ರಾಗಾ ಗಮನ ಸೆಳೆದ ಕಲಬುರಗಿ ಕೈ ಮುಖಂಡರು

By Kannadaprabha News  |  First Published Oct 24, 2022, 1:34 PM IST
  • ರಾಗಾ ಗಮನ ಸೆಳೆದ ಕಲಬುರಗಿ ಕೈ ಮುಖಂಡರು
  • ಭಾರತ್‌ ಜೋಡೋದಲ್ಲಿ ಅಲ್ಲಂಪ್ರಭುಗೆ ಡಿಕೆಶಿ ಸಾಥ್‌, ತಿಪ್ಪಣ್ಣ ಕಮಕನೂರ್‌ಗೆ ಸಿದ್ದರಾಮಯ್ಯ ಇಂಟ್ರಡಕ್ಷನ್‌

ಕಲಬುರಗಿ (ಅ.24) : ದಕ್ಷಿಣದ ಕನ್ಯಾಕುಮಾರಿಯಿಂದ ಆರಂಭವಾಗಿರುವ ರಾಹುಲ್‌ ಗಾಂಧಿ ನೇತೃತ್ವದಲ್ಲಿನ ಭಾರತ ಜೋಡೆ ಪಾದಯಾತ್ರೆಯಲ್ಲಿ ಕಲಬುರಗಿ ಕಾಂಗ್ರೆಸ್‌ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲ ತುಂಬಿದ್ದಾರೆ. ಭಾರತ ಜೋಡೋ ಯಾತ್ರೆ ಪಕ್ಕದ ರಾಯಚೂರು ಜಿಲ್ಲೆ ಪ್ರವೇಶಿಸುತ್ತಿದ್ದಂತೆಯೇ ಸಾವಿರಾರು ಕಾರ್ಯಕರ್ತರೊಂದಿಗೆ ಅಲ್ಲಿಗೆ ದೌಡಾಯಿಸಿರುವ ಜಿಲ್ಲೆಯ ಕಾಂಗ್ರೆಸ್ಸಿಗರು ಗಿಲ್ಲೆಸುಗೂರು, ಯರಗೇರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ತಾವೂ ಯಾತ್ರೆಯ ಭಾಗವಾಗಿ ಹೆಜ್ಜೆ ಹಾಕಿದರು.

150 ಸೀಟು ಗೆಲ್ಲಲು ರಾಗಾ ಪಾದಯಾತ್ರೆ ಉತ್ಸಾಹ: ಡಿ.ಕೆ.ಶಿವಕುಮಾರ್‌

Tap to resize

Latest Videos

ಗಿಲ್ಲೆಸುಗೂರದಿಂದ ಮತ್ತೆ ಕರ್ನಾಟಕ ಪ್ರವೇಶಿಸಿದ್ದ ಬಾರತ್‌ ಜೋಡೋ ಯಾತ್ರೆ ರಾಯಚೂರು ಜಿಲ್ಲೆಯಲ್ಲೇ 3 ದಿನ ಒಂದೇಸವನೆ ನಡೆದಾಗ ಕಲಬುರಗಿ ಕೈ ನಾಯಕರಾದ ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್‌, ಹಿಂದುಳಿದ ವರ್ಗಗಳ ಮುಖಂಡ, ಕೆಪಿಸಿಸಿ ಪ್ರ. ಕಾರ್ಯದರ್ಶಿ ತಿಪ್ಪಣ್ಣಪ್ಪ ಕಮಕನೂರ್‌, ಕೆಪಿಸಿಸಿ ಪ್ರ. ಕಾರ್ಯದರ್ಶಿ ಶರಣು ಮೋದಿ, ಮಾಜಿ ಶಾಸಕ ಬಿಆರ್‌ ಪಾಟೀಲ್‌, ಕಾಂಗ್ರೆಸ್‌ ಯುವ ಮುಖಂಡ ಚೇತನ ಗೋನಾಯಕ್‌, ನೀಲಕಂಠ ಮೂಲಗೆ, ಬ್ಲಾಕ್‌ ಕಾಂಗ್ರೆಸ್‌ನ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್‌, ಯುವ ಕಾಂಗ್ರೆಸ್‌ನ ಶಿವಾನಂದ ಹನಗುಂಟಿ, ಪ್ರವೀಣ ಹರವಾಳ, ಈರಣ್ಣ ಝಳಕಿ, ಡಾ. ಕಿರಣ ದೇಶಮುಖ, ಮಝರ್‌ ಅಲಂಖಾನ್‌ ಸೇರಿದಂತೆ ಹಿರಿಯ, ಕಿರಿಯ ನೂರಾರು ಪ್ರಮುಖರು ರಾಯಚೂರು ಉದ್ದಕ್ಕು ಹಳ್ಳಿಹಳ್ಳಿಗೂ ಯಾತ್ರೆಯೊಂದಿಗೆ ಬೆರೆತು ರಾಹುಲ್‌ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದರು.

ಜಿಲ್ಲೆಯವರೇ ಆಗಿರುವ ಶಾಸಕ ಪ್ರಿಯಾಂಕ್‌ ಖರ್ಗೆ, ವಿಧಾನಸಬೆ ವಿರೋಧ ಪಕ್ಷ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್‌ ಸಿಂಗ್‌, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲರಂತೂ ಭಾರತ ಜೋಡೆ ಯಾತ್ರೆಯುದ್ದಕ್ಕೂ ರಾಹುಲ್‌ ಜೊತೆಗಿದ್ದಾರೆ.

ಸಿದ್ದರಾಮಯ್ಯರಿಂದ ಕಮಕನೂರ್‌ ಇಂಟ್ರಡಕ್ಷನ್‌:

ಹಿಂದುಳಿದ ವರ್ಗಗಳ ನಾಯಕ ಕಮಕನೂರ್‌ ಎಂದು ರಾಹುಲ್‌ ಗಾಂಧಿಯವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರಿಚಯಿಸಿದ್ದು ಯಾತ್ರೆಯಲ್ಲಿ ಗಮನ ಸೆಳೆದಿದೆ. ಬೇಸ್ತ ಸಮುದಾಯಕ್ಕೆ ಸೇರಿರುವ ಕಮಕನೂರ್‌ ಸಮುದಾಯದ ಏಳಿಗೆ ಜೊತೆಗೇ ಕಾಂಗ್ರೆಸ್‌ ಪಕ್ಷ ಬಲವಧÜರ್‍ನೆಗೂ ಶ್ರಮಿಸುತ್ತಿರುತ್ತಾರೆಂಬ ಸಿದ್ದರಾಮಯ್ಯ ವಿವರಣೆಗೆ ರಾಹುಲ್‌ ಗಾಂಧಿ ತಕ್ಷಣ ತಮ್ಮ ಕೈ ಕುಲುಕಿ ಶುಭ ಕೋರಿದರೆಂದು ತಿಪ್ಪಣ್ಣ ಕಮಕನೂರ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಅಲ್ಲಂಪ್ರಭುಗೆ ಡಿಕೆಶಿ ಸಾಥ್‌:

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಾವೇ ಖುದ್ದು ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲರನ್ನು ರಾಹುಲ್‌ ಗಾಂಧಿಯವರ ಹತ್ತಿರ ಕರೆದೊಯ್ದು ಅವರ ನಾಯಕತ್ವ ಗುಣ, ಪಕ್ಷ ಸಂಘಟನೆಯ ವಿಚಾರಗಳನ್ನೆಲ್ಲ ಖುದ್ದಾಗಿ ವಿವರಿಸಿದಾಗ ರಾಹುಲ್‌ ಗಾಂಧಿ ಅಲ್ಲಂಪ್ರಭು ಅವರಿಗೆ ಅಭಿನಂದಿಸುತ್ತ ಶುಭ ಕೋರಿದರು. ಪಕ್ಷ ಕಟ್ಟುವ ತಮ್ಮ ದಶಕಗಳ ಕೆಲಸದ ಪರಿಗೆ ಅಭಿನಂದಿಸಿರುವ ರಾಹುಲ್‌ಗೆ ತಾವೂ ಶುಭ ಕೋರಿದ್ದಾಗಿ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ರಾಗಾ ಪಾದಯಾತ್ರೆ 15ಕ್ಕೆ ಬಳ್ಳಾರಿ, 21-22ಕ್ಕೆ ರಾಯಚೂರಿಗೆ ಪ್ರವೇಶ: ಸಿದ್ದರಾಮಯ್ಯ

ಎಂವೈಪಿ ಆರೋಗ್ಯ ವಿಚಾರಿಸಿದ ರಾಗಾ:

ಪಾದಯಾತ್ರೆಯಲ್ಲಿ ಅಫಜಲ್ಪುರದ ಅರುಣ ಪಾಟೀಲ್‌ ಕಂಡಾಕ್ಷಣ ಎಂವೈ ಪಾಟೀಲರ ಆರೋಗ್ಯದ ಬಗ್ಗೆ ವಿಚಾರಿಸಿ ಅಲ್ಲೇ ಫೋನ್‌ ಕರೆ ಮಾಡಿ ರಾಗಾ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಅನಾರೋಗ್ಯ ಕಾರಣ ತಂದೆಯವರು ಪಾದಯಾತ್ರೆಗೆ ಬಂದಿಲ್ಲವೆಂದು ಹೇಳುತ್ತಿದ್ದಂತೆಯೇ ರಾಹುಲ್‌ ಗಾಂಧಿಯವರು ಅವರೊಂದಿಗೆ ಮಾತನಾಡುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ಅಲ್ಲೇ ಫೋನ್‌ ಹಚ್ಚಿಕೊಟ್ಟೆ. 4 ರಿಂದ 5 ನಿಮಿಷಗಳ ಕಾಲ ತಂದೆಯವರೊಂದಿಗೆ ಮಾತನಾಡಿದರು. ರಾಹುಲ್‌ ಪಾದಯಾತ್ರೆಯಿಂದ ಕಲ್ಯಾಣ ನಾಲ್ಲಿ, ಇಡೀ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಹುಮ್ಮಸ್ಸು ಬಂದಿದೆ ಎಂದು ಅರುಣ ಎಂವೈಪಿ ಹೇಳಿದರು.

click me!