ಜೆಡಿಎಸ್‌, ಬಿಜೆಪಿ ಒಳ ಒಪ್ಪಂದ'': ಸುದ್ದಿಗೋಷ್ಠಿಯಲ್ಲಿ ಇದೆಂತಹಾ ಮಾತು!

By Kannadaprabha News  |  First Published Oct 18, 2021, 7:45 AM IST

* ಎಚ್ಡಿಕೆ ವಿರುದ್ಧ ಕಾಂಗ್ರೆಸ್‌ ಮುಸ್ಲಿಂ ನಾಯಕರ ಕಿಡಿ

*-ಬಿಜೆಪಿ ಜತೆ ಜೆಡಿಎಸ್‌ ಒಪ್ಪಂದ, ಹೀಗಾಗಿ ಬಿಜೆಪಿ ಬಗ್ಗೆ ಮಾತಾಡಲ್ಲ, ಅಲ್ಪಸಂಖ್ಯಾತರಿಗೆ ಎಚ್ಡಿಕೆ ಕೊಡುಗೆ ಏನು?

* ಕಾಂಗ್ರೆಸ್‌ನ ಖಾದರ್‌, ರಿಜ್ವಾನ್‌, ನಾಸೀರ್‌ರಿಂದ ಜಂಟಿಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ


ಹುಬ್ಬಳ್ಳಿ(ಅ.18): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಕಾಂಗ್ರೆಸ್‌ ಮುಸ್ಲಿಂ(Muslim) ಮುಖಂಡರ ರಾಜಕೀಯ ನರಮೇಧ ನಡೆಸುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರ ಹೇಳಿಕೆಗೆ ಕಾಂಗ್ರೆಸ್‌ನ ಅಲ್ಪಸಂಖ್ಯಾತ(Minorities) ಮುಖಂಡರು ಒಟ್ಟಾಗಿ ತಿರುಗಿಬಿದ್ದಿದ್ದಾರೆ. ಜೆಡಿಎಸ್‌(JDS) ತಾನೂ ಪ್ರತಿಪಕ್ಷದಲ್ಲಿದ್ದು, ಆಡಳಿತದಲ್ಲಿರುವ ಪಕ್ಷದ ಕಾರ್ಯವೈಖರಿ ಟೀಕಿಸುವ ಬದಲು ಇನ್ನೊಂದು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌(Congress) ವಿರುದ್ಧ ಮಾತನಾಡುತ್ತಿದೆ. ಬಿಜೆಪಿಯ(BJP) ಜತೆಗೆ ಒಳ ಒಪ್ಪಂದ ಮಾಡಿಕೊಂಡ ಕಾರಣಕ್ಕೆ ಅವರ ದುರಾಡಳಿತವನ್ನು ಪ್ರಶ್ನಿಸುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಯು.ಟಿ. ಖಾದರ್‌(UT Khader), ಶಾಸಕ ರಿಜ್ವಾನ್‌ ಅರ್ಷದ್‌ ಹಾಗೂ ವಿಪ ಸದಸ್ಯ ನಾಸೀರ್‌ ಅಹ್ಮದ್‌ ಅವರು ಜೆಡಿಎಸ್‌(JDS) ನಡೆಯನ್ನು ತೀವ್ರವಾಗಿ ಖಂಡಿಸಿದರು.

Tap to resize

Latest Videos

ಆಡಳಿತದಲ್ಲಿ ಇಲ್ಲದ ಹೊರತಾಗಿಯೂ ಜೆಡಿಎಸ್‌ ಪ್ರತಿಪಕ್ಷವಾಗಿದ್ದುಕೊಂಡು ಇನ್ನೊಂದು ಪ್ರತಿಪಕ್ಷವನ್ನೇ ಟೀಕೆ ಮಾಡುತ್ತಿದೆ. ಇದು ದೇಶದ ಇತಿಹಾಸದಲ್ಲಿ ಮೊದಲು. ಈ ಉಪ ಚುನಾವಣೆಯ ಸಂದರ್ಭದಲ್ಲಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಬಿಜೆಪಿ ಉತ್ತಮ ಆಡಳಿತ ಕೊಟ್ಟಿದೆಯಾ? ಇದನ್ನು ಯಾಕೆ ಪ್ರತಿಪಕ್ಷ ಸ್ಥಾನದಲ್ಲಿರುವ ಜೆಡಿಎಸ್‌ ಟೀಕೆ ಮಾಡುತ್ತಿಲ್ಲ ಎಂದು ಖಾದರ್‌ ಪ್ರಶ್ನಿಸಿದರು.

