
ಬೆಂಗಳೂರು(ಆ.20): ಸಿದ್ದರಾಮಯ್ಯ ಅವರ ಸಮಾಜವಾದದ ಮುಖವಾಡ ಕಳಚಿ ಬಿದ್ದಿದ್ದು, ರಾಜೀನಾಮೆ ನೀಡಿ ಮನೆಗೆ ತೊಲಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸೋಮವಾರ ವಿಧಾನಸೌಧ-ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ-ಜೆಡಿಎಸ್ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ. ಸಮಾಜವಾದಿ ಎನ್ನುತ್ತಲೇ ಅವರು ಮಜಾವಾದಿಯಾಗಿದ್ದಾರೆ. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲ ಎಂದಿದ್ದಾರೆ. ಆದರೆ, ಈಗ ಮೈತುಂಬೆಲ್ಲಾ ಅಳಿಸಲಾಗದ ಭ್ರಷ್ಟಾಚಾರದ ಕಲೆಗಳು ತುಂಬಿವೆ. ಮತ್ತೊಬ್ಬರ ನೈತಿಕತೆ ಕುರಿತು ಮಾತನಾಡಿರುವ ಅವರು ನೈತಿಕತೆ ಇದ್ದರೆ ಮೊದಲು ರಾಜೀನಾಮೆ ನೀಡಲಿ ಎಂದು ವಾಗ್ದಾಳಿ ನಡೆಸಿದರು.
ಸಸ್ಪೆಂಡ್ ಆದ ಪೇದೆಗೆ ಸಿಎಂ ಪದಕ: ವಿಜಯೇಂದ್ರ ಆಕ್ರೋಶ
ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ- ಜೆಡಿಎಸ್ ನಿರಂತರ ಹೋರಾಟ ನಡೆಸುತ್ತಿವೆ. ಹೋರಾಟ ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೈಸೂರಿನ ಮುಡಾದಿಂದ ನಿವೇಶನಗಳನ್ನು ನುಂಗಿ ಹಾಕಿದ್ದಾರೆ. ರಾಜ್ಯಪಾಲರು ಪ್ರಕರಣ ಸಂಬಂಧ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ ಎಂದರು.
ಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಸಿದ್ದರಾಮಯ್ಯನವರು ಗೂಂಡಾಗಿರಿಗೆ ಇಳಿದಿದ್ದಾರೆ. ರಾಜ್ಯಪಾಲರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಕಾಂಗ್ರೆಸ್ ಸರ್ಕಾರ ಇದೆ. ಹೈಕಮಾಂಡ್ ಕಾಪಾಡುವ, ಸಚಿವರು- ಶಾಸಕರು ಬೆನ್ನಿಗೆ ನಿಲ್ಲುವ ಭ್ರಮೆಯಿಂದ ಸಿದ್ದರಾಮಯ್ಯ ಹೊರಗೆ ಬರಬೇಕು. ಕಾನೂನನ್ನು ಎದುರಿಸಬೇಕು ಎಂದು ಆಗ್ರಹಿಸಿದರು.
ಸಾಕಷ್ಟು ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಲಿ, ನಾವೇನು ಬೇಡ ಎಂದಿಲ್ಲ. ಆದರೆ, ಮೊದಲು ರಾಜೀನಾಮೆ ನೀಡಿ ನಂತರ ಕಾನೂನು ಹೋರಾಟ ಮಾಡಲಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.