ರಿಸಲ್ಟ್ಗೂ ಮುನ್ನ ಅನರ್ಹರ ಹೊಸ ಲೆಕ್ಕಾಚಾರ/ಗೆಲ್ಲುವ ಮುನ್ನವೇ ಪ್ರಮುಖ ಖಾತೆಗಳಿಗೆ ಪಟ್ಟು/ ಯಾವ ಖಾತೆ ಯಾರ ಕೈನಿಂದ ಜಾರಲಿದೆ/ ಸಿಎಂ ಬಳಿ ಇರುವ ಪ್ರಮುಖ ಖಾತೆಗಳ ಮೇಲೆ ಕಣ್ಣು
ಬೆಂಗಳೂರು(ಡಿ. 08) ಚುನಾವಣಾ ಫಲಿತಾಂಶ ಬರುವ ಮುನ್ನವೇ ಅನರ್ಹರು ಸಚಿವ ಸಂಪುಟಕ್ಕೆ ಸೇರುವ ಕನಸು ಕಾಣ್ತಿದ್ದಾರೆ. ಸಂಪುಟಕ್ಕೆ ಸೇರೋದಷ್ಟೇ ಅಲ್ಲ. ಉತ್ತಮ ಖಾತೆಯೂ ಸಿಗಲಿದೆ ಅನ್ನೋ ಲೆಕ್ಕಾಚಾರದ ಹೇಳಿಕೆಯನ್ನು ಸಹ ನೀಡ್ತಿದ್ದಾರೆ. ಅನರ್ಹರ ಈ ಹೇಳಿಕೆಯ ಬೆನ್ನಲ್ಲೇ ಬಿಜೆಪಿಯಲ್ಲಿ ಗಂಭೀರ ಚರ್ಚೆ ಶುರುವಾಗಿದ್ದು, ಪ್ರಮುಖ ಖಾತೆಗಳು ಹಿರಿಯ ಸಚಿವರಿಂದ ಕೈಜಾರಲಿದೆಯಾ ಅನ್ನೋ ಸಂಶಯ ವ್ಯಕ್ತಪಡಿಸ್ತಿದ್ದಾರೆ.
15 ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆದ್ದರೆ, ಸಂಪುಟ ಸೇರುತ್ತೇವೆ ಎಂಬ ಆತ್ಮವಿಶ್ವಾಸ ಅನರ್ಹರಲ್ಲಿ ಮನೆ ಮಾಡಿದೆ. ಯಡಿಯೂರಪ್ಪ ಸಂಪುಟದಲ್ಲಿ ನಮಗೆ ದೊಡ್ಡ ಖಾತೆಗಳೇ ದಕ್ಕಲಿವೆ ಅನ್ನೋ ವಿಶ್ವಾಸದಲ್ಲಿದ್ದಾರೆ 15 ಅನರ್ಹರು. ಈ ಎಲ್ಲಾ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.
undefined
ಕೆಲ ದಿನಗಳಲ್ಲೇ ಸಚಿವ ಸಂಪುಟ ವಿಸ್ತರಣೆಯಾಗೋದು ಪಕ್ಕಾ. ಆಗ ಎಲ್ಲರಿಗೂ ಅವಕಾಶ ಸಿಗುವುದು ಸಹ ಸ್ಪಷ್ಟ. ಆದ್ರೆ ಯಾವ ಖಾತೆಗಳನ್ನು ಅನರ್ಹರಿಗೆ ನೀಡಬಹುದು ಅನ್ನೋ ಲೆಕ್ಕಾಚಾರದ ಮಾತುಗಳು ಬಿಜೆಪಿಯಲ್ಲಿ ಕೇಳಿಬಂದಿದೆ. ಸಿಎಂ ಯಡಿಯೂರಪ್ಪ ಬಳಿ ಇರುವ ಮೂರು ಪ್ರಮುಖ ಖಾತೆಯತ್ತಲೇ ಅನರ್ಹರ ಚಿತ್ತ ಹರಿದಿದೆ.
ಬೈ ಇಲೆಕ್ಷನ್ ಫಲಿತಾಂಶ ಹಿಂಗ್ ಬಂದ್ರೆ BSY ಸರ್ಕಾರ ಸೇಫಾ?
ಹಾಗಾದರೆ ಕಣ್ಣಿಟ್ಟಿರುವ ಖಾತೆಗಳು ಯಾವವು?
ಬೆಂಗಳೂರು ನಗರಾಭಿವೃದ್ಧಿ , ಇಂಧನ ಮತ್ತು ಜಲಸಂಪನ್ಮೂಲ ಖಾತೆ ಸಿಎಂ ಬಿ.ಎಸ್ ಯಡಿಯೂರಪ್ಪ ಬಳಿ ಇದೆ. ಸಮಾಜ ಕಲ್ಯಾಣ ಖಾತೆ ಗೋವಿಂದ ಕಾರಜೋಳ ಅವರ ಬಳಿ ಇದೆ. ವೈದ್ಯಕೀಯ ಶಿಕ್ಷಣ ಅಶ್ವತ್ಥ್ ನಾರಾಯಣ್, ಕೃಷಿ ಖಾತೆ ಲಕ್ಷ್ಮಣ ಸವದಿ ಬಳಿ ಇದ್ದರೆ ಸಹಕಾರ ಖಾತೆ ಬಸವರಾಜ್ ಬೊಮ್ಮಾಯಿ ಬಳಿ ಇದೆ.
ಹಿರಿಯ ಸಚಿವರ ಖಾತೆಗಳು ಅನರ್ಹರ ತೆಕ್ಕೆಗೆ..?
ಸರ್ಕಾರ ರಚನೆಯ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ, ಅನರ್ಹರಿಗೆ ಉತ್ತಮ ಖಾತೆ ನೀಡಲು ಸಿಎಂ ಬಿಎಸ್ವೈ ಮನಸ್ಸು ಮಾಡಿದ್ದಾರೆ. ಈ ತಿರ್ಮಾನ ಜಾರಿಯಾದ್ರೆ, ಈಗ ಹಿರಿಯ ಸಚಿವರು ನಿಭಾಯಿಸುತ್ತಿರುವ ಖಾತೆಗಳು ಕೈಜಾರಲಿದೆ.
ಸದ್ಯ ಶ್ರೀರಾಮುಲು ನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ, ಆರ್.ಅಶೋಕ್ ಬಳಿ ಇರುವ ಪೌರಾಡಳಿತ ಮತ್ತು ನಗರಾಭಿವೃದ್ಧಿ, ಸುರೇಶ್ ಕುಮಾರ್ ಬಳಿ ಇರೋ ಕಾರ್ಮಿಕ, ಸಿಟಿ ವಿ ನಿರ್ವಹಿಸ್ತಿರೋ ಸಕ್ಕರೆ ಖಾತೆ, ಶಶಿಕಲಾ ಜೊಲ್ಲೆ ಬಳಿ ಇರುವ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಅನರ್ಹ ಶಾಸಕರ ಪಾಲಾಗಲಿವೆ.
ಎಲ್ಲದಕ್ಕೂ ನಾಳೆಯ ಫಲಿತಾಂಶವೇ ಉತ್ತರ ನೀಡಲಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ, ಅನರ್ಹರ ದೊಡ್ಡ ಪಡೆಯೇ ಬಿಎಸ್ವೈ ಸಂಪುಟದಲ್ಲಿ ಹೆಚ್ಚಿನ ಸಚಿವ ಸ್ಥಾನ ಪಡೆಯುವುದು ನಿಶ್ಚಿತ.