ಈ ಬಾರಿಯ ಚುನಾವಣೆ ರಾಜ್ಯ ಬಿಜೆಪಿಗೆ ಒಂದು ರೀತಿ ಸತ್ವ ಪರೀಕ್ಷೆ. ಆಡಳಿತ ಪಕ್ಷ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಶ್ರಮ ಹಾಕುತ್ತಿದೆ. ಈ ಬಗ್ಗೆ ಬಿಜೆಪಿ ಲೆಕ್ಕಾಚಾರ ಇಲ್ಲಿದೆ.
ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜು.8): 2023ರ ವಿಧಾನಸಭೆ ಚುನಾವಣೆ ಹತ್ತಿರ ಬರ್ತಾ ಇದೆ. ಇನ್ನೇನೂ 8-9 ತಿಂಗಳಲ್ಲಿ ಚುನಾವಣೆ. ಅಖಾಡ ಈಗಾಗಲೇ ಶುರುವಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತುದಿಗಾಲ ಮೇಲೆ ನಿಂತಿದೆ. ಆಡಳಿತ ಪಕ್ಷ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಶ್ರಮ ಹಾಕುತ್ತಿದೆ.
ಈ ಬಾರಿಯ ಚುನಾವಣೆ ರಾಜ್ಯ ಬಿಜೆಪಿಗೆ ಒಂದು ರೀತಿ ಸತ್ವ ಪರೀಕ್ಷೆ. ಕಾರಣ ಇಷ್ಟು ವರ್ಷ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿ, ಈಗ ಬೊಮ್ಮಾಯಿಗೆ ಪಟ್ಟ ಕಟ್ಟಿದೆ. ಆದ್ರೆ ಸಿಎಂ ಬೊಮ್ಮಾಯಿ ಬ್ರಾಂಡ್ ವೆಲ್ಯು ಯಡಿಯೂರಪ್ಪರ ಬ್ರಾಂಡ್ ವೆಲ್ಯು ಅಜಗಜಾಂತರ. ಯಡಿಯೂರಪ್ಪ ಪಕ್ಷ ಕಟ್ಟಿ ಅಧಿಕಾರಕ್ಕೆ ಏರಿದವರು. ಬೊಮ್ಮಾಯಿ ಯಡಿಯೂರಪ್ಪ ನೆರಳಲ್ಲಿ ಬೆಳೆದು ಸಿಎಂ ಸ್ಥಾನಕ್ಕೆ ನೇಮಕವಾದವರು. ಹೀಗಾಗಿ ಈ ಬಾರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿರುವ ರಾಜ್ಯ ಬಿಜೆಪಿಗೆ ಅಗ್ನಿ ಪರೀಕ್ಷೆ. ಹೀಗಾಗಿ ಬೊಮ್ಮಾಯಿ ಸರ್ಕಾರದ ಬ್ರಾಂಡ್ ಹೆಚ್ಚಿಸಲು ರಾಜ್ಯ ಬಿಜೆಪಿ ಪ್ಲಾನ್ ಮಾಡುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೆನ್ನೆ ಬಿಜೆಪಿ ಕಚೇರಿಯಲ್ಲಿ ಸಚಿವರುಗಳ ಮಾಧ್ಯಮ ಸಲಹೆಗಾರರ ಜೊತೆ ಸಭೆ ನಡೆಸಿ ಹಲವಾರು ಸೂಚನೆ ನೀಡಿದ್ದಾರೆ.
