ಉಚಿತ ಅಕ್ಕಿ ಸ್ಕೀಂ ಇಂದಿರಾದ್ದು: ಸಿದ್ದುಗೆ ಪರಮೇಶ್ವರ್‌ ಟಾಂಗ್‌!

By Web Desk  |  First Published Nov 20, 2019, 9:34 AM IST

ಉಚಿತ ಅಕ್ಕಿ ಸ್ಕೀಂ ಇಂದಿರಾದ್ದು: ಸಿದ್ದುಗೆ ಪರಮೇಶ್ವರ್‌ ಟಾಂಗ್‌!| ಕೆಲವರು ಉಚಿತ ಅಕ್ಕಿ ನೀಡಿದ್ದು ತಾವೇ ಎನ್ನುತ್ತಿದ್ದಾರೆ


ಬೆಂಗಳೂರು[ನ.20]: ಇತ್ತೀಚೆಗೆ ಸರ್ಕಾರ ನಡೆಸಿದವರು ಬಡವರಿಗೆ ಉಚಿತ ಅಕ್ಕಿ ನೀಡಿದ್ದು ತಾವೇ ಎಂದು ಒಬ್ಬರಿಗಿಂತ ಒಬ್ಬರು ಉತ್ಸಾಹದಿಂದ ಹೇಳಿಕೊಳ್ಳುತ್ತಿದ್ದಾರೆ. ಆದರೆ, ದೇಶದಲ್ಲಿ ಮೊದಲು ಬಡವರಿಗೆ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ತನ್ಮೂಲಕ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.

Tap to resize

Latest Videos

undefined

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಇಂದಿರಾ ಗಾಂಧಿ 102ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ ಜಾರಿಗೊಳಿಸಿ ಮೊದಲ ಬಾರಿಗೆ ದೇಶಾದ್ಯಂತ ಬಡವರಿಗೆ ಉಚಿತ ಅಕ್ಕಿ ನೀಡುವ ಮೂಲಕ ಬಡವರ ಹೊಟ್ಟೆತುಂಬಿಸುವ ಕೆಲಸ ಮಾಡಿದರು. ಆದರೆ, ಇತ್ತೀಚಿನ ಸರ್ಕಾರಗಳಲ್ಲಿ ಅಧಿಕಾರಕ್ಕೆ ಬಂದವರು ಒಬ್ಬರಿಗಿಂತ ಮತ್ತೊಬ್ಬರು ತಮ್ಮ ಅಧಿಕಾರಾವಧಿಯಲ್ಲೇ ಅಕ್ಕಿ ಕೊಟ್ಟಿದ್ದಾಗಿ ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಬಡವರ ಹೊಟ್ಟೆತುಂಬಿಸುವ, ಅವರನ್ನು ಮೇಲೆತ್ತುವ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದಲೇ ಇಂದಿರಾ ಗಾಂಧಿ ಅವರು ಅಂದು ಜನರ ಪಾಲಿನ ದೇವರಾಗಿದ್ದರು. ಪ್ರತಿ ಮನೆಯಲ್ಲೂ ಅವರ ಫೋಟೋಗಳು ಕಂಡುಬರುತ್ತಿದ್ದವು. ಚುನಾವಣೆ ಸಂದರ್ಭದಲ್ಲಿ ಇಂದಿರಾ ಅವರ ಭಾವಚಿತ್ರವಿದ್ದ ಕರಪತ್ರ ಕೊಟ್ಟರೆ ಆ ಕರಪತ್ರವನ್ನೇ ಕಣ್ಣಿಗೆ ಒತ್ತಿಕೊಂಡು ಜನರು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಭಾರತ ಇಂದು ವಿಶ್ವವೇ ತಿರುಗಿ ನೋಡುವಂತೆ ಅಭಿವೃದ್ಧಿ ಹೊಂದುತ್ತಿರಬೇಕಾದರೆ ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಸೇರಿದಂತೆ ಸುದೀರ್ಘ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ ನಾಯಕರ ಕೊಡುಗೆ ದೊಡ್ಡದು ಎಂದರು.

ಬಿಜೆಪಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಹೊರಟಿದೆ:

ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಸೇರಿದಂತೆ ಅನೇಕ ಧರ್ಮಗಳ ಜನರು ಇದ್ದಾರೆ. ಇಂತಹ ದೇಶವನ್ನು ಬಿಜೆಪಿಯವರು ಹಿಂದೂ ದೇಶ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಇದೇ ವೇಳೆ ಪರಮೇಶ್ವರ್‌ ಆರೋಪಿಸಿದರು.

ಒಂದು ಹೋಟೆಲ್‌ಗೆ ಹೋಗಿ ದೋಸೆ ತಿಂದರೂ ಜಿಎಸ್ಟಿಕಟ್ಟಬೇಕಾಗಿದೆ. ಇಂತಹ ಸ್ಥಿತಿ ದೇಶದಲ್ಲಿ ಎಂದೂ ಬಂದಿರಲಿಲ್ಲ ಎಂದು ಇದೇ ವೇಳೆ ಕೇಂದ್ರ ಸರ್ಕಾರದ ಆಡಳಿತ ಧೋರಣೆ ವಿರುದ್ಧ ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲಾ 15 ಕ್ಷೇತ್ರದಲ್ಲೂ ಪ್ರಚಾರ ಮಾಡುವೆ

ಅನಾರೋಗ್ಯದ ಹಿನ್ನೆಲೆಯಲ್ಲಿ ನಾನು ಈವರೆಗೆ ಉಪಚುನಾವಣಾ ತಯಾರಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಇನ್ನು ಮುಂದೆ ಎಲ್ಲಾ 15 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಇದೇ ವೇಳೆ ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಉಪಚುನಾವಣಾ ತಯಾರಿಯಲ್ಲಿ ನಾನೇನೂ ಉದ್ದೇಶಪೂರ್ವಕವಾಗಿ ದೂರ ಉಳಿದಿರಲಿಲ್ಲ. ನನಗೆ ಸ್ಪಾಂಡಿಲೈಟಿಸ್‌ ಸಮಸ್ಯೆ ಇತ್ತು. ಹಾಗಾಗಿ ಭಾಗಿಯಾಗಲು ಆಗಿರಲಿಲ್ಲ. ಇನ್ನು ಮುಂದೆ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ. ಪಕ್ಷ ಸಂಘಟನೆ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವಿಗೆ ಪ್ರಯತ್ನಿಸುತ್ತೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದರೆ ಎಲ್ಲಾ 15 ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಬಹುದಾಗಿದೆ ಎಂದು ಹೇಳಿದರು.

click me!