* ಪಾಲಿಕೆ ಎಲೆಕ್ಷನ್ ಫಲಿತಾಂಶ ಪ್ರಕಟ ಬೆನ್ನಲ್ಲೇ ಸಿಎಂ ದಿಲ್ಲಿಗೆ
* ನಾಳೆ (ಸೆ.07) ದೆಹಲಿಗೆ ತೆರಳಲಿರುವ ಸಿಎಂ ಬಸವರಾಜ ಬೊಮ್ಮಾಯಿ
*ಉಳಿದ ನಾಲ್ಕು ಸಚಿವ ಸ್ಥಾನ ಭರ್ತಿ ಬಗ್ಗೆ ನಡ್ಡಾ ಜತೆ ಚರ್ಚೆ ಸಾಧ್ಯತೆ
ಬೆಂಗಳೂರು, (ಸೆ.06): ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆ ಮೀರಿ ಸಾಧನೆ ಮಾಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದು ಕುತೂಹಲ ಮೂಡಿಸಿದೆ.
ಹೌದು.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ (ಸೆ.07) ದೆಹಲಿಗೆ ತೆರಳುತ್ತಿದ್ದು, ಸಚಿವ ಸಂಪುಟ ವಿಸ್ತರಣೆ ಸಂಬಂಧ ಕೇಂದ್ರದ ಬಿಜೆಪಿ ವರಿಷ್ಠರ ಜೊತೆ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ಶಾ ಮಾತೇ ಅಂತಿಮ: ಬೊಮ್ಮಾಯಿ ನೇತೃತ್ವದಲ್ಲಿ ಎಲೆಕ್ಷನ್ ಎಂದ ಸಚಿವ ಸೋಮಶೇಖರ್
ಈ ಮೊದಲೇ ವರಿಷ್ಠರಿಂದ ಭೇಟಿಗೆ ಒಪ್ಪಿಗೆ ಸಿಕ್ಕ ಹಿನ್ನಲೆಯಲ್ಲಿ ಬೊಮ್ಮಾಯಿ ದೆಹಲಿಗೆ ತೆರಳುತ್ತಿದ್ದು, ಸಂಪುಟದಲ್ಲಿ ಖಾಲಿ ಇರುವ 4 ಸ್ಥಾನಗಳ ಭರ್ತಿಯ ಜೊತೆಗೆ ನಿಗಮ ಮಂಡಳಿ ನೇಮಕಾತಿ ಸೇರಿದಂತೆ ರಾಜ್ಯ ರಾಜಕೀಯ ವಿಚಾರ ಹಾಗೂ ಪಕ್ಷ ಸಂಘಟನೆ ಸೇರಿದಂತೆ ಮತ್ತಿತ್ತರ ವಿಚಾರಗಳ ಬಗ್ಗೆ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಬಾರಿ ದೆಹಲಿ ಭೇಟಿ ಸಂದರ್ಭದಲ್ಲಿ ನಡ್ಡಾ ಅವರನ್ನ ಭೇಟಿಯಾಗಲು ಬೊಮ್ಮಾಯಿ ಅವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಸಮಯ ಸಿಕ್ಕಿದ್ದು, ಉಳಿದ ನಾಲ್ಕು ಸಚಿವ ಸ್ಥಾನ ಭರ್ತಿ ಬಗ್ಗೆ ನಡ್ಡಾ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇದರ ಜೊತೆ ಕಲಬುರಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಗ್ಗೆ ನಡ್ಡಾಗೆ ತಿಳಿಸಲಿದ್ದಾರೆ. ಒಟ್ಟಿನಲ್ಲಿ ಬೊಮ್ಮಾಯಿ ಅವರ ಈ ಬಾರಿ ದಿಲ್ಲಿ ಪ್ರವಾಸ ತೀವ್ರ ಕುತೂಹಲ ಮೂಡಿಸಿದೆ.