ಶಿವಮೊಗ್ಗ (ಜು.8): ಸಿದ್ದರಾಮೋತ್ಸವ ಮುಗಿದ ತಕ್ಷಣ ಕಾಂಗ್ರೆಸ್ ಎರಡು ಭಾಗವಾಗಲಿದೆ ಎಂದು ಭವಿಷ್ಯ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಧೈರ್ಯವಿದ್ದರೆ ಈ ಸಿದ್ದರಾಮೋತ್ಸವ ಕಾರ್ಯಕ್ರಮ ವಿರೋಧಿಸಬೇಕಿತ್ತು. ಅದನ್ನು ಬಿಟ್ಟು ಈ ಉತ್ಸವಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಉತ್ಸವ ಮಾಡಲು ಹೊರಟಿರುವುದು ಅವರ ಶಿಖಂಡಿತನ ತೋರಿಸುತ್ತದೆ ಎಂದು ಕಟುಮಾತುಗಳಲ್ಲಿ ಹೇಳಿದರು.
ಈಗಲೇ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಕಾಂಗ್ರೆಸ್ ನಲ್ಲಿ ಒಳಜಗಳ ಶುರುವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸೋಲುವುದು ಖಚಿತವಾಗಿದ್ದು, ಇನ್ನು ಮುಖ್ಯಮಂತ್ರಿಯ ಪ್ರಶ್ನೆ ಎಲ್ಲಿಂದ? ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಅರ್ಹತೆಯನ್ನು ಕೂಡ ಕಳೆದುಕೊಳ್ಳುವುದು ಖಚಿತ ಎಂದರು.
ಕಾಳಿ ದೇವತೆಯ ಕೈಗೆ ಸಿಗರೇಟು ನೀಡುವ ಮೂಲಕ ಹಿಂದೂ ಸಂಸ್ಕೃತಿಗೆ ಅವಮಾನ ಮಾಡಿರುವ ನಿರ್ದೇಶಕಿ ಲೀನಾ ಮಣಿಮೇಖಲೈ ನಿಲುವನ್ನು ಖಂಡಿಸಿದ ಈಶ್ವರಪ್ಪ ಅವರು, ಯಾರೋ ಒಬ್ಬರು ಅವಮಾನ ಮಾಡಿದಾಕ್ಷಣ ಕಾಳಿಕಾಮಾತೆಯನ್ನು ಪೂಜಿಸಿಕೊಂಡು ಬಂದವರ ಗೌರವ ಕಡಿಮೆ ಆಗುವುದಿಲ್ಲ. ದುಷ್ಟಸಂಹಾರಕ್ಕೆ ಅವತಾರ ತಾಳಿದ ಕಾಳಿಮಾತೆ ಸರಿಯಾದ ಬುದ್ಧಿ ನೀಡುತ್ತಾಳೆ. ಈ ಪ್ರಕರಣ ಹಿಂದೂಗಳ ಆಕ್ರೋಶಕ್ಕೆ ಈಗಾಗಲೇ ಅದು ಕಾರಣವಾಗಿದ್ದು, ಸಂಬಂಧಪಟ್ಟಅಧಿಕಾರಿಗಳು ಆಕೆಯನ್ನು ಬಂಧಿಸುವ ಸಂಭವವಿದೆ ಎಂದು ಹೇಳಿದರು.
ಸಿದ್ದರಾಮಯ್ಯ 75ನೇ ವರ್ಷಕ್ಕೆ ಪಾದಾರ್ಪಣೆ: ಆ.3ರಂದು ಅದ್ಧೂರಿ ಸಿದ್ದರಾಮೋತ್ಸವ!
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ನಾಲ್ವರಿಗೆ ರಾಜ್ಯಸಭೆ ನಾಮನಿರ್ದೇಶನ ಸದಸ್ಯತ್ವ ನೀಡಿರುವುದನ್ನು ಸ್ವಾಗತಿಸುತ್ತೇನೆ. ಈ ಬಗ್ಗೆ ರಾಜಕಾರಣ ಸಲ್ಲದು ಎಂದರು.
ಕಳೆದ ಬಾರಿ ಮಳೆಯಿಂದಾದ ಅನಾಹುತವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅನೇಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮನೆ ಬಿದ್ದವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಡಿಕೆಶಿಯನ್ನು ಮುಗಿಸಲು ಸಿದ್ದು ತಂತ್ರ: ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬವನ್ನು ಸಿದ್ದರಾಮೋತ್ಸವ ಎಂದು ಹೆಸರಿಟ್ಟು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯನವರ ಆಪ್ತರು, ಅಭಿಮಾನಿಗಳು ಈ ಕಾರ್ಯಕ್ರಮ ಮಾಡುತ್ತಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಇದಕ್ಕೆ ಕಾಂಗ್ರೆಸ್‌ನಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ.
ಈ ಬಗ್ಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ ಕುಮಾರ್ ಕಟೀಲ್ ಮಾತನಾಡಿದ್ದು,ನಾವು ಸಿದ್ದರಾಮೋತ್ಸವಕ್ಕೆ ಬೇಕಿದ್ದರೆ ಸಹಕಾರ ಕೊಡುತ್ತೇವೆ. ಆದರೆ ಸಿದ್ದರಾಮೋತ್ಸವದಿಂದ ನಮಗೆ ಯಾವುದೇ ಭಯ ಇಲ್ಲ.ಇನ್ನೂ 4-5 ಲಕ್ಷ ಜನರನ್ನು ಬೇಕಿದ್ರೆ ಕಳುಹಿಸಿಕೊಡುತ್ತೇವೆ. ಆದರೆ ಸಿದ್ದರಾಮೋತ್ಸವದಿಂದ ಭಯ ಆಗುತ್ತಿರುವುದು ಡಿ.ಕೆ. ಶಿವಕುಮಾರಗೆ. ಇದನ್ನು ಶುರು ಮಾಡಿದ ನಂತರ ಡಿ.ಕೆ. ಶಿವಕುಮಾರ ನಿದ್ದೆ ಮಾಡುತ್ತಿಲ್ಲ. ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ನಿದ್ದೆ ಕೆಡಿಸಿದ್ದಾರೆ. ಮುಂದಿನ ಸಿಎಂ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದರು.
ನನಗೆ ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುಖ್ಯ: ಡಿಕೆಶಿ
ಸಿದ್ದರಾಮಯ್ಯ ತನ್ನ ಜೊತೆಗಿದ್ದವರನ್ನೆಲ್ಲ ಮುಗಿಸಿದ್ದಾರೆ. ಇದೀಗ ಡಿ.ಕೆ. ಶಿವಕುಮಾರ ಮುಗಿಸಲು ಈ ತಂತ್ರವನ್ನು ಹೆಣೆದಿದ್ದಾರೆ. ಕಾಂಗ್ರೆಸ್‌ನಲ್ಲಿ ತಮ್ಮ ಅಸ್ತಿತ್ವ ಉಳಿಸ್ಕೋಬೇಕು. ಹೈಕಮಾಂಡ್ಗೆ ತಮ್ಮ ಶಕ್ತಿ ತೋರಿಸಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಅಂತ ಘೋಷಣೆ ಮಾಡಬೇಕೆಂಬ ಒತ್ತಡವನ್ನು ಸಿದ್ದರಾಮಯ್ಯ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ ಮುಗಿಸೋದು ಸಿದ್ದರಾಮಯ್ಯ ತಂತ್ರ. ಈಗಾಗಲೇ ಜನತಾ ದಳವನ್ನು ಸಿದ್ದರಾಮಯ್ಯ ಮುಗಿಸಿದರು. ಕಾಂಗ್ರೆಸ್ಗೆ ಬಂದು ನಿಜವಾದ ಕಾಂಗ್ರೆಸಿಗರನ್ನು ಹೊರಗಿಟ್ರು. ದಲಿತ ಸಿಎಂ ಆಗಬೇಕಾಗಿದ್ದ ಖರ್ಗೆಯವರನ್ನು ಹೊರಗಿಟ್ರು. ಪರಮೇಶ್ವರ್ ಅವರನ್ನು ಸೋಲಿಸಿದ್ರು. ಈಗ ಡಿಕೆಶಿ ಮುಗಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.