15 ಕ್ಷೇತ್ರಕ್ಕೆ 165 ಅಭ್ಯರ್ಥಿಗಳು: ಡಿ.5ರ ಉಪಚುನಾವಣೆ ರಣ ಕಣ ಅಂತಿಮ!

By Web DeskFirst Published Nov 22, 2019, 7:53 AM IST
Highlights

15 ಕ್ಷೇತ್ರಕ್ಕೆ 165 ಅಭ್ಯರ್ಥಿಗಳು| ಡಿ.5ರ ಉಪಚುನಾವಣೆ ರಣ ಕಣ ಅಂತಿಮ| ನಾಮಪತ್ರ ಹಿಂತೆಗೆತ ಅವಧಿ ಅಂತ್ಯ|ಕ ಣದಿಂದ ಹಿಂದೆ ಸರಿದ 53 ಅಭ್ಯರ್ಥಿಗಳು ಶಿವಾಜಿನಗರದಲ್ಲಿ ಗರಿಷ್ಠ 19, ಕೆ.ಆರ್‌.ಪೇಟೆಯಲ್ಲಿ ಕನಿಷ್ಠ ಅಭ್ಯರ್ಥಿಗಳು ಕಣದಲ್ಲಿ| ಬಂಡೆದ್ದ ಶರತ್‌, ಕವಿರಾಜ್‌ರನ್ನು ಉಚ್ಚಾಟಿಸಿದ ಬಿಜೆಪಿ

ಬೆಂಗಳೂರು[ನ.22]: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸಬಲ್ಲ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 165 ಮಂದಿ ಕಣದಲ್ಲಿದ್ದಾರೆ.

ಶುಕ್ರವಾರದಿಂದ ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಿರುಸಿನ ಪ್ರಚಾರ ಆರಂಭಿಸಲಿದ್ದು, ಡಿ.3ರ ಸಂಜೆವರೆಗೆ ಬಹಿರಂಗ ಪ್ರಚಾರ ಮುಂದುವರಿಯಲಿದೆ. ಡಿ.5ರಂದು ಮತದಾನ, 9ರಂದು ಮತ ಎಣಿಕೆ ನಡೆಯಲಿದೆ.

ಉಪಚುನಾವಣೆಗೆ ಸ್ಪರ್ಧಿಸಲು ಒಟ್ಟು 218 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಪೈಕಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಗುರುವಾರ 53 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಂಡಿದ್ದಾರೆ. ಅಂತಿಮವಾಗಿ ಕಣದಲ್ಲಿ ಅಧಿಕೃತವಾಗಿ 165 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಈ ಪೈಕಿ 9 ಮಂದಿ ಮಹಿಳೆಯರು.

ಅಥಣಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗುರುದಾಶ್ಯಾಳ್‌, ಹಿರೇಕೆರೂರು ಜೆಡಿಎಸ್‌ ಹುರಿಯಾಳು ಶಿವಾಚಾರ್ಯ ಶಿವಲಿಂಗ ಸ್ವಾಮೀಜಿ, ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್‌ ಪುತ್ರಿ ಸೃಷ್ಟಿಪಾಟೀಲ್‌, ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ ಬಿಜೆಪಿ ಹುರಿಯಾಳು ಕೆ.ಗೋಪಾಲಯ್ಯ ಪತ್ನಿ ಹೇಮಲತಾ ನಾಮಪತ್ರಗಳನ್ನು ವಾಪಸ್‌ ಪಡೆದುಕೊಂಡವರಲ್ಲಿ ಪ್ರಮುಖರಾಗಿದ್ದಾರೆ. ಅಧಿಕೃತ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆತ ಜೆಡಿಎಸ್‌ಗೆ ತೀವ್ರ ಮುಜಗರವನ್ನುಂಟು ಮಾಡಿದೆ. ಬಿಜೆಪಿಗೆ ಗೆಲುವಿನ ವಿಶ್ವಾಸ ಮತ್ತಷ್ಟುಹೆಚ್ಚಿಸಿದೆ.

ಚುನಾವಣಾ ಆಯೋಗದ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರು ಕಣದಲ್ಲಿ ಉಳಿದಿರುವ ಒಟ್ಟು ಅಭ್ಯರ್ಥಿಗಳ ವಿವರ ನೀಡಿದರು.

