ನೀಡುವಂತೆ ಅವರು ಕಾಂಗ್ರೆಸ್‌ ಹೈಕಮಾಂಡ್‌ ಅನ್ನು ಕೋರಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Latest Videos

undefined

ಇದರ ಪರಿಣಾಮ ಬಹು ನಿರೀಕ್ಷೆಯ ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರ ಬದಲಾವಣೆ ಸದ್ಯಕ್ಕೆ ನಡೆಯುವುದಿಲ್ಲ. ಈ ಎಲ್ಲ ಪ್ರಕ್ರಿಯೆಗಳು ಹೊಸ ರಾಜ್ಯ ಉಸ್ತುವಾರಿ ನೇಮಕದ ನಂತರ ನಡೆಯುವ ಸಾಧ್ಯತೆಯೇ ಹೆಚ್ಚು!

ಡಿಕೆಶಿ ಬೆನ್ನಲ್ಲೇ ಸಿದ್ದರಾಮಯ್ಯ ದಿಲ್ಲಿ ಚಲೋ: ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ

ರಾಜ್ಯ ಕಾಂಗ್ರೆಸ್‌ನ ಮದ ಗಜಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಣಗಳನ್ನು ಒಗ್ಗೂಡಿಸುವ ಹೊಣೆ ನಿಭಾಯಿಸಬೇಕಿದ್ದ ಸುರ್ಜೇವಾಲಾ, ಈ ಹೊಣೆ ಕಷ್ಟಸಾಧ್ಯ ಎಂಬ ಕಾರಣಕ್ಕೆ ಕೇವಲ 10 ತಿಂಗಳ ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದರೂ ಈಗಲೇ ರಾಜ್ಯದಿಂದ ಮುಕ್ತಿ ಬಯಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಸುರ್ಜೇವಾಲಾ ಕೋರಿಕೆಗೆ ಹೈಕಮಾಂಡ್‌ ಒಪ್ಪಿಗೆ ನೀಡಿದರೆ, ಅವರು ತಮ್ಮ ಸ್ವಂತ ರಾಜ್ಯವಾದ ಪಂಜಾಬ್‌-ಹರ್ಯಾಣ ಅಥವಾ ಗುಜರಾತ್‌ಗೆ ಉಸ್ತುವಾರಿಯಾಗುವ ಸಾಧ್ಯತೆಯಿದೆ. ಹೀಗಾದಲ್ಲಿ ಕೇರಳ ಮೂಲದ ಕಾಂಗ್ರೆಸ್‌ ನಾಯಕ ರಮೇಶ್‌ ಚೆನ್ನಿತ್ತಲ ಅಥವಾ ತಮಿಳುನಾಡು ಮೂಲದವರಾದ ಹೊಸೂರು ಸಂಸದ ಚೆಲ್ಲಕುಮಾರ್‌ ಅವರು ರಾಜ್ಯಕ್ಕೆ ಉಸ್ತುವಾರಿಯಾಗುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಬಣ ಬಿಸಿಗೆ ಕರಗಿದ ಸುರ್ಜೇವಾಲಾ:

ಈ ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್‌ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ) ಹುದ್ದೆಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಕಳೆದ ವರ್ಷ ಸೆ.15ರಂದು ರಣದೀಪ್‌ ಸುರ್ಜೇವಾಲಾ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡರು. ಆರಂಭದಲ್ಲಿ ತುಸು ಉತ್ಸಾಹ ತೋರಿದ್ದ ಸುರ್ಜೇವಾಲಾ ಹಿರಿಯ ನಾಯಕರ ಸಭೆ, ಯಡಿಯೂರಪ್ಪ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ, ಉಪ ಚುನಾವಣೆ ಪ್ರಚಾರವೆಂದು ರಾಜ್ಯದಲ್ಲಿ ಚುರುಕಿನಿಂದಲೇ ಕಾರ್ಯ ನಿರ್ವಹಿಸಿದರು.

ಕಾಂಗ್ರೆಸ್‌ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ: ಸಿದ್ದರಾಮಯ್ಯ ಬಣಕ್ಕೆ ಪರಂ ಟಾಂಗ್

