ಕೋಟೆನಾಡು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಿದ್ದು, ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಇದೀಗ ಭಿನ್ನಮತ ಸ್ಫೋಟ ಉಂಟಾಗಿದೆ.
ಚಿತ್ರದುರ್ಗ (ಮಾ.27): ಕೋಟೆನಾಡು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಿದ್ದು, ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಇದೀಗ ಭಿನ್ನಮತ ಸ್ಫೋಟ ಉಂಟಾಗಿದೆ. ಸಚಿವ ಶ್ರೀರಾಮುಲು ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಕಿಡಿಕಾಡಿದ್ದಾರೆ. ಕಳೆದ 5 ವರ್ಷ ಶ್ರೀರಾಮುಲು ವಿರುದ್ಧ ಸಮರ ಸಾರಿದ್ದ ತಿಪ್ಪೇಸ್ವಾಮಿ, 2018ರಲ್ಲಿ ಬಿಜೆಪಿ ಟಿಕೆಟ್ ತಪ್ಪಿಸಿ ಶ್ರೀರಾಮುಲು ಸ್ಪರ್ಧೆ ಹಿನ್ನೆಲೆಯಲ್ಲಿ ಸಮರ ಸಾರಿದ್ದರು.
ಬಳಿಕ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯು ಕೆಲ ದಿನಗಳ ಹಿಂದೆ ಶ್ರೀರಾಮುಲು ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಎಸ್.ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ಎಂದು ಬಿಂಬಿಸಿರುವುದಕ್ಕೆ ಮುಖಂಡರು ಕಿಡಿಕಾರಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ವೇಳೆ ತಿಪ್ಪೇಸ್ವಾಮಿ ಅಭ್ಯರ್ಥಿ ಎಂಬಂತೆ ಶೋ ಕೊಟ್ಟಿದ್ದಾರೆ. ಜೊತೆಗೆ ಎಸ್.ತಿಪ್ಪೇಸ್ವಾಮಿಗೆ ಟಿಕೆಟ್ ನೀಡದಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ಕಾಲುವೆಹಳ್ಳಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಜಯಪಾಲಯ್ಯ ಬರ್ತಡೇ ಕಾರ್ಯಕ್ರಮ ವೇಳೆ ಶ್ರೀರಾಮುಲು ವಿರುದ್ಧ ಭಿನ್ನಮತ ಸ್ಫೋಟವಾಗಿದೆ.
ಮೀಸಲಾತಿ ಜೇನುಗೂಡಿಗೆ ಕೈಹಾಕಿ ಸಿಹಿ ಹಂಚಿದ್ದೇನೆ: ಸಿಎಂ ಬೊಮ್ಮಾಯಿ
ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜಯಪಾಲಯ್ಯ, ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಜಿ.ಪಂ ಮಾಜಿ ಸದಸ್ಯ ನಾಗಿರೆಡ್ಡಿ ಇತರೆ ಮುಖಂಡರು ಭಾಗಿಯಾಗಿದ್ದರು. ಅಲ್ಲದೇ ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಶಾಸಕ ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜಯಪಾಲಯ್ಯ, ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಪ್ರಭಾಕರ್ ಮ್ಯಾಸ ನಾಯಕ ಮೂವರೊಳಗೊಬ್ಬರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದು, ಈ ಮೂಲಕ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಿರುದ್ಧ ಇತರೆ ಆಕಾಂಕ್ಷಿಗಳು ಒಂದಾಗಿದ್ದಾರೆ
ಕಾಂಗ್ರೆಸ್ ಏಕೆ ಮೀಸಲು ಹೆಚ್ಚಿಸಲಿಲ್ಲ: ಅರುಣ್ ಸಿಂಗ್ ಪ್ರಶ್ನೆ
ಇನ್ನು ಶ್ರೀರಾಮುಲು ಕ್ಷೇತ್ರವನ್ನೇ ವ್ಯಾಪಾರಕ್ಕಿಟ್ಟು ಕೊಳ್ಳೆ ಹೊಡೆದಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಶ್ರೀರಾಮುಲು ಸೂಚಿಸುವ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ, ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಜಯಪಾಲಯ್ಯ ಕಿಡಿಕಾರಿದ್ದಾರೆ. ಶ್ರೀರಾಮುಲು ವಿರುದ್ಧ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ. ಗಲಾಟೆ ಮಾಡಿಸಿದ್ದರು. ಗಲಾಟೆ ಮಾಡಿಸಿದವರನ್ನು ಶ್ರೀರಾಮುಲು ಬಿಜೆಪಿ ಸೇರ್ಪಡೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಪಕ್ಷ ಎಲ್ಲವನ್ನು ಪರಿಶೀಲಿಸಿ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ ಎಂದರು.