ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಕೇಂದ್ರ ಬಜೆಟ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು, (ಫೆ.01): ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು 2021-22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಆ ನಾಲ್ಕು ರಾಜ್ಯಗಳಿಗೆ ಮಾತ್ರ ಬರಪೂರ ಘೋಷಣೆ ಮಾಡಲಾಗಿದೆ. ಆದ್ರೆ, ಕರ್ನಾಟಕಕ್ಕೆ ಹೇಳಿಕೊಳ್ಳುವಂತ ಯಾವುದೇ ಅನುದಾನವಾಗಲಿ, ಯೋಜನೆಗಳಾಗಲಿ ನೀಡಿಲ್ಲ. ಆದರೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ ಎಂದಿದ್ದಾರೆ.
undefined
ಬಜೆಟ್ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಸೋಮವಾರ) ಮಂಡಿಸಿದ 2021-22 ರ ಕೇಂದ್ರ ಬಜೆಟ್ ಬಸವಳಿದಿರುವ ಭಾರತೀಯ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿಯಾಗಿದೆ ಎಂದರು.
ಕೇಂದ್ರ ಬಜೆಟ್ 2021: ಸಿದ್ದರಾಮಯ್ಯನವರ ಫಸ್ಟ್ ರಿಯಾಕ್ಷನ್..!
ಕೋವಿಡ್ 19 ಸಾಂಕ್ರಾಮಿಕದ ಪರಿಣಾಮವಾಗಿ ಸ್ಥಗಿತಗೊಂಡ ಅರ್ಥವ್ಯವಸ್ಥೆ ಮತ್ತೆ ಪುಟಿದೇಳಲು ಈ ಬಜೆಟ್ ವೇಗವರ್ಧಕವಾಗಿ ಕೆಲಸ ಮಾಡಲಿದೆ. ಸಾಂಕ್ರಾಮಿಕದ ಸಂಕಷ್ಟದ ನಡುವೆ ಇದಕ್ಕಿಂತ ಉತ್ತಮ ಬಜೆಟ್ ನಿರೀಕ್ಷಿಸುವುದು ಅಸಾಧ್ಯ. ರೋಗನಿಯಂತ್ರಣದ ಜೊತೆಗೆ ಅರ್ಥ ವ್ಯವಸ್ಥೆಯ ಪುನರುಜ್ಜೀವನಕ್ಕೆ ಅಗತ್ಯವಾದ ಕಾರ್ಯತಂತ್ರವನ್ನು ಕೇಂದ್ರ ವಿತ್ತ ಸಚಿವೆಯವರು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ನಿವಾರಣೆಗೆ ಕೈಗೊಂಡಿರುವ ಲಸಿಕೆ ಅಭಿಯಾನಕ್ಕೆ 35,000 ಕೋಟಿ ರೂ. ಒದಗಿಸಿದ್ದು , ಇನ್ನೂ ಹೆಚ್ಚಿನ ಹಣದ ಅಗತ್ಯ ಬಿದ್ದಲ್ಲಿ ಒದಗಿಸುವುದಾಗಿ ಕೇಂದ್ರ ಸಚಿವೆ ತಿಳಿಸಿರುವುದು ಸ್ವಾಗತಾರ್ಹ. ಕೃಷಿ ಕ್ಷೇತ್ರದ ಬಲವರ್ಧನೆ, ಅನ್ನದಾತ ರೈತರ ಅಭಿವೃದ್ಧಿಗೆ ಪ್ರಾಮುಖ್ಯತೆ, ಕೌಶಲ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಈ ಬಜೆಟ್‌ನಲ್ಲಿ ವಿಶೇಷ ಗಮನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಜೀಯವರ ಕನಸಿನಂತೆ 2022 ರೊಳಗೆ ರೈತರ ಆದಾಯ ದ್ವಿಗುಣಗೊಳಿಸಲು ಈ ಬಜೆಟ್ ಭೂಮಿಕೆ ಒದಗಿಸಿದೆ ಎಂದರು.
ಸಚಿವ ಆರ್.ಅಶೋಕ್ ಮಾತು
ಈ ಕೇಂದ್ರದ ಬಜೆಟ್ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಮತನಾಡಿದ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರಿನ ಮೆಟ್ರೋಗೆ ಹಣ ನೀಡಿರುವುದಕ್ಕೆ ಸ್ವಾಗತ. ಕಷ್ಟದ ಸಂದರ್ಭ, ಕೊರೋನಾ ಮಹಾಮಾರಿ ಮೆಡಿಸಿನ್ ಕೊಡುವುದಕ್ಕೆ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕಷ್ಟ ಕಾಲದಲ್ಲಿ ಬಜೆಟ್ ಮಂಡನೆ ಕಷ್ಟವಾಗಿದೆ. ರೈತರ ಪರವಾಗಿ ಹೊಸ ಘೋಷಣೆ ಮಾಡಿದೆ. ಯಾವುದೇ ಹೆಚ್ಚುವರಿ ಇಲ್ಲದೆ ಸರಿದೂಗಿಸಿದ್ದಾರೆ. ಒಟ್ಟಾರೆ ಬಜೆಟ್ ಕಷ್ಟದಲ್ಲಿ ಮಾಡಿದ್ದು ಇದು ಹಿತ-ಮಿತ ಬಜೆಟ್ ಎಂದು ಹೇಳಿದರು.