Karnataka election 2023: ಮತದಾನ ಮುಗಿಸಿ ನಿಟ್ಟಿಸಿರು ಬಿಟ್ಟಅಭ್ಯರ್ಥಿಗಳು!

By Kannadaprabha News  |  First Published May 11, 2023, 10:52 PM IST

ಸಾರ್ವತ್ರಿಕ ಚುನಾವಣೆ ಅದರಲ್ಲೂ ಮೊದಲಿಗಿಂತಲೂ ಈಗಿನ ಚುನಾವಣೆ ಮಾಡುವುದು ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸಾಮಾನ್ಯದ ಮಾತಲ್ಲ. ಗೆಲುವಿಗಾಗಿ ಹಗಲು-ರಾತ್ರಿ ನಿದ್ದೆಗೆಟ್ಟು ಚುನಾವಣೆ ಕೆಲಸಗಳನ್ನು ನಿಭಾಯಿಸಬೇಕಾಗುತ್ತದೆ. ವಿಧಾನಸಭಾ ಚುನಾವಣಾ ಘೋಷಣೆಗೂ ಮುಂಚಿನಿಂದ ಶ್ರಮಿಸುತ್ತಿರುವ ಅಭ್ಯರ್ಥಿಗಳು ಇದೀಗ ಮತದಾನದ ಆನಂತರ ನಿಟ್ಟಿಸಿರು ಬಿಡುವಂತಾಗಿದೆ.


ಬಸವರಾಜ ಹಿರೇಮಠ

 ಧಾರವಾಡ (ಮೇ.11) : ಸಾರ್ವತ್ರಿಕ ಚುನಾವಣೆ ಅದರಲ್ಲೂ ಮೊದಲಿಗಿಂತಲೂ ಈಗಿನ ಚುನಾವಣೆ ಮಾಡುವುದು ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸಾಮಾನ್ಯದ ಮಾತಲ್ಲ. ಗೆಲುವಿಗಾಗಿ ಹಗಲು-ರಾತ್ರಿ ನಿದ್ದೆಗೆಟ್ಟು ಚುನಾವಣೆ ಕೆಲಸಗಳನ್ನು ನಿಭಾಯಿಸಬೇಕಾಗುತ್ತದೆ. ವಿಧಾನಸಭಾ ಚುನಾವಣಾ ಘೋಷಣೆಗೂ ಮುಂಚಿನಿಂದ ಶ್ರಮಿಸುತ್ತಿರುವ ಅಭ್ಯರ್ಥಿಗಳು ಇದೀಗ ಮತದಾನದ ಆನಂತರ ನಿಟ್ಟಿಸಿರು ಬಿಡುವಂತಾಗಿದೆ.

Latest Videos

undefined

ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬರೋಬ್ಬರಿ 92 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬುಧವಾರ ಮತದಾನ ಮುಗಿಸಿ ಅವರು ತುಸು ರಿಲ್ಯಾಕ್ಸ್‌ ಮೂಡ್‌ಗೆ ತೆರಳಿದ್ದಾರೆ. ಪಕ್ಷೇತರ ಹಾಗೂ ಇತರ ಸ್ಥಳೀಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗಿಂತ ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಅತ್ಯಧಿಕ ಪ್ರಮಾಣದಲ್ಲಿ ತಮ್ಮ ಚುನಾವಣೆಗಾಗಿ ಹಗಲು-ರಾತ್ರಿ ಪರದಾಡಿದ್ದಾರೆ. ಇದೀಗ ಬಹುತೇಕ ಅಭ್ಯರ್ಥಿಗಳು ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಲವರು ರಾಜಧಾನಿ ಬೆಂಗಳೂರಿಗೆ ಹೋಗಿ ಅಲ್ಲಿ ಸ್ನೇಹಿತರೊಂದಿಗೆ ರಿಲ್ಯಾಕ್ಸ್‌ ಆಗುತ್ತಿದ್ದಾರೆ.

Karnata assembly election: ಇಳಿವಯಸ್ಸಲ್ಲೂ ಕುಂದದ ಉತ್ಸಾಹ!

