ಬಿಜೆಪಿ ಭಿನ್ನಮತ ನಡುವೆಯೇ ಮೋದಿ, ವಿಜಯೇಂದ್ರ ಸಮಾಲೋಚನೆ: ಕುತೂಹಲ ಮೂಡಿಸಿದ ಪ್ರಧಾನಿ ಭೇಟಿ!

Published : Dec 19, 2024, 04:28 AM IST
ಬಿಜೆಪಿ ಭಿನ್ನಮತ ನಡುವೆಯೇ ಮೋದಿ, ವಿಜಯೇಂದ್ರ ಸಮಾಲೋಚನೆ: ಕುತೂಹಲ ಮೂಡಿಸಿದ ಪ್ರಧಾನಿ ಭೇಟಿ!

ಸಾರಾಂಶ

ವಿಜಯೇಂದ್ರ ಅವರ ಪ್ರಧಾನಿ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿದ್ದು, ರಾಜ್ಯದ ಬೆಳವಣಿಗೆಗಳನ್ನು ಮೋದಿ ಅವರ ಗಮನಕ್ಕೆ ತಂದಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ, ಇದನ್ನು ಸ್ವತಃ ವಿಜಯೇಂದ್ರ ಅವರೇ ನಿರಾಕರಿಸಿದ್ದಾರೆ.

ಬೆಂಗಳೂರು(ಡಿ.19): ರಾಜ್ಯ ಬಿಜೆಪಿ ಭಿನ್ನಮತ ತಾರಕಕ್ಕೇರಿರುವ ನಡುವೆಯೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ವಿಜಯೇಂದ್ರ ಅವರ ಪ್ರಧಾನಿ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿದ್ದು, ರಾಜ್ಯದ ಬೆಳವಣಿಗೆಗಳನ್ನು ಮೋದಿ ಅವರ ಗಮನಕ್ಕೆ ತಂದಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ, ಇದನ್ನು ಸ್ವತಃ ವಿಜಯೇಂದ್ರ ಅವರೇ ನಿರಾಕರಿಸಿದ್ದಾರೆ. ಮಂಗಳವಾರ ದೆಹಲಿಗೆ ತೆರಳಿದ್ದ ಅವರು ಬುಧವಾರ ಮಧ್ಯಾಹ್ನ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸುಮಾರು 15 ನಿಮಿಷಗಳ ಕಾಲ ಪಕ್ಷ ಸಂಘಟನೆ ಕುರಿತು ಮಾರ್ಗದರ್ಶನ ಪಡೆದರು.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೋದಿ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈಗ ಅವರನ್ನು ಭೇಟಿ ಮಾಡಿ ಆಶೀರ್ವಾದ ಮಾಡಿದೆ. ಆದರೆ, ಪಕ್ಷದ ರಾಜ್ಯ ಘಟಕದ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಪಕ್ಷದ ವಿಷಯಗಳನ್ನು ಪ್ರಧಾನಿಗಳ ಮುಂದೆ ಪ್ರಸ್ತಾಪ ಮಾಡುವುದು ಸರಿಯಲ್ಲ. ಅವರು ಪ್ರಧಾನಿ ಹುದ್ದೆಯಲ್ಲಿರುವವರು. ಅವರ ಮುಂದೆ ಪಕ್ಷದಲ್ಲಿನ ಭಿನ್ನಮತ ಪ್ರಸ್ತಾಪಿಸಿದರೆ ನಾನು ಸಣ್ಣವನಾಗುತ್ತೇನೆ. ಅಗತ್ಯವಿದ್ದರೆ ಅಂಥ ವಿಷಯಗಳನ್ನು ಪಕ್ಷದ ನಾಯಕರ ಮುಂದೆ ಪ್ರಸ್ತಾಪಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರು.

ಪಕ್ಷ ಬಲವರ್ಧನೆಗೆ ಪ್ರೇರಣೆಯ ಕಿರಣ: ‘ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದೆ. ಭಾರತದ ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳ ಪ್ರಗತಿ ಜಾಗತಿಕ ಮಟ್ಟದಲ್ಲಿ ಅಗ್ರ ಸಾಧನೆಗೈಯಲು ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಕೊಡುಗೆ ಮುಂಚೂಣಿ ಸ್ಥಾನದಲ್ಲಿರುವಂತೆ ಕಾಳಜಿ ವಹಿಸಿ ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತಾಗಬೇಕು. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಯೋಜಿತವಾಗಿ ತೊಡಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸುವಂತೆ ಪ್ರಧಾನಿಗಳು ಸೂಚಿಸಿದರು" ಎಂದು ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಅಪೂರ್ವ ಕ್ಷಣಗಳು ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ದೊರೆತ ಪ್ರೇರಣೆಯ ಕಿರಣಗಳು. ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಮೋದಿ ಅವರ ಕಾರ್ಯಶೈಲಿ ನಮ್ಮಂಥ ಕಾರ್ಯಕರ್ತರಿಗೆ ನಿತ್ಯ ಚೈತನ್ಯದ ಚಿಲುಮೆ. ಅವರ ಆಶೀರ್ವಾದದ ಮಾರ್ಗದರ್ಶನ ರಾಜ್ಯದಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ಅದಮ್ಯ ಉತ್ಸಾಹ ತುಂಬಿದೆ. ಅವರ ಭೇಟಿಯ ಸಂದರ್ಭದ ಮಾತುಗಳು ಸಂಘಟನೆಯ ಬಲವೃದ್ಧಿ ಜೊತೆ ಜೊತೆಗೆ ರಾಷ್ಟ್ರ ಬಲಿಷ್ಠಗೊಳಿಸುವ ಮಹಾ ಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಪ್ರೇರಣೆ ನೀಡಿತು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