ಸಿದ್ದರಾಮಯ್ಯ ಸಿಎಂ ಆಗಿರುವಾಗ ಸಂವಿಧಾನಕ್ಕೆ ಅನುಗುಣವಾಗಿ ಕಾಂಗ್ರೆಸ್‌(Congress) ಜನಮೆಚ್ಚುಗೆಯ ಆಡಳಿತ ನೀಡಿದೆ. ಕೆಂಪೇಗೌಡ ಜಯಂತಿ, ಅಧ್ಯಯನ ಪೀಠ ರಚನೆ ಸೇರಿದಂತೆ ಎಲ್ಲ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ್ದೇವೆ. ಬಿಜೆಪಿಯವರು ನಯಾಪೈಸೆ ಕೊಟ್ಟಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾವ ಸಮುದಾಯಕ್ಕೆ ಎಷ್ಟುಕೊಡುಗೆ ನೀಡಿದ್ದಾರೆ? ಅಲ್ಪಸಂಖ್ಯಾತರ ಮಕ್ಕಳಿಗೆ ಎಷ್ಟುವಿದ್ಯಾರ್ಥಿ ವೇತನ ಕೊಟ್ಟಿದ್ದೀರಿ ಎಂದರು.

ಉಪ ಚುನಾವಣೆಯಲ್ಲಿ ಎದುರಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಉದ್ದೇಶ ಏನು? ಇದರ ಹಿಂದೆ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸುವ ಉದ್ದೇಶ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ತಿಳಿಯುವುದಿಲ್ಲವೆ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ನಾಸೀರ್‌ ಅಹ್ಮದ್‌ ಮಾತನಾಡಿ, ಕಾಂಗ್ರೆಸ್‌ ಅವಧಿಯಲ್ಲಿ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ .3200 ಕೋಟಿ ಒದಗಿಸಲಾಗಿತ್ತು. ಕುಮಾರಸ್ವಾಮಿ ಸಿಎಂ ಆದಾಗ ಅದನ್ನು 3500 ಕೋಟಿಗೆ ಹೆಚ್ಚಿಸಲು ನಿಯೋಗ ಕೊಂಡೊಯ್ದು ಕೇಳಿಕೊಂಡೆವು. ಹುಸಿ ಭರವಸೆ ನೀಡಿದ ಅವರು ನಂತರ .1800 ಕೋಟಿ ಮಂಜೂರು ಮಾಡಿದರು. ಆದರೆ ಬಳಿಕ ಕೇವಲ .1100 ಕೋಟಿ ಕೊಟ್ಟರು. ಕುಮಾರಸ್ವಾಮಿ ಕೇವಲ ರಾಜಕಾರಣ ಮಾಡುವ ಸಲುವಾಗಿ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ಕುಮಾರಸ್ವಾಮಿ ಅವರಿಗೆ ಈಗ ಅಲ್ಪಸಂಖ್ಯಾತರು ಬದುಕಿದ್ದಾರೆ ಎಂಬುದು ನೆನಪಾಗಿದೆ. ತಾವು ಆಡಳಿತದಲ್ಲಿ ಇದ್ದಾಗ ಯಾವೊಂದು ಕೊಡುಗೆಯನ್ನು ಈ ಸಮುದಾಯಕ್ಕೆ ನೀಡಿಲ್ಲ. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡಲು ಅಲ್ಪಸಂಖ್ಯಾತರ ಕುರಿತಾಗಿ ಮಾತನಾಡುವುದು ಬೇಡ. ತಮ್ಮ ಸರ್ಕಾರ ಬಂದರೆ ಅಲ್ಪಸಂಖ್ಯಾತರಿಗೆ ಗೃಹ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದರು? ಆದರೆ ಎಷ್ಟುಜನರಿಗೆ ಸ್ಥಾನ ಕೊಟ್ಟರು? ಕಾಂಗ್ರೆಸ್‌ ಲಿಂಗಾಯತ, ಒಕ್ಕಲಿಗ ಸೇರಿ ಎಲ್ಲ ಸಮುದಾಯಕ್ಕೂ ಸ್ಥಾನಮಾನ ಕೊಟ್ಟಿರಲಿಲ್ಲವೆ? ಬಿಜೆಪಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಮಂತ್ರಿ ಸ್ಥಾನ ಹಂಚಿಕೆ ಮಾಡಿದೆಯೆ? ಒಬ್ಬ ಮುಸ್ಲಿಮರಿಗಾದರೂ ಮಂತ್ರಿ ಸ್ಥಾನ ಕೊಡಲಾಗಿದೆಯೆ? ಇದನ್ನೇಕೆ ಕುಮಾರಸ್ವಾಮಿ ಪ್ರಶ್ನಿಸುವುದಿಲ್ಲ. ಸುಮ್ಮನೇ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದರು.

