ಕಾಂಗ್ರೆಸ್‌ ನಾಯಕರು ಬೆಂಜ್‌ ಕಾರ್‌ ಗಿರಾಕಿಗಳು: ಬೊಮ್ಮಾಯಿ ವಾಗ್ದಾಳಿ!

By Kannadaprabha NewsFirst Published Oct 18, 2021, 8:02 AM IST
Highlights

* ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ

* ಕಾಂಗ್ರೆಸ್‌ ನಾಯಕರು ಬೆಂಜ್‌ ಕಾರ್‌ ಗಿರಾಕಿಗಳು

* ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ ನಾಯಕರಿಗಿಲ್ಲ

* ಹಾನಗಲ್ ಪ್ರಚಾರದ ವೇಳೆ ಬೊಮ್ಮಾಯಿ ವಾಗ್ದಾಳಿ!

ಹಾವೇರಿ(ಅ.18): ಕಾಂಗ್ರೆಸ್‌(Congress) ಭ್ರಷ್ಟಾಚಾರದ(Corruption) ಗಂಗೋತ್ರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ ನಾಯಕರಿಗಿಲ್ಲ. ಅವರದ್ದು ದೊಡ್ಡ ನಾಟಕ ಕಂಪನಿ. ಕಾಂಗ್ರೆಸ್‌ ನಾಯಕರು ಬೆಂಜ್‌ ಕಾರ್‌ ಗಿರಾಕಿಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ವಾಗ್ದಾಳಿ ನಡೆಸಿದರು.

ಹಾನಗಲ್ಲ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಸಿದ್ದರಾಮಯ್ಯ(Siddaramaiah), ಡಿ.ಕೆ. ಶಿವಕುಮಾರ(DK Shivakumar) ಚಕ್ಕಡಿ, ಸೈಕಲ್‌ ತೆಗೆದುಕೊಂಡು ವಿಧಾನಸೌಧಕ್ಕೆ ಬಂದಿದ್ದರು. ಸಿದ್ದರಾಮಯ್ಯ ಕೈಯಲ್ಲಿ ಹಗ್ಗ, ಡಿ.ಕೆ. ಶಿವಕುಮಾರ ಕೈಯಲ್ಲಿ ಬಾರಕೋಲು ಇತ್ತು. ಬೆಂಜ್‌ ಕಾರ್‌ ಗಿರಾಕಿಗಳು ಚಕ್ಕಡಿ ಮೇಲೆ ಬಂದು ಪ್ರತಿಭಟಿಸುತ್ತಾರೆ. ಇಂಥವರಿಂದ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಿಲ್ಲ. ಹಾನಗಲ್ಲ(Hanagal) ನೆಲದಲ್ಲಿ ಇವರ ರಾಜಕೀಯ ನಡೆಯುವುದಿಲ್ಲ. ಇದು ಹಾನಗಲ್ಲ ಜನರ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಇದು ಜಿಲ್ಲೆಯ ಜನರ ಗೌರವದ ಪ್ರಶ್ನೆಯಾಗಿದ್ದು, ಅದನ್ನು ಉಳಿಸುತ್ತೀರಿ ಎಂಬ ವಿಶ್ವಾಸವಿದೆ ಎಂದರು.

ಕೈನಲ್ಲಿ ಪಿಸುಮಾತಿನ ರಾಜಕಾರಣ:

ಕಾಂಗ್ರೆಸ್‌ನಲ್ಲಿ ಈಗ ಪಿಸುಮಾತಿನ ರಾಜಕಾರಣ ಆರಂಭವಾಗಿದೆ. ಸೋನಿಯಾ ಗಾಂಧಿ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡು ಕಿವಿಮಾತು ಹೇಳಿದ ಮೇಲೆ ರಾಜ್ಯದಲ್ಲಿ ಪಿಸುಮಾತಿನ ರಾಜಕೀಯ ಶುರುವಾಗಿದೆ. ತನ್ನ ಜಾಗ ಭದ್ರಪಡಿಸಿಕೊಳ್ಳಲು, ದೆಹಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ತನ್ನ ಶಿಷ್ಯರ ಮೂಲಕ ಪಿಸುಮಾತು ಆಡಿಸುತ್ತಿದ್ದಾರೆ. ಮಾತೆತ್ತಿದರೆ ಸಿದ್ದರಾಮಯ್ಯ ಅಚ್ಚೇ ದಿನ್‌ ಎಲ್ಲಿ ಎಂದು ಕೇಳುತ್ತಾರೆ. ಕಾಂಗ್ರೆಸ್‌ನಲ್ಲಿ ಇರುವವರಿಗೆ, ಸಿದ್ದರಾಮಯ್ಯಗೆ ಅಚ್ಚೇ ದಿನ ಬರುವುದಿಲ್ಲ. ಬರಲು ಡಿ.ಕೆ. ಶಿವಕುಮಾರ ಸುಮ್ಮನೆ ಕೂರುವುದಿಲ್ಲ ಎಂದು ಟಾಂಗ್‌ ನೀಡಿದರು.