ಆದರೆ, ಯಾವಾಗ ಮುಂದಿನ ಮುಖ್ಯಮಂತ್ರಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂತೋ ಆ ಸಂದರ್ಭದಿಂದ ಸುರ್ಜೇವಾಲಾ ರಾಜ್ಯದತ್ತ ಸುಳಿಯುವುದನ್ನೇ ಕಡಿಮೆ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣಗಳ ಪೈಪೋಟಿ ಬಿರುಸುಗೊಂಡಾಗ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸಿ ಉಭಯ ಬಣಗಳ ನಡುವೆ ಹೊಂದಾಣಿಕೆಗೆ ಪ್ರಯತ್ನಿಸುತ್ತಾರೆ ಎನ್ನಲಾಗಿತ್ತು. ಜುಲೈ ಮಾಸದಲ್ಲಿ ಎರಡು ಬಾರಿ ಅವರು ರಾಜ್ಯಕ್ಕೆ ಆಗಮಿಸಲು ದಿನ ಕೂಡ ನಿಗದಿಯಾಗಿತ್ತು. ಆದರೆ, ಈ ಬಣ ರಾಜಕಾರಣ ನಿಭಾಯಿಸುವುದು ಸರಳವಲ್ಲ ಎಂಬ ಕಾರಣಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಆಗಮಿಸಲೇ ಇಲ್ಲ ಎನ್ನಲಾಗುತ್ತಿದೆ.

ಕೊರೋನಾ ನಿಯಂತ್ರಣ ಕುರಿತು ಝೂಮ್‌ ಮೀಟಿಂಗ್‌ ನಡೆದಾಗಲೂ ಕೇವಲ ಎರಡು ತಾಸು ಮಾತ್ರ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮೂಲಗಳ ಪ್ರಕಾರ ಬಣ ರಾಜಕಾರಣ ನಿಭಾಯಿಸಲು ಅವರು ನಡೆಸಿದ ಆರಂಭಿಕ ಪ್ರಯತ್ನದಲ್ಲೇ ಈ ಕಾರ್ಯ ಸುಲಭವಲ್ಲ ಎಂಬುದು ಅವರಿಗೆ ಮನದಟ್ಟಾಗಿತ್ತು. ಹೀಗಾಗಿ ಹೈಕಮಾಂಡ್‌ನ ಮೇಲು ಸ್ತರದ ನಾಯಕರೇ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಅವರು ಹೈಕಮಾಂಡ್‌ಗೆ ಸೂಚಿಸಿದ್ದರು ಎನ್ನಲಾಗಿದೆ.

ಬಿಜೆಪಿ ನಾಯಕರಿಂದ ಪ್ರತಿ ಧರ್ಮಕ್ಕೂ ಮೋಸ: ಸುರ್ಜೇವಾಲಾ

ಪದಾಧಿಕಾರಿಗಳ ನೇಮಕ ವಿಳಂಬ

ರಾಜ್ಯ ಉಸ್ತುವಾರಿಯಿಂದ ಸುರ್ಜೇವಾಲಾ ಮುಕ್ತಿ ಬಯಸಿದ್ದರ ಫಲ ರಾಜ್ಯ ಕಾಂಗ್ರೆಸ್‌ಗೆ ಹೊಸ ಪದಾಧಿಕಾರಿಗಳ ನೇಮಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರ ಬದಲಾವಣೆಯೂ ವಿಳಂಬವಾಗುವ ಸಾಧ್ಯತೆಯಿದೆ.

ರಾಜ್ಯಕ್ಕೆ ಹೊಸ ಪದಾಧಿಕಾರಗಳ ನೇಮಕಕ್ಕಾಗಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಪ್ರತ್ಯೇಕ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಸಂಭಾವ್ಯ ಪದಾಧಿಕಾರಿಗಳ ಪಟ್ಟಿಹೈಕಮಾಂಡ್‌ಗೆ ಈಗಾಗಲೇ ತಲುಪಿದೆ. ಇದೇ ವೇಳೆ ಸುಮಾರು 15 ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಮತ್ತು ಮಹಿಳಾ ಕಾಂಗ್ರೆಸ್‌ ಸೇರಿದಂತೆ ಮುಂಚೂಣಿ ಘಟಕಗಳ ಅಧ್ಯಕ್ಷರ ಬದಲಾವಣೆ ಪಟ್ಟಿಯೂ ಹೈಕಮಾಂಡ್‌ ಮುಂದಿದೆ. ಸುರ್ಜೇವಾಲಾ ಅವರ ವಿಚಾರದಲ್ಲಿ ಹೈಕಮಾಂಡ್‌ ಒಂದು ತೀರ್ಮಾನ ಕೈಗೊಳ್ಳುವವರೆಗೂ ಈ ಪ್ರಕ್ರಿಯೆ ನಡೆಯುವುದಿಲ್ಲ. ಸುರ್ಜೇವಾಲಾ ಬದಲಾದರಂತೂ ಈ ಪ್ರಕ್ರಿಯೆ ಮತ್ತಷ್ಟುವಿಳಂಬವಾಗಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

click me!