
ರಾಮನಗರ (ಜ. 9): ಕಾಂಗ್ರೆಸ್ ಸರ್ಕಾರವಿದ್ದಾಗ ಮೇಕೆದಾಟು (Mekedatu Project) ಕೆಲಸ ಏಕೆ ಮಾಡಲಿಲ್ಲ ಎಂದು ಬಿಜೆಪಿ (BJP) ಕೇಳುತ್ತಿದೆ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಿಂದ ಬಿಜೆಪಿ ಏನು ಮಾಡಿದೆ ಅಂತ ಲೆಕ್ಕ ಕೊಡಲಿ. ತನ್ನ ತಪ್ಪನ್ನು ಮರೆಮಾಚಲು ಬಿಜೆಪಿ ಸರ್ಕಾರ ಪಾದಯಾತ್ರೆ (Padayatre) ಹತ್ತಿಕ್ಕುವ ಜತೆಗೆ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಸಿಎಲ್‌ಪಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯಿತು. ಈ ಸರ್ಕಾರ ಯೋಜನೆಯನ್ನು ಪ್ರಾರಂಭಿಸಲು ಕಿಂಚಿತ್ತೂ ಪ್ರಯತ್ನವನ್ನು ಮಾಡಿಲ್ಲ. ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೇಂದ್ರ ಪರಿಸರ ಇಲಾಖೆ ಅನುಮತಿ ದೊರಕಿಸಲು ಆಗುತ್ತಿಲ್ಲ. ಇದು ಬಿಜೆಪಿ ಸರ್ಕಾರದ ವೈಫಲ್ಯ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Mekedatu Politics: ಪಾದಯಾತ್ರೆ ತಡೆಯಲೆಂದೇ ನಿಷೇಧಾಜ್ಞೆ ಜಾರಿ: ಸಿದ್ದು ಕಿಡಿ
2013 ಸೆಪ್ಟೆಂಬರ್ ನಲ್ಲಿ ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆ ಸಂಬಂಧ ಸಭೆಗಳನ್ನು ನಡೆಸಿದರು. ಇದಕ್ಕೂ ಮುಂಚಿತವಾಗಿ ಕಾವೇರಿ ನದಿ ನೀರಿನ ವಿಚಾರವಾಗಿ ವಾದಿಸುತ್ತಿದ್ದ ಹಿರಿಯ ವಕೀಲ ನಾರಿಮನ್ ಅವರಿಂದ ಸಲಹೆ ಪಡೆಯಲಾಗಿತ್ತು. 2017ರಲ್ಲಿ ಡಿಪಿಆರ್ ಸಿದ್ದಪಡಿಸಿ ಸಿಡಬ್ಲುಸಿಗೆ ಕಳುಹಿಸಿದೇವು. ಅವರು ಪರಿಶೀಲಿಸಿ ರಾಜ್ಯಸರ್ಕಾರಕ್ಕೆ ಸ್ಪಷ್ಟನೆ ಕೇಳಿದ್ದಕ್ಕೆ ಉತ್ತರ ನೀಡಿದೇವು. ಹೀಗೆ ಯೋಜನೆ ಪ್ರಾರಂಭ ಮಾಡಿ ಪ್ರಕ್ರಿಯೆಗೆ ಚಾಲನೆ ನೀಡಿದೇವು. ಇದರಲ್ಲಿ ಬಿಜೆಪಿ ಕೊಡುಗೆ ಏನಿದೆ ಎಂದು ಕೇಳಿದರು.
ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ಯಾಕೆ?:
ಫೆಬ್ರವರಿ 2018 ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನೀರು ಹಂಚಿಕೆ ವ್ಯಾಜ್ಯ ಅಂತಿಮವಾಗಿದ್ದು, ಅಲ್ಲಿಯವರೆಗೂ ಕಾವೇರಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಅದಾದ ಮೇಲೆ 177.75 ಟಿಎಂಸಿ ನೀರನ್ನು ಸಾಮಾನ್ಯ ವರ್ಷದಲ್ಲಿ ಮಳೆ ಬಂದಾಗ ತಮಿಳುನಾಡಿಗೆ ಹರಿಸಬೇಕು. ಬರಗಾಲದಲ್ಲಿ ಸಂಕಷ್ಟಸೂತ್ರ ಅನುಸರಿಸಬೇಕು ಎಂದು ಆದೇಶ ನೀಡಿದೆ. ಇದಾದ ಮೇಲೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ವಿವಾದ ಇಲ್ಲ. ಈಗ ಹೆಚ್ಚುವರಿ ನೀರು ಸಮುದ್ರಕ್ಕೆ ಹರಿದುಹೋಗುತ್ತಿದೆ. ಕರ್ನಾಟಕದಲ್ಲಿ ಹರಿಯುವ ನೀರಿಗೆ ಅಣೆಕಟ್ಟೆನಿರ್ಮಿಸಿ ಶೇಖರಣೆ ಮಾಡಿ ಜನರಿಗೆ ಕುಡಿಯುವುದಕ್ಕೆ ಹಂಚಿಕೆ ಮಾಡಬಹುದು. ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹ ಮಾಡಲು ಅಣೆಕಟ್ಟೆನಿರ್ಮಿಸುತ್ತಿರುವ ಕಾರಣ ಯಾರು ವಿರೋಧ ಮಾಡಲು ಬರುವುದಿಲ್ಲ.
ಇದನ್ನೂ ಓದಿ: Mekedatu Padayatreಗೂ ಮುನ್ನ ಡಿಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಟೆಂಪಲ್ ರನ್!
ವಿದ್ಯುತ್ ತಯಾರು ಮಾಡಿದ ಮೇಲೆ ಆ ನೀರು ತಮಿಳುನಾಡಿಗೆ ಹರಿಯುತ್ತದೆ. ಮಳೆಗಾಲ ಇಲ್ಲದ ಸಂದರ್ಭದಲ್ಲಿ ಮೇಕೆದಾಟು ಯೋಜನೆಯಲ್ಲಿ ಶೇಖರಣೆ ಮಾಡಿದ ನೀರನ್ನು ತಮಿಳುನಾಡಿಗೆ ಹರಿಸಲು ಅನುಕೂಲವಾಗುತ್ತದೆ. ಜತೆಗೆ ಬೆಂಗಳೂರು ಜನರ ನೀರಿನ ದಾಹವೂ ನೀಗಲಿದೆ. ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುವ ಈ ಯೋಜನೆಯಿಂದ ಮುಂದಿನ 50 ವರ್ಷದವರೆಗೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಎಂದು ಹೇಳಿದರು.
ಜನರ ಹಿತಕ್ಕಾಗಿಯೇ ಹೊರತು ರಾಜಕಾರಣಕ್ಕಾಗಿ ಅಲ್ಲ!
ಮೇಕೆದಾಟು ಪಾದಯಾತ್ರೆ ನಾಡಿನ ಜನರ ಹಿತಕ್ಕಾಗಿಯೇ ಹೊರತು ರಾಜಕಾರಣಕ್ಕಾಗಿ ಮಾಡುತ್ತಿರುವ ಹೋರಾಟ ಅಲ್ಲ. ಕೋವಿಡ್ 3ನೇ ಅಲೆ ಆರಂಭವಾಗುವುದಕ್ಕೂ ಮುನ್ನ 2 ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಣೆ ಮಾಡಿದ್ದೇವು. ಇದು ನನ್ನ ಅಥವಾ ಡಿ.ಕೆ.ಶಿವಕುಮಾರ್ ತೀರ್ಮಾನ ಆಗಿರಲಿಲ್ಲ. ಸಿಎಲ್‌ಪಿಯಲ್ಲಿ ಚರ್ಚೆ ಮಾಡಿ ತೆಗೆದುಕೊಂಡ ನಿರ್ಣಯ ಎಂದರು.
ಬಿಜೆಪಿ ಸರ್ಕಾರ ಕೋವಿಡ್ ನಿಯಮಾವಳಿ ಮುಂದಿಟ್ಟುಕೊಂಡು ಪಾದಯಾತ್ರೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಮಾತ್ರ ನಿರ್ಬಂಧ ಹೇರಿದ್ದಾರೆ. ನಾವು ಕಾನೂನು ಮಾಡುವವರು, ನಮಗೆ ಕಾನೂನು ಬಗ್ಗೆ ಗೌರವ ಇದೆ. ಕೋವಿಡ್ ನಿಯಮಾವಳಿ ಅನುಸರಿಸಿಕೊಂಡು ಪಾದಯಾತ್ರೆ ಮಾಡುತ್ತೇವೆ. ಆ ಮೂಲಕ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ.
- ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.