ಮೋದಿ ಸರ್ಕಾರ ರೀತಿ ಬೊಮ್ಮಾಯಿ ಸರ್ಕಾರ ಎಂದು ಬ್ರಾಂಡ್ ಮಾಡಿ: ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷ ಆಗಿದೆ. ಜನಸಾಮಾನ್ಯರ ಆದಿಯಾಗಿ ವಿಪಕ್ಷಗಳು ಸಹ ಮಾತಿಗೆ ಇಳಿದಾಗ, ಅದು ವಾಗ್ದಾಳಿ ಮಾಡುವ ಸಂದರ್ಭ ಇರಲಿ ಅಥವಾ ಸ್ವಪಕ್ಷಿಯರು ಹೊಗಳುವ ಸಮಯ ಇರಲಿ ಮೋದಿ ಸರ್ಕಾರ ಎಂದೆ ಹೇಳುವಷ್ಟರ ಮಟ್ಟಿಗೆ ಬ್ರಾಂಡ್ ಆಗಿದೆ. ಅದೇ ರೀತಿ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಎಂದು ಬ್ರಾಂಡ್ ಮಾಡಲು ಅಧ್ಯಕ್ಷ ಕಟೀಲ್ ಸೂಚನೆ ನೀಡಿದ್ದಾರೆ.
ಜು. 14 ಮತ್ತು 15ಕ್ಕೆ ‘ಸಂಘ’ದ ಜತೆ ಬಿಜೆಪಿ ಚಿಂತನ ಮಂಥನ ಸಭೆ
ಬೊಮ್ಮಾಯಿ ನೇತೃತ್ವ ಸ್ಲೋಗನ್ ಯಡಿಯೂರಪ್ಪ ಮಾರ್ಗದರ್ಶನ ಘೋಷ ವಾಕ್ಯ
ಇನ್ನು ಮುಂದುವರಿದು ಸಲಹೆ ಸೂಚನೆ ರವಾನಿಸಿರುವ ಅಧ್ಯಕ್ಷ ಕಟೀಲ್ , ಸಚಿವರು ಮಾಧ್ಯಮಕ್ಕೆ ಸ್ಟೇಟ್ಮೆಂಟ್ ಮಾಡುವಾಗ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವಾಗ ಕಡ್ಡಾಯವಾಗಿ ಬೊಮ್ಮಾಯಿ ನೇತೃತ್ವದ ಸರ್ಕಾರ ಮತ್ತು ಯಡಿಯೂರಪ್ಪ ಮಾರ್ಗದರ್ಶನ ಅಡಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎನ್ನುವ ವಾಕ್ಯದೊಂದಿಗೆ ಪ್ರತಿಕ್ರಿಯೆ ನೀಡಲು ಸೂಚನೆ ನೀಡಿದ್ದಾರೆ. ಸಚಿವರು ಸಾಮಾನ್ಯವಾಗಿ ಬ್ಯುಸಿ ಇರ್ತಾರೆ ಕೆಲವೊಮ್ಮೆ ಮಾಧ್ಯಮಕ್ಕೆ ಮಾತನಾಡುವಾಗ ತಮ್ಮ ಇಲಾಖೆ ಬಗ್ಗೆ ಮಾತನಾಡಿ ಸುಮ್ಮನಾಗುತ್ತಾರೆ ಅಂತ ಸಮಯದಲ್ಲಿ ಅವರ ಮಾಧ್ಯಮ ಸಲಹೆಗಾರರು ಈ ಎಲ್ಲಾ ವಿಚಾರಗಳನ್ನು ಸಚಿವರ ಗಮನಕ್ಕೆ ತಂದು ಪ್ರತಿಕ್ರಿಯೆ ಕೊಡಿಸಬೇಕು ಎಂದು ಕಟೀಲ್ ಸೂಚನೆ ನೀಡಿದ್ದಾರೆ.
