* ದೆಹಲಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸುದ್ದಿಗೋಷ್ಠಿ
* ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಹಿನ್ನಲೆ ರಾಜ್ಯ ಪ್ರವಾಸ ಕೈಗೊಂಡ ಅರುಣ್ ಸಿಂಗ್
* ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ಪ್ರವಾಸ
* ವಿಜಯೇಂದ್ರ, ಯಡಿಯೂರಪ್ಪನವರ ಬಗ್ಗೆಯೂ ಪ್ರತಿಕ್ರಿಯಿಸಿದ ಸಿಂಗ್
ನವದೆಹಲಿ, (ಆ.30): ಸಚಿವರ ಖಾತೆ ಕ್ಯಾತೆ ಹಾಗೂ ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರ ಅವರ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಇಂದು (ಆ.30) ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಸದ್ಯಕ್ಕೆ ಯಾವ ಖಾತೆಯೂ ಬದಲಾವಣೆ ಇಲ್ಲ ಎಂದು ಸ್ಪಷ್ಟಡಿಸಿದರು. ಈ ಮೂಲಕ ಖಾತೆ ಬಗ್ಗೆ ಕ್ಯಾತೆ ತೆಗೆದವರಿಗೆ ಸಿಂಗ್ ಪರೋಕ್ಷವಾಗಿ ಚಾಟಿ ಬೀಸಿದರು.
ಬಿಎಸ್‌ವೈ ಮಹತ್ವದ ಘೋಷಣೆ: ಗಣೇಶ ಹಬ್ಬದ ಬಳಿಕ ಚಾಲನೆ
ಯಾವುದೇ ಪ್ರತಿಫಲಗಳ ಅಪೇಕ್ಷೆ ಇಲ್ಲದೆ ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರೆಲ್ಲರ ನಡುವೆ ಇವರಿಗೆ ಅಧಿಕಾರ ಸಿಕ್ಕಿದೆ. ಈಗ ಕೊಟ್ಟಿರುವ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಲಿ. ಯಾವ ಖಾತೆಯೂ ಬದಲಾವಣೆ ಇಲ್ಲ ಎಂದು ಖಡಕ್ ಆಗಿ ಹೇಳಿದರು.
ಸಚಿವ ಸಂಪುಟದಲ್ಲಿ ವಿಜಯೇಂದ್ರ ಸೇರ್ಪಡೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ವಿಜಯೇಂದ್ರ ಚಾಣಾಕ್ಷತನ ಇರುವ ಯುವ ನಾಯಕ. ಅವರ ಕೆಲಸದ ಬಗ್ಗೆ ನನಗೆ ಗೊತ್ತಿದೆ. ಸದ್ಯ ಉಪಾದ್ಯಕ್ಷರಾಗಿದ್ದಾರೆ. ಸೂಕ್ತ ಸಮಯದಲ್ಲಿ ಪಕ್ಷ ನಿರ್ಧಾರ ಕೈಗೊಳ್ಳುತ್ತೆ ಎಂದರು.
ಮೈಸೂರು ಭಾಗದಲ್ಲಿ ಪ್ರವಾಸ
ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ಪ್ರವಾಸ ಕೈಗೊಳ್ಳಲಿದ್ದೇನೆ. ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಿದರೆ ಮುಂದಿನ ಚುನಾವಣೆಯಲ್ಲಿ ಬಹುಮತ ಸಾಧಿಸಲು ನೆರವಾಗಲಿದೆ. ಹೀಗಾಗಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಕರ್ನಾಟಕದ ಬಿಜೆಪಿಯಲ್ಲಿ ಯಡಿಯೂರಪ್ಪ ಅತಿ ಹಿರಿಯ ನಾಯಕ ಹಾಗೂ ಮತ್ತು ಪ್ರಶ್ನಾತೀತ ನಾಯಕರು. ಅವರ ರಾಜ್ಯ ಪ್ರವಾಸದಿಂದ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಅವರಿಗೆ ರಾಜ್ಯದ ಪ್ರತಿ ಮೂಲೆಯೂ ಗೊತ್ತಿದೆ. ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು