ಐದು ಆರು ತಿಂಗಳ ಹಿಂದೆ ಹೈಕಮಾಂಡ್ ರೀಶಫಲ್ ಮಾಡಲು ಸಿಎಂಗೆ ಹೇಳಿತ್ತು: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

Published : Oct 27, 2025, 03:57 PM IST
KN Rajanna

ಸಾರಾಂಶ

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಹೈಕಮಾಂಡ್ ಸೂಚನೆಯಂತೆ ಸಚಿವ ಸಂಪುಟ ಪುನರ್‌ರಚನೆ ನಡೆಯುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ನಾಯಕ ಎಂದಿರುವ ಅವರು, ಡಿಕೆಶಿ ದೆಹಲಿ ಭೇಟಿ ಮತ್ತು ದಲಿತ ಸಿಎಂ ಬೇಡಿಕೆಯಂತಹ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬದಲಾವಣೆಗಳ ನಡುವೆಯೇ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಭಾನುವಾರ ಮಹತ್ವದ ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುರಿತಾದ ಹೇಳಿಕೆಗಳು ಕಾಂಗ್ರೆಸ್ ಒಳಗೆ ನಡೆಯುತ್ತಿರುವ ಚಟುವಟಿಕೆ ಕುರಿತ ಬಗ್ಗೆ ಸೂಚನೆ ನೀಡಿದಂತಿದೆ. ರಾಜಣ್ಣ ಮಾತನಾಡುತ್ತಾ, ಐದು-ಆರು ತಿಂಗಳ ಹಿಂದೆ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಸಚಿವ ಸಂಪುಟ ಪುನರ್‌ರಚನೆ (ರೀಶಫಲ್) ಮಾಡಬೇಕೆಂದು ಸೂಚಿಸಿತ್ತು ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ರೀಶಫಲ್ ಮಾಡಲು ಅವಕಾಶ ನೀಡಿದರೆ ಅವರ ಸ್ಥಾನ ಅಬಾಧಿತವಾಗಿರುತ್ತದೆ. ಆದರೆ ಆ ಅವಕಾಶ ನೀಡದಿದ್ದರೆ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಡಿಕೆಶಿ ದೆಹಲಿ ಭೇಟಿ ಕುರಿತು ಸ್ಪಷ್ಟನೆ

ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿಗೆ ಸಂಬಂಧಿಸಿದಂತೆ ಮಾತನಾಡಿದ ರಾಜಣ್ಣ ಡೆಪ್ಯೂಟಿ ಸಿಎಂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಮಯ ಕೇಳಿರುವುದು ಅಷ್ಟೊಂದು ವಿಶೇಷ ವಿಷಯವಲ್ಲ. ನಾವು ಸಮಯ ಕೇಳಿದರೆ ಅಜೆಂಡಾ ಇರುತ್ತದೆ, ಆದರೆ ಡಿಕೆಶಿ ಸಮಯ ಕೇಳಿರುವುದಕ್ಕೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಅವರು ಪಕ್ಷದ ವಿಚಾರಗಳ ಬಗ್ಗೆ ಚರ್ಚಿಸಲು ಸಮಯ ಕೇಳಿರುವುದು ಮಾತ್ರ ಎಂದು ಹೇಳಿದರು.

ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ನಾಯಕ

ಬಿಜೆಪಿಗೆ ಯಡಿಯೂರಪ್ಪ ಮತ್ತು ಜೆಡಿಎಸ್‌ಗೆ ದೇವೇಗೌಡರು ಅನಿವಾರ್ಯರಾಗಿರುವಂತೆ, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ನಾಯಕರು. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಕೆಲವರು ಮಾತ್ರ ಅನಿವಾರ್ಯ ಅಲ್ಲ ಎಂದು ಹೇಳುತ್ತಾರೆ, ಆದರೆ ನನ್ನ ಅನುಭವದ ಪ್ರಕಾರ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಅತಿ ಅಗತ್ಯವಾದ ನಾಯಕರು ಎಂದು ರಾಜಣ್ಣ ಅಭಿಪ್ರಾಯಪಟ್ಟರು. ಅವರು ಮುಂದುವರಿಸಿ, ವಿಪಕ್ಷವಾದ ಬಿಜೆಪಿ ಪಕ್ಷದಲ್ಲೂ ಮುಂದಿನ ದಿನಗಳಲ್ಲಿ ಬದಲಾವಣೆಗಳು ಅನಿವಾರ್ಯವಾಗುತ್ತವೆ ಎಂದು ಹೇಳಿದರು.

