ಮೋದಿ-ಶಾ ಕೋಟೆಯಲ್ಲಿ ಆಮ್ ಆದ್ಮಿ ಕಮಾಲ್, ರಾಜ್ಯದಲ್ಲಿ ವಿಜಯೋತ್ಸವ

By Suvarna NewsFirst Published Feb 24, 2021, 9:45 PM IST
Highlights

ಗುಜರಾತ್‌ನಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಗಮನರ್ಹ ಸಾಧನೆ ಮಾಡಿ ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಭ್ರಮಾಚರಣೆ ಮನೆಮಾಡಿದೆ.

ಬೆಂಗಳೂರು, (ಫೆ.24): ಪ್ರಧಾನಿ ನರೇಂದ್ರ ಮೋದಿ- ಹಾಗೂ ಅಮಿತ್ ಶಾ ಕೋಟೆ ಮುರಿದು ಗುಜರಾತಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವನ್ನು ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ.

ಅಶೋಕ ನಗರದ  ವುಡ್‌ಸ್ಟ್ರೀಟ್‌ನಲ್ಲಿ ಇರುವ ಜೈನ್ ಭವನದಲ್ಲಿ ಬುಧವಾರ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ,  ಗುಜರಾತಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೂಲಕ ಅಮೋಘ ಪದಾರ್ಪಣೆ ಮಾಡಿ, ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ಶಕ್ತಿಯಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ಹೊರಹೊಮ್ಮಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗುಜರಾತ್ ಪಾಲಿಕೆ ಚುನಾವಣೆ ಫಲಿತಾಂಶ; ಭರ್ಜರಿ ಗೆಲುವಿಗೆ ಪ್ರಧಾನಿ ಮೋದಿ ಅಭಿನಂದನೆ!

ಮೋದಿ- ಅಮಿತ್ ಷಾ ನೆಲದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೆಜ್ಜೆಯಿಟ್ಟಿರುವ ಆಮ್ ಆದ್ಮಿ ಪಕ್ಷದ ಈ ಅಮೋಘ ಗೆಲುವು ರಾಷ್ಟ್ರ ರಾಜಕಾರಣವನ್ನೇ ಬದಲಾಯಿಸಲಿದೆ. ಗುಜರಾತಿನ ಉಸ್ತುವಾರಿಗಳಾಗಿದ್ದ ರೋಮಿ ಭಾಟಿ ಅವರೇ ನಮ್ಮ ಕರ್ನಾಟಕದ ಉಸ್ತುವಾರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕದಲ್ಲೂ ನೆಲೆಯೂರಲಿದ್ದೇವ. ಮುಂಬರುವ ಜಿಲ್ಲಾ ಪಂಚಾಯತಿ, ಬಿಬಿಎಂಪಿ ಚುನಾವಣೆಯಲ್ಲಿ ಖಾತೆ ತೆರೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಉಸ್ತುವಾರಿ ರೋಮಿ ಭಾಟಿ ಮಾತನಾಡಿ, ದೆಹಲಿ, ಪಂಜಾಬಿಗೆ ಮಾತ್ರ ಸೀಮಿತವಾಗಿದ್ದ ನಮ್ಮ ಪಕ್ಷ, ಇಂದು ಹರಿಯಾಣ, ಜಾರ್ಕಂಡ್, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ, ಈಗ ಗುಜರಾತ್ ಮುಂದೆ ಕರ್ನಾಟಕ ಅಲ್ಲದೇ ಇಡೀ ದೇಶದ ಚುಕ್ಕಾಣಿ ಹಿಡಿಯುವುದರಲ್ಲಿ ಸಂದೇಹವಿಲ್ಲ ಎಂದರು.

ವಿಜಯೋತ್ಸವದಲ್ಲಿ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, ಉಪಾಧ್ಯಕ್ಷ ಸುರೇಶ್ ರಾಥೋಡ್, ಬಿ.ಟಿ.ನಾಗಣ್ಣ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಮಾಧ್ಯಮ ಸಹ ಸಂಚಾಲಕರಾದ ವಿಜಯ್ ಶರ್ಮ, ಶಾಂತಲಾ  ದಾಮ್ಲೆ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಹಿರಿಯ ಮುಖಂಡರಾದ ಗೋಪಾಲ್ ರೆಡ್ಡಿ, ಹರಿಹರನ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

click me!