
ಬೆಂಗಳೂರು, (ಆಗಸ್ಟ್. 05): ನ್ಯಾಶನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಮಾಡಿದೆ. ಈ ವಿಚಾರವಾಗಿ ಬಿಜೆಪಿಯು ಕಾಂಗ್ರೆಸ್ ಗೆ ಟೀಕೆ ಮಾಡಿದೆ.
CongressAgainstDalits ಎಂಬ ಹ್ಯಾಷ್ ಟ್ಯಾಗ್ ಮುಲಕ ಸರಣಿ ಟ್ವೀಟ್ ಮಾಡಿದ ಬಿಜೆಪಿ, ಸಿದ್ದರಾಮಯ್ಯ, ಡಿಕೆಶಿ ಆದಿಯಾಗಿ ಕಾಂಗ್ರೆಸ್ ನಾಯಕರೆಲ್ಲರೂ 75 ರ ಈ ಇಳಿ ಹರೆಯದಲ್ಲೂ ಸೋನಿಯಾ ಇಡಿ ವಿಚಾರಣೆಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮರುಕ ಪಟ್ಟರು. ದುರಂತ ನಾಯಕ ಮಲ್ಲಿಕಾರ್ಜುನ ಖರ್ಗೆ 80 ವರ್ಷ ದಾಟಿದ್ದಾರೆ, ದುಃಖಿಸುವವರೇ ಇಲ್ಲ! ದಲಿತ ಎಂಬ ಕಾರಣಕ್ಕಾಗಿ ಇಷ್ಟೊಂದು ನಿಕೃಷ್ಟವೇ ಎಂದು ಪ್ರಶ್ನಿಸಿದೆ.
ತಪ್ಪು ಮಾಡಿದವರು ಯಾರೇ ಆದರೂ ಕ್ರಮ ಕೈಗೊಳ್ಳಿ: ಮಲ್ಲಿಕಾರ್ಜುನ ಖರ್ಗೆ
ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸುವ ಕಾರಣದಿಂದ ಮಲ್ಲಿಕಾರ್ಜುನ ಖರ್ಗೆ ತಮ್ಮ 80 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ನಕಲಿ ಗಾಂಧಿ ಕುಟುಂಬಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಿರುವ ದಲಿತ ನಾಯಕ ಖರ್ಗೆ ಅವರನ್ನು ತನಿಖೆ ನಡೆಸುತ್ತಿರುವಾಗ ಕಾಂಗ್ರೆಸ್ ಪಕ್ಷ ಮೌನವಾಗಿದೆ. ಏಕೆ ಈ ತಾರತಮ್ಯ? ನಕಲಿ ಗಾಂಧಿಗಳು ತನಿಖಾ ಸಂಸ್ಥೆಯ ಎದುರು ವಿಚಾರಣೆಗೆ ಹಾಜರಾದಾಗ ಕಾಂಗ್ರೆಸ್ ಪಕ್ಷ ಆಕಾಶ ಭೂಮಿ ಒಂದಾಗುವಂತೆ ಪ್ರತಿಭಟಿಸಿತು. ಆದರೆ ಈಗ ದಲಿತ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಜಾರಿ ನಿರ್ದೇಶನಾಲಯದ ಎದುರು ಕುಳಿತಾಗ ಕಾಂಗ್ರೆಸ್ ದಿವ್ಯ ಮೌನ ಅನುಸರಿಸುತ್ತಿದೆ. ಏಕೆ ಈ ದ್ವಂದ್ವ ನೀತಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
8 ಗಂಟೆ ವಿಚಾರಣೆ ಮಾಡಿದ ಇಡಿ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸುಮಾರು 8 ಗಂಟೆ ವಿಚಾರಣೆ ನಡೆಸಲಾಯಿತು ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 12:40 ರ ಸುಮಾರಿಗೆ ಐಟಿಒ ಬಳಿಯ ಹೆರಾಲ್ಡ್ ಹೌಸ್ ಕಟ್ಟಡ ತಲುಪಿದ 80 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಖರ್ಗೆ ಇಡಿ ಅಧಿಕಾರಿ ಭೇಟಿಯಾಗಿ ವಿಚಾರಣೆ ಎದುರಿಸಿದರು. ನಂತರ ರಾತ್ರಿ 8:30ರ ಸುಮಾರಿಗೆ ಖರ್ಗೆ ಇಡಿ ಕಚೇರಿಯಿಂದ ತೆರಳಿದ್ದರು.
ಸೋನಿಯಾ ವಿಚಾರಣೆ ವಿರುದ್ಧ ಪ್ರತಿಭಟನೆ ಮಾಡಿದ್ದ ಕಾಂಗ್ರೆಸ್
ಹೌದು....ಈ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೊಳಪಡಿಸಿದ್ದರಿಂದ ಕಾಂಗ್ರೆಸ್ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿತ್ತು. ದೆಹಲಿ ಕಾಂಗ್ರೆಸ್ ನಾಯಕರು ದೊಡ್ಡ ಹೈಡ್ರಾಮಾ ಮಾಡಿದ್ದರು. ಇನ್ನು ಬೆಂಗಳೂರಿನಲ್ಲೂ ಸಹ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.