ಏಕವಚನದಲ್ಲೇ ತಿರುಗೇಟು:

ಯಡಿಯೂರಪ್ಪ, ಬೊಮ್ಮಾಯಿ ಅವಧಿಯಲ್ಲಿ ಹಾನಗಲ್ಲ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎಂದು ಸಿದ್ದರಾಮಯ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ . 533 ಕೋಟಿ ವೆಚ್ಚದಲ್ಲಿ ಹಿರೇಕಾಂಶಿ, ಬಾಳಂಬೀಡ ಏತ ನೀರಾವರಿ ಯೋಜನೆ ಆರಂಭವಾಗಿದೆ. ನೂರಾರು ಕೆರೆ ತುಂಬಿಸುವ ಯೋಜನೆ ಆರಂಭವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ. ನೀವು 5 ವರ್ಷ ಸಿಎಂ ಆಗಿದ್ದಾಗ ಏನು ಮಾಡಿದ್ದೀರಿ? ಆಗ ನಿಮಗೆ ನೀರಾವರಿ ಯೋಜನೆ ಮಂಜೂರು ಮಾಡಬೇಕು ಅನಿಸಲಿಲ್ಲ. ಈಗ ಚುನಾವಣೆ ಬಂದಾಗ ಸುಳ್ಳು ಹೇಳಿ ಮತ ಕೇಳಲು ಬಂದಿದ್ದೀರಿ. ಇಲ್ಲಿ ಆಗಿರುವ ಯೋಜನೆಗಳ ಪಟ್ಟಿಯನ್ನೇ ನೀಡುತ್ತೇನೆ. ಹಳ್ಳಿ ಹಳ್ಳಿಗೆ ಹೋಗಿ ನೋಡಿ ಸಿದ್ದರಾಮಯ್ಯ, ಬಾರಪ್ಪ ನೋಡು.. ಎಂದು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಜನರೇ ನಿಮ್ಮ ಮೇಲೆ ವಿಶ್ವಾಸ ಇಟ್ಟಿಲ್ಲ. ಇನ್ನು ಹಾನಗಲ್ಲಿಗೆ ಬಂದು ಏನು ಮಾಡುತ್ತೀರಾ? ಕೋವಿಡ್‌ ಸಂದರ್ಭದಲ್ಲಿ ಏನೋ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿದ್ದೀರಿ. ಕೋವಿಡ್‌ ಆಸ್ಪತ್ರೆ ಮಾಡಿದ್ದು ನೋಡಿ, ನೀರಾವರಿ ಯೋಜನೆ ನೋಡಿ. ನಾವು ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಇಲ್ಲಿ ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸಿದರೆ ನನ್ನನ್ನು ಗೆಲ್ಲಿಸಿದಂತೆ. ಇಲ್ಲಿಯ ಮಗನಾಗಿ ನಾನು ಸುಳ್ಳು ಹೇಳಲು ಸಾಧ್ಯವಿಲ್ಲ. ಇಲ್ಲೇ ಇರುತ್ತೇವೆ. ನಿಮ್ಮೊಂದಿಗೇ ಬದುಕುತ್ತೇವೆ, ಇಲ್ಲೇ ಸಾಯುತ್ತೇವೆ. ಈ ಚುನಾವಣೆ ನನ್ನ ಪ್ರತಿಷ್ಠೆಯ ಪ್ರಶ್ನೆಯದ್ದಲ್ಲ. ಇದು ಹಾನಗಲ್ಲ ಕ್ಷೇತ್ರದ ಜನರ ಭವಿಷ್ಯದ ಪ್ರತಿಷ್ಠೆ. ಆದ್ದರಿಂದ ಶಿವರಾಜ ಸಜ್ಜನರನ್ನು ಗೆಲ್ಲಿಸಿ ಎಂದು ಬೊಮ್ಮಾಯಿ ಮನವಿ ಮಾಡಿದರು.

ಸಿದ್ದರಾಮಯ್ಯ ಅಕ್ಕಿ ಬಗ್ಗೆ ಮಾತನಾಡುತ್ತಿದ್ದಾರೆ. ಹಾವೇರಿಗೆ ಬಂದಿದ್ದ ಮೆಡಿಕಲ್‌ ಕಾಲೇಜನ್ನು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗದುಗಿಗೆ ಹಾಕಿದರು. ಮೊದಲು 30 ಕೆಜಿ ಅಕ್ಕಿ ನೀಡುತ್ತಿದ್ದುದನ್ನು 5 ಕೆಜಿ ಮಾಡಿ ಚುನಾವಣೆ ಹತ್ತಿರ ಬಂದಾಗ 7 ಕೆಜಿ ನೀಡಿದರು. ಆ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು. 15 ಲಕ್ಷ ಮನೆ ಮಂಜೂರು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಒಂದು ಮನೆಯೂ ನಿರ್ಮಾಣವಾಗಿಲ್ಲ. ನಾನು ಸಿಎಂ ಆದ ಮೇಲೆ 5 ಲಕ್ಷ ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೇನೆ. ಹಾನಗಲ್ಲ ಕ್ಷೇತ್ರದಲ್ಲೇ 7400 ಮನೆಗಳನ್ನು ನೀಡಲಾಗುತ್ತಿದೆ. ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಯಾರಿಗೂ ನ್ಯಾಯ ಒದಗಿಸಲಿಲ್ಲ. ನಾವು ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ. ಕಾಂಗ್ರೆಸ್‌ಗೆ ಮತ ನೀಡಿದರೆ ವೇಸ್ಟ್‌. ಹಾನಗಲ್ಲ ಮತ್ತು ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸಚಿವರಾದ ಮಾಧುಸ್ವಾಮಿ, ಬಿ. ಶ್ರೀರಾಮುಲು, ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಅಭ್ಯರ್ಥಿ ಶಿವರಾಜ ಸಜ್ಜನರ ಮಾತನಾಡಿದರು. ಸಚಿವರಾದ ಮುನಿರತ್ನ, ಶಿವರಾಮ ಹೆಬ್ಬಾರ, ಶಂಕರಪಾಟೀಲ ಮುನೇನಕೊಪ್ಪ, ಸುನೀಲಕುಮಾರ್‌, ಎನ್‌. ರವಿಕುಮಾರ ಸೇರಿದಂತೆ ಅನೇಕ ಶಾಸಕರು, ಮುಖಂಡರು ಇದ್ದರು.

click me!