ಮೂರು ತಿಂಗಳ ಶ್ರಮ

ಕಳೆದ ಏ. 13ರಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದರೂ ಮಾಚ್‌ರ್‍ ತಿಂಗಳಿಂದಲೇ ಅಭ್ಯರ್ಥಿಗಳು ತಮ್ಮ ತಯಾರಿಯಲ್ಲಿದ್ದರು. ಆಗಿನಿಂದಲೇ ಚುನಾವಣೆಗೆ ಬೇಕಾದ ಖರ್ಚು-ವೆಚ್ಚದ ಸಿದ್ಧತೆ ಸೇರಿದಂತೆ ಪೂರ್ವಭಾವಿ ಸಭೆ, ಸಮಾವೇಶ, ಟಿಕೆಟ್‌ ತರಲು ಬೆಂಗಳೂರು ಹಾಗೂ ದೆಹಲಿಯ ಓಡಾಟ, ಪಕ್ಷಗಳು ರಾಜ್ಯದ ವಿವಿಧೆಡೆ ನಡೆಸುವ ಸಮಾವೇಶಗಳಲ್ಲಿ ಭಾಗವಹಿಸುವುದು ಸಾಮಾನ್ಯವಾಗಿತ್ತು. ಟಿಕೆಟ್‌ ಹಂಚಿಕೆ ವೇಳೆಯಲ್ಲಂತೂ ವರಿಷ್ಠರ ಬೆನ್ನು ಬಿದ್ದು ಪರದಾಟ ಆಯಾ ಅಭ್ಯರ್ಥಿಗಳಿಗೆ ಗೊತ್ತು. ಹೀಗಾಗಿ, ಸುಮಾರು ಎರಡ್ಮೂರು ತಿಂಗಳ ಕಾಲದ ಚುನಾವಣೆಯ ಹೊರೆ ಮತದಾನದ ದಿನ ತುಸು ಪ್ರಮಾಣದಲ್ಲಿ ಇಳಿದಿದ್ದು, ಮರು ದಿನ ಗುರುವಾರ ಬಹುತೇಕ ಅಭ್ಯರ್ಥಿಗಳು ಶಾಂತಮೂರ್ತಿಗಳಾಗಿದ್ದಾರೆ.

ಕುಟುಂಬ ಜತೆಗೆ ರಿಲ್ಯಾಕ್ಸ್‌:

ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಅಮೃತ ದೇಸಾಯಿ(Amrit desai bjp candidate) ಬೆಳಗ್ಗೆ ತಡವಾಗಿ ಎದ್ದು ಸಮೀಪದ ತಮ್ಮ ಹುಟ್ಟೂರು ಹಂಗರಕಿಗೆ ಪತ್ನಿ, ಮಕ್ಕಳೊಂದಿಗೆ ಹೋಗಿ ತಂದೆ ಅಯ್ಯಪ್ಪ ದೇಸಾಯಿ ಅವರ ಆಶೀರ್ವಾದ ಪಡೆದರು. ಆನಂತರ ಮಕ್ಕಳು, ಪತ್ನಿಯೊಂದಿಗೆ ಕಾಲ ಕಳೆದು ಮಧ್ಯಾಹ್ನದ ಹೊತ್ತು ನಿದ್ರೆಗೆ ಜಾರಿದರು. ಇಷ್ಟಾಗಿಯೂ ಮನೆಗೆ ಪಕ್ಷದ ಕಾರ್ಯರ್ತರು ಹಾಗೂ ಮುಖಂಡರ ಆಗಮನ-ನಿರ್ಗಮನ ಸಾಮಾನ್ಯವಾಗಿತ್ತು. ಸಂಜೆ ಹೊತ್ತು ಚಿಕ್ಕಮಲ್ಲಿಗವಾಡದ ಅವರ ತೋಟದಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿ ಮತದಾನ ಪ್ರಮಾಣ, ಗೆಲುವಿನ ಲೆಕ್ಕಾಚಾರ ಹಾಕಿದರು ಎಂದು ತಿಳಿದು ಬಂದಿದೆ.

