'ಬಿಜೆಪಿಗೆ ಜೆಡಿಎಸ್‌ ಬೆಂಬಲ ಸಿಗಲ್ಲ, ನಾನು ಆ ಪಕ್ಷದಲ್ಲಿದ್ದೆ, ನನಗೆ ಗೊತ್ತಿದೆ'

By Web Desk  |  First Published Nov 26, 2019, 8:32 AM IST

ಬಿಜೆಪಿಗೆ ಜೆಡಿಎಸ್‌ ಬೆಂಬಲ ಸಿಗಲ್ಲ: ಸಿದ್ದು| ನಾನು ಆ ಪಕ್ಷದಲ್ಲೇ ಇದ್ದವನು, ನನಗೆ ಗೊತ್ತಿದೆ| ಉಪಚುನಾವಣೆ ಬಳಿಕ ಮಧ್ಯಂತರ ಚುನಾವಣೆ: ಮಾಜಿ ಸಿಎಂ ಭವಿಷ್ಯ


ಹುಬ್ಬಳ್ಳಿ[ನ.26]: ಉಪ ಚುನಾವಣೆ ನಂತರ ರಾಜ್ಯ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡರೆ ಜೆಡಿಎಸ್‌ ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ. ಜೆಡಿಎಸ್‌ನಲ್ಲೇ ಇದ್ದ ನನಗೆ ಆ ಪಕ್ಷದ ನಿಲುವಿನ ಅರಿವಿದೆ. ಇಂಥ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂದು ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆಗೆ ಹಾಗೂ ಯಲ್ಲಾಪುರದಲ್ಲಿ ಪಕ್ಷದ ಅಭ್ಯರ್ಥಿ ಪರ ಸೋಮವಾರ ಪ್ರಚಾರ ನಡೆಸಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕು. ಇಷ್ಟುಸ್ಥಾನಗಳನ್ನು ಬಿಜೆಪಿಗೆ ಗೆಲ್ಲಲು ಸಾಧ್ಯವೇ ಇಲ್ಲ. ಬಿಜೆಪಿ ಕುದುರೆ ವ್ಯಾಪಾರ ಮಾಡಿ ಚುನಾವಣೆ ಎದುರಿಸುತ್ತಿದೆ. ಒಂದು ವೇಳೆ ಬಿಜೆಪಿ ಈ ಉಪ ಚುನಾವಣೆಯಲ್ಲಿ ಸೋತು ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಮಾತ್ರ ಬೆಂಬಲ ನೀಡಲ್ಲ, ಯಾಕೆಂದರೆ ನಾನು ಜೆಡಿಎಸ್‌ನಲ್ಲಿದ್ದು ಬಂದವನು. ಹೀಗಾಗಿ ನನಗೆ ಆ ಬಗ್ಗೆ ಚೆನ್ನಾಗಿ ಗೊತ್ತಿದೆ. ಉಪ ಚುನಾವಣೆ ನಂತರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ. ಬಿಜೆಪಿ ಸರ್ಕಾರ ಪತನವಾಗುತ್ತದೆ. ಇದೇ ಕಾರಣಕ್ಕೆ ಯಡಿಯೂರಪ್ಪ ಈಗ ಡಿಸ್ಟರ್ಬ್‌ ಆಗಿದ್ದಾರೆ. 15 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದರು.

Tap to resize

Latest Videos

undefined

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ:

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಮತ್ತೆ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು 100ಕ್ಕೆ 100ರಷ್ಟುಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಧ್ಯಂತರ ಚುನಾವಣೆ ನಂತರ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ. ನಾನು ಸಿಎಂ ಆಗುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟವಿಚಾರ ಎಂದರು.

ಬಿಎಸ್‌ವೈ ಆಪರೇಷನ್‌ ಕಮಲದ ಪಿತಾಮಹ:

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಿರವತ್ತಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪಕ್ಷಾಂತರ ಮತ್ತು ಪಕ್ಷಾಂತರಿಗಳ ವಿರುದ್ಧ ತೀವ್ರ ಹರಿಹಾಯ್ದರು. ಪಕ್ಷಾಂತರ ಒಂದು ರೋಗ. ಸುಪ್ರೀಂ ಕೋರ್ಟ್‌ನ ಅನರ್ಹತೆ ಆದೇಶಕ್ಕೆ ಜನತೆಯೂ ಮುದ್ರೆ ಒತ್ತಿ ಅನರ್ಹರನ್ನು ಮನೆಗೆ ಕಳುಹಿಸಬೇಕು, ರಾಜಕೀಯ ಶುದ್ಧೀಕರಣಕ್ಕಾಗಿ ಈ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜತೆಗೆ, ಯಡಿಯೂರಪ್ಪ ಅವರು ‘ಆಪರೇಷನ್‌ ಕಮಲದ ಪಿತಾಮಹ’ ಎಂದು ಆರೋಪಿಸಿದರು.

click me!