ಡಿಕೆಶಿ ದೆಹಲಿ ಭೇಟಿಯ ಹಿಂದಿನ ಸಾಧ್ಯತೆಯ ಬಗ್ಗೆ ಮಾತನಾಡಿದ ಅವರು ಕೋರ್ಟ್ ಕೇಸ್ ಮತ್ತು ಇತರೆ ವಿಚಾರಗಳ ಹಿನ್ನೆಲೆಯಲ್ಲಿ ಡಿಕೆಶಿ ದೆಹಲಿಗೆ ತೆರಳಿರುವ ಸಾಧ್ಯತೆ ಇದೆ ಎಂದು ರಾಜಣ್ಣ ತಿಳಿಸಿದರು.

ದಲಿತ ಸಿಎಂ ಬೇಡಿಕೆಯ ಕುರಿತಾಗಿ ಪ್ರತಿಕ್ರಿಯೆ

ದಲಿತ ಸಮುದಾಯದಿಂದ ಮುಖ್ಯಮಂತ್ರಿ ಆಗಬೇಕೆಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ ಹೇಳಿದರು: “ಒಬ್ಬ ದಲಿತರು ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿದೆ? ಅದು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ. ಯಾರಾದರೂ ದಲಿತರು ಸಿಎಂ ಆಗಿದ್ರೆ ನಾವು ಖುಷಿಪಡಬೇಕು. ಆದಾಗ್ಯೂ, ನನ್ನ ಅಭಿಪ್ರಾಯದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಘೋಷಿಸಬಹುದು,” ಎಂದು ಅಭಿಪ್ರಾಯಪಟ್ಟರು. ಪಕ್ಷದ ಒಳಗಿನ ಬದಲಾವಣೆಗಳು ನಡೆದರೂ, ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲಿದೆ. ಅವರು ಏನು ನಿರ್ಧಾರ ಮಾಡ್ತಾರೋ ಅದೇ ನಡೆಯುತ್ತದೆ ಎಂದೂ ಹೇಳಿದರು.

ಚಿತ್ತಾಪುರ ಶಾಂತಿ ಸಭೆ ವಿಚಾರ

ಚಿತ್ತಾಪುರದಲ್ಲಿ ನಡೆಯಲಿರುವ ಶಾಂತಿ ಸಭೆ ಕುರಿತು ರಾಜಣ್ಣ ಪ್ರತಿಕ್ರಿಯಿಸಿ, ಹೈಕೋರ್ಟ್ ಸೂಚನೆಯ ಮೇರೆಗೆ ಶಾಂತಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಚರ್ಚೆ ನಡೆಸಿ ವರದಿ ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ನಂತರ ನ್ಯಾಯಾಲಯವೇ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ಕೋರ್ಟ್ ಮುಂದೆ ಯಾರ ಪ್ರತಿಷ್ಠೆಯೂ ಇರಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಈ ಹೇಳಿಕೆಗಳು ಸದ್ಯದ ಕಾಂಗ್ರೆಸ್ ಒಳಗಿನ ಶಕ್ತಿಯ ಸಮತೋಲನ, ಸಚಿವ ಸಂಪುಟ ಪುನರ್‌ರಚನೆ, ಹಾಗೂ ಮುಂದಿನ ನಾಯಕತ್ವದ ಕುರಿತ ಚರ್ಚೆಗೆ ಮತ್ತಷ್ಟು ತೀವ್ರತೆ ನೀಡಿವೆ. ಸಿದ್ದರಾಮಯ್ಯ ಡಿಕೆಶಿ ಬಾಂಧವ್ಯದ ನಡುವಿನ ರಾಜಕೀಯ ತಂತ್ರಗಳು ಇದೀಗ ರಾಜ್ಯ ರಾಜಕೀಯದ ಹಾದಿಯನ್ನು ನಿಗದಿಪಡಿಸುವಂತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