
ಚಂಡೀಗಢ(ಮೇ.10): ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದು ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡ ಬಳಿಕ ಅಲ್ಪಮತಕ್ಕೆ ಕುಸಿದಿರುವ ಹರ್ಯಾಣದ ಬಿಜೆಪಿ ಸರ್ಕಾರಕ್ಕೆ ತಕ್ಷಣ ವಿಶ್ವಾಸಮತ ಯಾಚಿಸುವಂತೆ ಆದೇಶ ನೀಡಿ ಎಂದು ವಿರೋಧ ಪಕ್ಷ ಜೆಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಮನವಿ ಮಾಡಿದ್ದ ಕಾಂಗ್ರೆಸ್ ಪಕ್ಷ ಕೂಡ ಇದೇ ವಿಷಯ ಚರ್ಚೆಗೆ ರಾಜ್ಯಪಾಲರ ಸಮಯ ಕೇಳಿದೆ. ಅದರೊಂದಿಗೆ ಹರ್ಯಾಣ ಸರ್ಕಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದೆ.
ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಪತ್ರ ಬರೆದಿರುವ ಜೆಜೆಪಿ ನಾಯಕ ದುಷ್ಯಂತ್ ಚೌಟಾಲಾ, 'ಹರ್ಯಾಣದ ಬಿಜೆಪಿ ಸರ್ಕಾರದ ಸಿಎಂ ನಯಾಬ್ ಸಿಂಗ್ ಸೈನಿ ಬಹುಮತ ಕಳೆದುಕೊಂಡಿರುವುದು ನಿಶ್ಚಿತವಾಗಿದೆ. ಅವರಿಗೆ ಸದನದಲ್ಲಿ ವಿಶ್ವಾಸ ಮತಯಾಚನೆಗೆ ಸೂಚನೆ ನೀಡಬೇಕು' ಎಂದು ಕೋರಿದ್ದಾರೆ.
ಹರ್ಯಾಣ ಸರ್ಕಾರ ವಜಾಗೆ ಕಾಂಗ್ರೆಸ್ ಪಟ್ಟು: ಬಿಜೆಪಿ ಸಿಎಂ ನಯಬ್ ಸಿಂಗ್ ಹೇಳಿದ್ದೇನು?
ಜೆಜೆಪಿ ಈ ಹಿಂದೆ ಸೈನಿ ಸರ್ಕಾರದ ಪಾಲುದಾರನಾಗಿತ್ತು. ದುಷ್ಯಂತ್ ಸಿಂಗ್ ಇದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಯಾಗಿದ್ದರು. ನಂತರ ಲೋಕಸಭೆ ಚುನಾವಣೆ ಆರಂಭದ ವೇಳೆ ಅವರು ಸರ್ಕಾರದಿಂದ ಹೊರಬಂದಿದ್ದರು. ಹೀಗಾಗಿ ಬಿಜೆಪಿ ಸರ್ಕಾರ ಮೂವರು ಸ್ವತಂತ್ರ ಶಾಸಕರ ಬೆಂಬಲ ಪಡೆದಿತ್ತು. ಅವರೂ ಈಗ ಬೆಂಬಲ ಹಿಂಪಡೆದಿದ್ದಾರೆ. ಹೀಗಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ತಮ್ಮ ಸರ್ಕಾರ ಭದ್ರವಾಗಿದೆ ಎಂದು ಸಿಎಂ ಸೈನಿ ಗುರುವಾರ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಬಿಜೆ ಪಿಯ ಮಾಜಿ ಸಿಎಂ ಮನೋಹರಲಾಲ್ ಖಟ್ಟರ್ ಕೂಡ ಸಾಕಷ್ಟು ಶಾಸಕರು ಬಿಜೆಪಿಯ ಸಂಪರ್ಕ ದಲ್ಲಿದ್ದು, ಏನೂ ಆತಂಕವಿಲ್ಲ ಎಂದಿದ್ದಾರೆ.
ಚಾಟಾಲಾ ಪಕ್ಷವೇ ವಿಭಜನೆಯತ್ತ?
ಚಂಡೀಗಢ: ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ಸರ್ಕಾರದ ವಿಶ್ವಾಸಮತಕ್ಕೆ ಬೇಡಿಕೆ ಸಲ್ಲಿಸಿದ್ದ ದುಷ್ಯಂತ್ ಸಿಂಗ್ ಚೌಟಾಲಾ ನೇತೃತ್ವದ ಜೆಜೆಪಿ ಪಕ್ಷವೇ ಇದೀಗ ವಿಭಜನೆಯ ಭೀತಿ ಎದುರಿಸುವಂತಾಗಿದೆ. ಜೆಜೆಪಿಯ 10 ಶಾಸಕರ ಪೈಕಿ 6 ಜನರು ಈಗಾಗಲೇ ಚೌಟಾಲರಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೊತೆಗೆ ಮೂವರು ಜೆಜೆಪಿ ಶಾಸಕರು ಗುರುವಾರ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.