ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ ನೀಡಿದ್ದು ಸುಳ್ಳು: ರವಿ

By Kannadaprabha News  |  First Published Jun 23, 2021, 7:38 AM IST

* ವರಿಷ್ಠರಿಗೆ ಅರುಣ್‌ ಸಿಂಗ್‌ ವರದಿ ನೀಡಿದ್ದು ಸುಳ್ಳು: ರವಿ

* ದುರುದ್ದೇಶಪೂರ್ವಕವಾಗಿ ಸುದ್ದಿ ಹಬ್ಬಿಸ್ತಿದ್ದಾರೆ

* ರಾಜ್ಯ ಉಸ್ತುವಾರಿ 3 ದಿನದಿಂದ ದಿಲ್ಲಿಯಲ್ಲಿಲ್ಲ


ಬಾಳೆಹೊನ್ನೂರು(ಜೂ.23): ಮುಖ್ಯಮಂತ್ರಿ ಬದಲಾವಣೆ ಎಂಬುದು ಒಂದು ಸುಳ್ಳು ಸುದ್ದಿಯಾಗಿದ್ದು, ಇದು ಯಾರದ್ದೋ ಷಡ್ಯಂತ್ರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ದೆಹಲಿಯಲ್ಲಿ ವರಿಷ್ಠರಿಗೆ ವರದಿ ನೀಡಿದರು ಎಂಬುವುದು ಸಹ ದುರುದ್ದೇಶಪೂರ್ವಕವಾಗಿ ಹಬ್ಬಿಸುತ್ತಿರುವ ಸುಳ್ಳುಸುದ್ದಿ ಎಂದು ಕಿಡಿಕಾರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪದ ಖಾಂಡ್ಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ನಾನು ಸಾರ್ವಜನಿಕವಾಗಿ ಮಾಡಲು ಬಯಸುವುದಿಲ್ಲ. ಕೆಲವರು ಉದ್ದೇಶ ಅಥವಾ ದುರುದ್ದೇಶ ಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದರು.

Latest Videos

undefined

ಅರುಣ್‌ ಸಿಂಗ್‌ ಹಾಗೂ ನಾನು ಕಳೆದ ಮೂವತ್ತು ವರ್ಷಗಳಿಂದ ಒಡನಾಡಿಗಳಾಗಿದ್ದು, ಪಕ್ಷದಲ್ಲಿ ಇಬ್ಬರೂ ಸಕ್ರಿಯವಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಅವರಲ್ಲಿ ಮಂಗಳವಾರ ಪತ್ರಿಕೆಯಲ್ಲಿ ಪ್ರಕಟ ಆಗಿರುವ ವರದಿಯ ಬಗ್ಗೆ ವಿಚಾರಿಸಿದ್ದೇನೆ. ಅವರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಇಲ್ಲ. ಕೆಲವು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿದ್ದು, ಈ ಹಿಂದೆ ಯಾರದ್ದೋ ಷಡ್ಯಂತ್ರವಿದೆ ಎಂಬ ಅನುಮಾನ ಮೂಡುತ್ತಿದೆ. ಸಿಎಂ ಬದಲಾವಣೆ ಬಗ್ಗೆ ಅಪಪ್ರಚಾರ ಮಾಡಬೇಕು ಎಂಬ ಷಡ್ಯಂತ್ರ ಹಾಗೂ ಈ ಸುದ್ದಿಯನ್ನು ಸದಾ ಜೀವಂತವಾಗಿ ಇಡಬೇಕು ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದರು.

ಕೆಲವರು ಬಹಳ ದೊಡ್ಡ ಷಡ್ಯಂತ್ರದ ಕಾರಣದಿಂದಲೇ ಸುಳ್ಳು ಸುದ್ದಿಗಳನ್ನು ನಿತ್ಯ ಬಿಡುವ ಕೆಲಸ ಮಾಡುತ್ತಿದ್ದಾರೆ. ಅರುಣ್‌ ಸಿಂಗ್‌ ಅವರು ನನ್ನ ಬಳಿ ಈ ಬಗ್ಗೆ ವಿಚಾರಿಸಿದಾಗ ನಾನು ಮೂರು ದಿನ ಬಿಟ್ಟು ಬರುತ್ತೇನೆ. ಇದೀಗ ದೆಹಲಿಯಲ್ಲಿ ಇಲ್ಲ. ಪತ್ರಿಕೆಯಲ್ಲಿ ಏನು ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ನೀವೇ ವಿವರಗಳನ್ನು ನನಗೆ ಕೊಡಿ ಎಂದು ಕೇಳಿದ್ದಾರೆ. ಸುಳ್ಳು ಸುದ್ದಿಯ ಸೃಷ್ಟಿಕರ್ತರು ಇಂತಹ ಕೆಲಸ ಮಾಡಿದ್ದು, ಇದು ಸುಳ್ಳು ಸುದ್ದಿ ಎಂದೇ ನಾನು ಹೇಳ ಬಯಸುತ್ತೇನೆ. ಈ ಸುಳ್ಳು ಸುದ್ದಿಗೆ ಪುನಃ ಚರ್ಚೆ ಹುಟ್ಟು ಹಾಕಲು ನಾನು ಬಯಸುವುದಿಲ್ಲ ಎಂದರು.

click me!