ಹೊಸ ವರ್ಷಕ್ಕೆ ಮತ್ತಷ್ತು ರಾಡಿ ಎಬ್ಬಿಸುತ್ತಾ ಬಿಜೆಪಿ ಬಣ ರಾಜಕೀಯ? ಹೊಸ ಹೋರಾಟದ ಸುಳಿವು ನೀಡಿದ ಯತ್ನಾಳ್!

By Kannadaprabha News  |  First Published Dec 23, 2024, 7:59 AM IST

ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಅಸಮಾಧಾನಿತ ನಾಯಕರ ಬಣವು ರಾಜ್ಯ ಪ್ರವಾಸ ಕೈಗೊಳ್ಳಲು ಚಿಂತನೆ ನಡೆಸಿದೆ. ಕಡೆಗಣಿಸಲ್ಪಟ್ಟ ಭಾವನೆ ಹೊಂದಿರುವ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ಉದ್ದೇಶ ಹೊಂದಿದ್ದಾರೆ.


ಬೆಂಗಳೂರು (ಡಿ.23): ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯ ಹೊಸ ವರ್ಷದಲ್ಲಿ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದ್ದು, ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಅಸಮಾಧಾನಿತ ನಾಯಕರ ಬಣ ತಂಡಗಳನ್ನಾಗಿ ಮಾಡಿಕೊಂಡು ರಾಜ್ಯ ಪ್ರವಾಸ ಕೈಗೊಳ್ಳಲು ಚಿಂತನೆ ನಡೆಸಿದೆ.

ಈ ರಾಜ್ಯ ಪ್ರವಾಸಕ್ಕೂ ಮತ್ತು ಎರಡನೇ ಹಂತದ ವಕ್ಫ್‌ ಆಸ್ತಿ ವಿವಾದ ಕುರಿತ ಹೋರಾಟಕ್ಕೂ ಸಂಬಂಧವಿಲ್ಲ. ಈಗಿರುವ ಹಿರಿಯ ನಾಯಕರ ನೇತೃತ್ವದಲ್ಲಿ ನಾಲ್ಕೈದು ತಂಡಗಳನ್ನಾಗಿ ಮಾಡಿಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಕಡೆಗಣಿಸಲ್ಪಟ್ಟ ಭಾವನೆ ಹೊಂದಿರುವ ಅಸಮಾಧಾನಿತ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲು ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

Tap to resize

Latest Videos

undefined

ದೆಹಲಿ ಭೇಟಿ ಬಳಿಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಗುಟರು ಹಾಕುತ್ತಿದ್ದ ಯತ್ನಾಳ ಮತ್ತಿತರ ನಾಯಕರ ಬಣ ತುಸು ಮೌನಕ್ಕೆ ಶರಣಾಗಿತ್ತು. ಈ ವಿಷಯವನ್ನು ಕೈಬಿಡದೆ ಜೀವಂತವಾಗಿಡಬೇಕು ಎಂಬ ನಿಲುವಿಗೆ ಬಂದಿರುವ ಆ ಬಣದ ನಾಯಕರು ತಂಡಗಳ ರೂಪದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎರಡು ಮತ್ತು ಮೂರನೇ ಹಂತದ ಮುಖಂಡರೊಂದಿಗೆ, ಹಿರಿಯ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸುವುದರ ಜತೆಗೆ ಅವರಲ್ಲಿ ಪರ್ಯಾಯ ನಾಯಕತ್ವದ ಅನಿವಾರ್ಯತೆಯ ಬೀಜ ಬಿತ್ತುವ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಇದು ಇನ್ನೂ ಚಿಂತನೆ ರೂಪದಲ್ಲಿದ್ದು, ಇನ್ನೊಂದು ವಾರದಲ್ಲಿ ಯತ್ನಾಳ ಬಣದ ನಾಯಕರು ಮತ್ತೊಂದು ಬಾರಿ ಸಭೆ ಸೇರಿ ಪ್ರವಾಸದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಮಂಡಲದ ಅಧಿವೇಶನ ಹಿನ್ನೆಲೆಯಲ್ಲಿ ಯತ್ನಾಳ ಬಣದ ಎಲ್ಲ ನಾಯಕರೂ ವ್ಯಸ್ತರಾಗಿದ್ದರು. ಇದೀಗ ಈ ತಿಂಗಳ ಅಂತ್ಯದವರೆಗೆ ಪಕ್ಷದ ಸಂಘಟನಾ ಪರ್ವದ ಯಶಸ್ವಿಗೊ‍ಳಿಸುವಲ್ಲಿ ನಿರತರಾಗಬೇಕಾಗುತ್ತದೆ. ಹೀಗಾಗಿ, ಹೊಸ ವರ್ಷದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಯಾವುದೇ ಕಾರಣಕ್ಕೂ ವಿಜಯೇಂದ್ರ ನಾಯಕತ್ವದ ವಿರುದ್ಧದ ಹೋರಾಟವನ್ನು ಕೈಬಿಡದೇ ಇರಲು ತೀರ್ಮಾನಿಸಿರುವ ಯತ್ನಾಳ ಬಣದ ನಾಯಕರು ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗದೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮಟ್ಟದವರೆಗೆ ಕೊಂಡೊಯ್ಯಲು ಬಯಸಿದ್ದಾರೆ ಎನ್ನಲಾಗಿದೆ.

27ರ ಬಳಿಕ 2ನೇ ಹಂತದ ವಕ್ಫ್ ಹೋರಾಟ ಶುರು?

ವಕ್ಫ್ ಆಸ್ತಿ ವಿವಾದ ಕುರಿತಂತೆ ಮೊದಲ ಹಂತದ ಹೋರಾಟ ಮುಗಿಸಿರುವ ಯತ್ನಾಳ ಬಣದ ನಾಯಕರು ಈ ತಿಂಗಳ 27ರ ಬಳಿಕ ಎರಡನೇ ಹಂತದ ಹೋರಾಟ ಆರಂಭಿಸಲು ಮುಂದಾಗಿದ್ದಾರೆ. ಬಹುತೇಕ ಬಳ್ಳಾರಿ ಅಥವಾ ವಿಜಯನಗರ ಜಿಲ್ಲೆಗಳಿಂದ ಈ ಹೋರಾಟ ಆರಂಭಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಆ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿ ವಿವಾದ ಸಂಬಂಧ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ

click me!