ಅಡುಗೆ ಮಾಡಿ ಊಟ

ಇನ್ನು, ಇದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ(Vinay kulkarni Congress candidate) ಕ್ಷೇತ್ರದ ಹೊರಗಿದ್ದುಕೊಂಡು ಚುನಾವಣೆ ಎದುರಿಸಿದ್ದಾರೆ. ಇದು ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲು. ಪತಿ ವಿನಯ ಪರವಾಗಿ ಪತ್ನಿ ಶಿವಲೀಲಾ ಕುಲಕರ್ಣಿ ಈ ಮೊದಲಿನ ಚುನಾವಣೆಗಳಲ್ಲಿ ಆಗಾಗ ಪ್ರಚಾರದಲ್ಲಿ ಭಾಗವಹಿಸುತ್ತಿದ್ದರು. ಆದರೆ, ಈ ಚುನಾವಣೆಯಲ್ಲಿ ಮಾತ್ರ ಅಭ್ಯರ್ಥಿ ಪರವಾಗಿ ನಿರೀಕ್ಷೆ ಮೀರಿ ಪ್ರಚಾರ ಕೈಗೊಂಡಿದ್ದರು. ಒಂದು ವೇಳೆ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಗೆಲುವು ಆಗಿದ್ದೇ ಆದರೆ ಗೆಲುವಿನ ರೂವಾರಿ ಶಿವಲೀಲಾ ಅವರೇ. ಅಷ್ಟರ ಮಟ್ಟಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳನ್ನು ನಿಭಾಯಿಸಿ ಗ್ರಾಮೀಣ ಕ್ಷೇತ್ರದಲ್ಲಿ ಸಂಚರಿಸಿ ಚುನಾವಣೆ ಮಾಡಿದ್ದಾರೆ. ಇದೀಗ ಮತದಾನ ಆನಂತರ ಅವರು ಬೆಳಗ್ಗೆ ಗಾರ್ಡನ್‌ಗೆ ನೀರು ಹಾಕಿ, ಸ್ವತಃ ತಾವೇ ಅಡುಗೆ ಮಾಡಿ ಮಕ್ಕಳೊಂದಿಗೆ ಊಟ ಮಾಡಿದರು. ಅವರು ಪ್ರಿತಿಯಿಂದ ಎರಡು ನಾಯಿಗಳನ್ನು ಸಾಕಿದ್ದು, ಅವುಗಳಿಗೆ ಸ್ನಾನ ಮಾಡಿಸಿ ಅವುಗಳೊಂದಿಗೆ ಕೆಲ ಕ್ಷಣ ಕಳೆದರು. ಮಧ್ಯಾಹ್ನದ ಆನಂತರ ಮನೆಗೆ ಆಗಮಿಸಿದ ಪಕ್ಷದ ಮುಖಂಡರೊಂದಿಗೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದರು ಎಂದು ಅವರ ಆಪ್ತರು ಮಾಹಿತಿ ನೀಡಿದರು.

ರಾಜಧಾನಿಗೆ ತೆರಳಿದ ಬೆಲ್ಲದ, ಲಾಡ್‌

ಇನ್ನು, ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ(Arvind bellad BJP Candidate) ಅವರು ವೈಯಕ್ತಿಕ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದು, ಶುಕ್ರವಾರ ಬೆಳಗ್ಗೆ ಧಾರವಾಡಕ್ಕೆ ವಾಪಸ್‌ ಆಗಲಿದ್ದಾರೆ ಎಂಬ ಮಾಹಿತಿ ಇದೆ. ಅದೇ ರೀತಿ ಕಾಂಗ್ರೆಸ್‌ ಅಭ್ಯರ್ಥಿ ದೀಪಕ ಚಿಂಚೋರೆ ಗುರುವಾರ ಹುಬ್ಬಳ್ಳಿಗೆ ಕುಟುಂಬದ ಸಮೇತ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಹಾಗೆಯೇ, ಮಾಜಿ ಸಚಿವ, ಕಲಘಟಗಿ ಕಾಂಗ್ರೆಸ್‌ ಅಭ್ಯರ್ಥಿ ಸಂತೋಷ ಲಾಡ್‌ ಮೂರು ತಿಂಗಳು ಕಾಲ ಕ್ಷೇತ್ರ ಬಿಟ್ಟು ಕದಲಿರಲಿಲ್ಲ. ಇದೀಗ ಮತದಾನ ಮುಗಿಯುವ ತಡವೇ ಬೆಂಗಳೂರಿಗೆ ಹೋಗಿದ್ದು ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದಾರೆ. ಅವರೂ ಶುಕ್ರವಾರ ವಾಪಸ್‌ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನುಳಿದ ಬೇರೆ ಬೇರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಮನೆಗಳಲ್ಲಿ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ.