ತಂಡವಾಗಿ ಕೆಲಸ ಮಾಡಿ ತಮ್ಮ ಇಲಾಖೆ ಮಾತ್ರ ಬ್ರಾಂಡ್ ಮಾಡಬೇಡಿ
ಸಾಮಾನ್ಯವಾಗಿ ಪ್ರತಿ ಇಲಾಖೆಯವರು ತಮ್ಮ ತಮ್ಮ ಇಲಾಖೆ ಆ ಕೆಲಸ ಮಾಡಿತು, ಈ ಕೆಲಸ ಮಾಡಿತು ಎನ್ನುವ ಮಟ್ಟಿಗೆ ಸೀಮಿತವಾಗಿದ್ದಾರೆ. ಒಂದು ತಂಡವಾಗಿ ಬೊಮ್ಮಾಯಿ ನೇತೃತ್ವದ ಸರ್ಕಾರ ಕೆಲಸ ಮಾಡಿತು ಎನ್ನುವ ರೀತಿ ಜನರಿಗೆ ರೀಚ್ ಮಾಡಬೇಕು ಎಂದು ಸೂಚಿಸಿರುವ ರಾಜ್ಯ ಬಿಜೆಪಿ ಸಂಘಟನೆ ವಿಭಾಗ, ಸದ್ಯ ಸರ್ಕಾರ ಒಂದು ತಂಡವಾಗಿ ಕೆಲಸ ಮಾಡುತ್ತಿಲ್ಲ ಎನ್ನೋದನ್ನ ಪರೋಕ್ಷವಾಗಿ ಹೇಳಿದಂತಿದೆ. ಯಾವುದೇ ಯೋಜನೆ ಜನರಿಗೆ ತಲುಪುವ ಹೊತ್ತಿಗೆ ಬಿಜೆಪಿ ಸರ್ಕಾರ ಮಾಡಿದೆ, ಇಂತಹ ಸಿಎಂ ನೇತೃತ್ವದಲ್ಲಿ ಯಡಿಯೂರಪ್ಪರ ಮಾರ್ಗದರ್ಶನದಲ್ಲಿ ಆಗಿದೆ ಎನ್ನುವ ಫೀಲ್ ಬರುವ ರೀತಿ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಸಿದ್ದು ಕಾಲದಲ್ಲೂ ನೇಮಕಾತಿ ಹಗರಣ, ಮುಚ್ಚಿ ಹಾಕಿದ್ದೇ ಸಾಧನೆ: ಬೊಮ್ಮಾಯಿ
ಕಂಡಕಂಡಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಬೇಡಿ.
ಸಾಮಾನ್ಯವಾಗಿ ಮಾಧ್ಯಮದವರು ಎಲ್ಲಾ ವಿಚಾರಗಳಿಗೂ ಸಚಿವರ ಪ್ರತಿಕ್ರಿಯೆ ಕೇಳುತ್ತಾರೆ ಸಹಜ. ಆದರೆ ಸಚಿವರು ಕೇಳಿದ್ದಕ್ಕೆಲ್ಲಾ ಎಲ್ಲಿಂದರಲ್ಲಿ ಪ್ರತಿಕ್ರಿಯೆ ನೀಡಿ ವಿವಾದ ಮಾಡಿಕೊಳ್ಳಬೇಡಿ ಎಂದು ಕಟೀಲ್ ವಾರ್ನ್ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ನೆಗೆಟಿವ್ ಸುದ್ದಿಗಳು ಬರದಂತೆ ಕಾರ್ಯ ಮಾಡಬೇಕು ಎಂದಿರುವ ರಾಜ್ಯಾಧ್ಯಕ್ಷ, ಸರ್ಕಾರದ ಬಗ್ಗೆ ಒಂದು ನತೆಟಿವ್ ಸೆಟ್ ಅಪ್ ಮಾಡಲು ಸಚಿವರ ತಂಡಕ್ಕೆ ಸೂಚಿಸಿದ್ದಾರೆ. ಪ್ರತಿ ಹದಿನೈದು ದಿನಕ್ಕೊಮ್ಮೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ಸೇರಬೇಕು. ಸರ್ಕಾರದ ಕಾರ್ಯವೈಖರಿ, ಇಲಾಖೆಯ ಪ್ರಗತಿ ಈ ಎಲ್ಲಾ ವಿಚಾರಗಳ ಮೇಲೆ ಚರ್ಚೆ ಮಾಡಬೇಕು ಮತ್ತು ಚರ್ಚಿಸಲಾದ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಯಡಿಯೂರಪ್ಪ ಮಾರ್ಗದರ್ಶನ ಯಾಕೆ ?