ಶಿವಾಜಿನಗರದಲ್ಲಿ ಹೆಚ್ಚು ಸ್ಪರ್ಧಿಗಳು:

ಬೆಂಗಳೂರಿನ ಶಿವಾಜಿನಗರದಲ್ಲಿ ಅತಿ ಹೆಚ್ಚು ಅಂದರೆ 19 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಹೊಸಕೋಟೆಯಲ್ಲಿ 17, ಕೆ.ಆರ್‌.ಪುರದಲ್ಲಿ 13 ಮಂದಿ ಸ್ಪರ್ಧಿಸಿದ್ದಾರೆ. ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳಿದ್ದು, ಕೇವಲ 7 ಮಂದಿ ಮಾತ್ರ ಕಣದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಹುಣಸೂರು ಕ್ಷೇತ್ರದಲ್ಲಿ ಹೆಚ್ಚಿನ ನಾಮಪತ್ರಗಳನ್ನು ಹಿಂಪಡೆದುಕೊಳ್ಳಲಾಗಿದೆ. 21 ಮಂದಿ ನಾಮಪತ್ರ ಸಲ್ಲಿಸಿದರೆ 11 ಮಂದಿ ಉಮೇದುವಾರಿಕೆ ವಾಪಸ್‌ ಪಡೆದುಕೊಂಡಿದ್ದಾರೆ. ಅಂತಿಮವಾಗಿ 10 ಮಂದಿ ಕಣದಲ್ಲಿದ್ದಾರೆ. ಅಥಣಿಯಲ್ಲಿ 16 ಅಭ್ಯರ್ಥಿಗಳ ಪೈಕಿ 8 ಮಂದಿ ವಾಪಸ್‌ ಪಡೆದಿದ್ದು, 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳಲ್ಲಿ ಒಬ್ಬರು ನಾಮಪತ್ರ ಹಿಂಪಡೆದಿದ್ದು 9 ಅಭ್ಯರ್ಥಿಗಳ ಅಖಾಡದಲ್ಲಿ ಸೆಣಸಲಿದ್ದಾರೆ. ಗೋಕಾಕ್‌ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಯಾರೊಬ್ಬರೂ ಹಿಂಪಡೆದಿಲ್ಲ. ಯಲ್ಲಾಪುರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳಲ್ಲಿ 4 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಒಟ್ಟು 7 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ ಎಂದು ಹೇಳಿದರು.

ಹಿರೇಕೆರೂರು ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಕಿ 5 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಇನ್ನುಳಿದ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಲ್ಲಿ 4 ಅಭ್ಯರ್ಥಿಗಳು ನಾಮಪತ್ರಗಳು ಹಿಂಪಡೆದಿದ್ದು, 9 ಅಭ್ಯರ್ಥಿಗಳು ಅಂತಿಮ ಸ್ಪರ್ಧೆಯಲ್ಲಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳ ನಾಮಪತ್ರಗಳ ಸ್ವೀಕೃತವಾಗಿದ್ದು, 3 ಅಭ್ಯರ್ಥಿಗಳು ಹಿಂಪಡೆದುಕೊಂಡಿದ್ದಾರೆ. 13 ಅಭ್ಯರ್ಥಿಗಳು ಸೆಣಸಾಡಲಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಯಾರೂ ನಾಮಪತ್ರಗಳನ್ನು ಹಿಂಪಡೆದುಕೊಂಡಿಲ್ಲ. ಕೆ.ಆರ್‌.ಪುರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳಲ್ಲಿ ಇಬ್ಬರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. 13 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿಸಿದರು.

ಯಶವಂತಪುರ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳಲ್ಲಿ ಯಾರೂ ನಾಮಪತ್ರಗಳನ್ನು ಹಿಂಪಡೆದುಕೊಂಡಿಲ್ಲ. ಹೀಗಾಗಿ 12 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯಲಿದೆ. ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳ ಪೈಕಿ ಒಬ್ಬರು ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಅಂತಿಮವಾಗಿ 12 ಅಭ್ಯರ್ಥಿಗಳು ಸೆಣಸಾಟ ನಡೆಸಲಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿದ್ದು, 7 ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್‌ ಪಡೆದಿದ್ದಾರೆ. 19 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ. ಹೊಸಕೋಟೆ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದುಕೊಂಡಿದ್ದು, 17 ಮಂದಿ ಕಣದಲ್ಲಿದ್ದಾರೆ. ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಯಾರೊಬ್ಬರೂ ನಾಮಪತ್ರ ಹಿಂಪಡೆಯದ ಕಾರಣ 7 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ 21 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದ್ದು, 11 ಮಂದಿ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಇನ್ನುಳಿದ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ವಿವರ ನೀಡಿದರು.

ಕಣದಲ್ಲಿರುವವರು ಯಾರು?

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

click me!