ಗ್ರಾಮೀಣದಲ್ಲಿ ಬೆಟ್ಟಿಂಗ್‌ ಜೋರು:

ಧಾರವಾಡ: ವಿಧಾನಸಭೆ ಚುನಾವಣೆಯ ಮತದಾನ ಮುಗಿಯುವ ತಡವೇ ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ವಿಪರೀತ ಬೆಟ್ಟಿಂಗ್‌ ನಡೆಯುತ್ತಿದೆ. ನಮ್ಮಣ್ಣ ವಿಕೆ ಬಾಸ್‌ ಗೆಲವು ಸಾಧಿಸುತ್ತಾರೆಂದು ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು, ಧಣಿ ಅಮೃತ ದೇಸಾಯಿ ಗೆಲವು ನಿಶ್ಚಿತ ಎಂದು ಅವರ ಬೆಂಬಲಿಗರು ತಮ್ಮ ತಮ್ಮಲ್ಲಿಯೇ ಬೆಟ್ಟಿಂಗ್‌ ರೂಪದಲ್ಲಿ ಗೆಲವು-ಸೋಲಿನ ಲೆಕ್ಕಾಚಾರ ನಡೆಸುತ್ತಿದ್ದಾರೆ. .500ರಿಂದ .5 ಸಾವಿರ ವರೆಗೂ ಬೆಟ್ಟಿಂಗ್‌ ನಡೆಯುತ್ತಿದೆ ಎನ್ನಲಾಗುತ್ತಿದೆ. ಅದೇ ರೀತಿ ಕಲಘಟಗಿ, ನವಲಗುಂದ ಕ್ಷೇತ್ರದಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಬೆಟ್ಟಿಂಗ್‌ ನಡೆಯುತ್ತಿದೆ ಎಂಬ ಮಾಹಿತಿ ಇದೆ.

ಬರಿಗಾಲಿನಲ್ಲಿ ತಿರುಪತಿ ಬೆಟ್ಟವೇರಿ ಶ್ರೀನಿವಾಸನ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

13ರಂದು ರಾಜಕೀಯ ಭವಿಷ್ಯ ಬಹಿರಂಗ

ಧಾರವಾಡ: ಮೇ 10ರಂದು ಏಳು ಕ್ಷೇತ್ರಗಳಿಗೆ ಮತದಾನ ಸುಸೂತ್ರವಾಗಿ ನಡೆದಿದ್ದು, ಇದೀಗ ಎಲ್ಲರ ಕಣ್ಣು ಮೇ 13ರ ಮತ ಎಣಿಕೆ ಮೇಲೆ ನೆಟ್ಟಿದೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಗುರುವಾರ ರಿಲ್ಯಾಕ್ಸ್‌ ಮೂಡಿನಲ್ಲಿದ್ದರೂ ಒಳಗೊಳಗೆ ಚುನಾವಣಾ ಫಲಿತಾಂಶದ ಬಗ್ಗೆ ಚಿಂತಿಸುತ್ತಿದ್ದಾರೆ. ಮತದಾರರು ಅಭ್ಯರ್ಥಿಗಳ ರಾಜಕೀಯ ಹಣೆ ಬರಹವನ್ನು ಮತದಾನದ ಮೂಲಕ ಬರೆದಿದ್ದು ಮತಯಂತ್ರಗಳಲ್ಲಿ ಭವಿಷ್ಯ ಅಡಗಿ ಕುಳಿತಿದೆ. ಮೇ 13ರಂದು ಮಧ್ಯಾಹ್ನದೊಳಗೆ ಭವಿಷ್ಯ ಬಹಿರಂಗವಾಗಲಿದೆ. ಅಲ್ಲಿ ವರೆಗೂ ಚುನಾವಣಾ ಕಾವು ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಇದ್ದೇ ಇರುತ್ತದೆ.

click me!