ಸಾಮಾನ್ಯ ಜನರ ಪರವಾಗಿ ಜೆಡಿಎಸ್‌ ಒಂದೇ ಒಂದು ಹೋರಾಟ ನಡೆಸಿಲ್ಲ. ಹಸಿವು, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಮಾತನಾಡಿಲ್ಲ. ಯಡಿಯೂರಪ್ಪ ಇದ್ದಾಗ ಹಾಗೂ ಈಗಿನ ಬೊಮ್ಮಾಯಿ ಸರ್ಕಾರದ ವಿರುದ್ಧ ಟೀಕೆ ಮಾಡಿಲ್ಲ. ಹೋರಾಟ ಮಾಡಿಲ್ಲ. ನೀವು ಬಿಜೆಪಿ ಅಲೈಸ್ಸ್‌ ಎಂದು ತಿಳಿದುಕೊಳ್ಳಬೇಕಾ? ಸಿದ್ದರಾಮಯ್ಯ ವಿರುದ್ಧ ದ್ವೇಷ ಸಾಧಿಸಲು ಅಲ್ಪಸಂಖ್ಯಾತರ ಹೆಸರನ್ನು ಬಳಸಿಕೊಳ್ಳಬೇಡಿ ಎಂದರು.

ಇದೇವೇಳೆ ಸಿ.ಎಂ.ಇಬ್ರಾಹಿಂ ಹೇಳಿಕೆಗೂ ಕುಮಾರಸ್ವಾಮಿ ಹೇಳಿಕೆಗೂ ವ್ಯತ್ಯಾಸವಿದೆ. ಮುಸ್ಲಿಮರನ್ನು, ಟಿಪ್ಪು ಜಯಂತಿ ಕುರಿತಾಗಿ ಅವರು ನೀಡಿದ ಹೇಳಿಕೆ ಹಾಗೂ ಕುಮಾರಸ್ವಾಮಿ ಹೇಳಿಕೆಗೆ ಸಾಮ್ಯತೆ ಇಲ್ಲ ಎಂದು ಸಮರ್ಥನೆಗೆ ಅಲ್ಪಸಂಖ್ಯಾತ ಮುಖಂಡರು ಮುಂದಾದರು. ಆದರೆ ವಿಧಾನ ಪರಿಷತ್‌ ಸದಸ್ಯ ನಾಸೀರ್‌ ಅಹ್ಮದ್‌ ಮಾತನಾಡುತ್ತ ಸಿ.ಎಂ.ಇಬ್ರಾಹಿಂ ಅವರಿಗೂ ಜ್ಞಾನ ಇರಲಿಲ್ಲವೆ? ಇಂಥದ್ದನ್ನೆಲ್ಲ ಕಾರ್ಯಕಾರಿಣಿ ಸಭೆಯಲ್ಲಿ ಆಂತರಿಕವಾಗಿ ಮಾತನಾಡಬಹುದಿತ್ತು. ಬಹಿರಂಗವಾಗಿ ಹೇಳಿದ್ದು ಯಾಕೆ ಎಂದು ವಿಧಾನ ಪರಿಷತ್‌ ಸದಸ್ಯ ನಾಸೀರ್‌ ಅಹ್ಮದ್‌ ಪ್ರಶ್ನಿಸಿದರು.

ಯುವ ಕಾಂಗ್ರೆಸ್‌ನ ರಕ್ಷಾರಾಮಯ್ಯ, ಧಾರವಾಡ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು ಸೇರಿ ಇತರರಿದ್ದರು.

ಕೋಟ್‌

ಕುಮಾರಸ್ವಾಮಿ ಅವರಿಗೆ ಈಗ ಅಲ್ಪಸಂಖ್ಯಾತರು ಬದುಕಿದ್ದಾರೆ ಎಂಬುದು ನೆನಪಾಗಿದೆ. ತಾವು ಆಡಳಿತದಲ್ಲಿ ಇದ್ದಾಗ ಯಾವೊಂದು ಕೊಡುಗೆಯನ್ನು ಈ ಸಮುದಾಯಕ್ಕೆ ನೀಡಿಲ್ಲ. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್‌ ಮಾಡಲು ಅಲ್ಪಸಂಖ್ಯಾತರ ಕುರಿತಾಗಿ ಮಾತನಾಡುವುದು ಬೇಡ

-ರಿಜ್ವಾನ್‌ ಅರ್ಷದ್‌, ಶಾಸಕ

Close

click me!