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಯಾಕೆ ಯಡಿಯೂರಪ್ಪ ಮಾರ್ಗದರ್ಶನದಡಿ ಸರ್ಕಾರ ನಡೆಯುತ್ತಿದೆ ಎನ್ನುವ ವಾಕ್ಯವನ್ನು ಸಚಿವರಿಗೆ ಕಡ್ಡಾಯವಾಗಿ ಹೇಳಲು ಸೂಚನೆ ಇಟ್ಟರು ಎನ್ನುವ ಬಗ್ಗೆ ವಿಮರ್ಶೆ ಮಾಡಿ ನೋಡಿದ್ರೆ ಉತ್ತರ ಕುತೂಹಲವಾಗಿದೆ. ಯಡಿಯೂರಪ್ಪ ನೇತೃತ್ವಲ್ಲಿ ಎರಡು ವರ್ಷ ಬಿಜೆಪಿ ಸರ್ಕಾರ ನಡೆಯಿತು. ಕೋವಿಡ್ ಮೊದಲ ಎರಡನೆ ಅಲೆ ಸಮಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ರು. ಬಳಿಕ ಯಡಿಯೂರಪ್ಪರ ವಯಸ್ಸಿನ ಕಾರಣ, ಪಕ್ಷದಲ್ಲಿ ಕೆಲವರು ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ, ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಹೈಕಮಾಂಡ್ ಗೆ ದೂರು ನೀಡುವ ಮೂಲಕ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಒಂದಿಷ್ಟು ಗೊಂದಲ ಸೃಷ್ಟಿಯ ವಾತಾವರಣ ಕಂಡುಬಂತು.
ಹೀಗೆ ಒಂದೊಂದೆ ಡಾಟ್ ಗಳು ಸೇರಿ ಒಂದು ಲೈನ್ ರಚನೆ ಆದಂತೆ ಯಡಿಯೂರಪ್ಪರ ವಯಸ್ಸು ಪಕ್ಷದಲ್ಲಿ ಮೂಡಿದ ಸಣ್ಣ ಗೊಂದಲಎಲ್ಲಾ ಸೇರಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಬಳಿಕ ಯಡಿಯೂರಪ್ಪರ ಶಿಷ್ಯ ಬೊಮ್ಮಾಯಿಗೆ ಹೈಕಮಾಂಡ್ ಪಟ್ಟಾಭಿಷೇಕ ಮಾಡಿತು. ಲಿಂಗಾಯತ ಸಮುದಾಯದ ನಾಯಕನನ್ನೆ ಸಿಎಂ ಮಾಡಿದ್ರು ಸಹ ಬೊಮ್ಮಾಯಿಯವರಿಗೆ ವರ್ಚಸ್ಸಿನ ಮ್ಯಾಟರ್ ಅಡ್ಡ ಬರುತ್ತಿದೆ. ಜೊತೆಗೆ ಯಡಿಯೂರಪ್ಪರಿಗೆ ಅವಧಿ ಪೂರ್ಣ ಮಾಡಲು ಬಿಟ್ಟಿಲ್ಲ ಎನ್ನುವ ಒಂದು ಕೂಗು ಸಮುದಾಯದ ಒಂದು ತುದಿಯಿಂದ ಆಗಾಗ ಕೇಳಿ ಬರುತ್ತಿದೆ.
ಹೀಗಾಗಿ ಯಡಿಯೂರಪ್ಪರನ್ನು ಪಕ್ಷ ದೂರ ಮಾಡಿಲ್ಲ, ಕಡೆಗಣಿಸಿಲ್ಲ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಆರೋಪ ಬರಬಾರದು ಎನ್ನುವ ಕಾರಣಕ್ಕೆ ಯಡಿಯೂರಪ್ಪರ ಮಾರ್ಗದರ್ಶನ ಅಡಿ ಸರ್ಕಾರ ನಡೆಯುತ್ತಿದೆ ಎನ್ನೋದನ್ನ ತಿಳಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷ ಕಟೀಲ್ ಈ ಸೂಚನೆ ನೀಡಿದ್ದಾರೆ ಎನ್ನೋದು ರಾಜಕೀಯ ಸತ್ಯ.