ಜೆಡಿಎಸ್ ಕಾರ್ಯಾಧ್ಯಕ್ಷ ರಾಜೀನಾಮೆ : ಚುನಾವಣೆ ಹೊಸ್ತಿಲಲ್ಲೇ ಆಘಾತ

By Kannadaprabha NewsFirst Published Nov 13, 2019, 11:47 AM IST
Highlights

ಜೆಡಿಎಸ್ ಪಕ್ಷ ದೊಡ್ಡ ಆಘಾತ ಎದುರಾಗಿದೆ. ಕಾರ್ಯಾಧ್ಯಕ್ಷರು ರಾಜೀನಾಮೆ ನೀಡಿದ್ದು, ಕುಟುಂಬ ರಾಜಕಾರಣವೇ ಇದಕ್ಕೆ ಕಾರಣ ಎಂದಿದ್ದಾರೆ. 

ಬೆಂಗಳೂರು [ನ.13]:  ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದೆ, ಸ್ವಾರ್ಥ, ಕುಟುಂಬ ರಾಜಕಾರಣ ಹೆಚ್ಚಾಗಿದೆ ಎಂದು ಆರೋಪಿಸಿ ಜೆಡಿಎಸ್‌ನ ರಾಜ್ಯ ಕಾರ್ಯಾಧ್ಯಕ್ಷ ಆರ್.ವಿ.ಹರೀಶ್ ಅವರು ತಮ್ಮ ಸ್ಥಾನ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಮಂಗಳವಾರ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಇತ್ತೀಚೆಗೆ ಪಕ್ಷದಲ್ಲಿ ನಡೆದ ಹಲವಾರು ಪಕ್ಷ ವಿರೋಧಿ ಚಟುವಟಿಕೆಗಳಿಂದ ಮಾನಸಿಕವಾಗಿ ನೊಂದಿ ದ್ದೇನೆ. ಪಕ್ಷದ ಕೆಲ ಹಿರಿಯ ಮುಖಂಡರು ಪಕ್ಷವನ್ನು ಕುಟುಂಬದ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಕೇವಲ ಜಾತೀಯತೆ, ದ್ವೇಷ, ಅಸೂಯೆ ರಾಜಕಾರಣ ಹೆಚ್ಚಾಗಿದೆ. ಅನುಕೂಲ ಸಿಂಧು ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

JDS ಅತೃಪ್ತರ ಬಳಿ ಕ್ಷಮೆ ಯಾಚಿಸಿದ ಎಚ್.ಡಿ.ಕುಮಾರಸ್ವಾಮಿ..

ನಾನು ಸಮಾಜದ ಜಾತ್ಯತೀತ ತತ್ವಗಳಿಗೆ, ಮೌಲ್ಯಗಳಿಗೆ ಒತ್ತು ಕೊಟ್ಟಿದ್ದೇನೆ. ಇದೇ ರೀತಿ ಜಾತ್ಯತೀತ ಜನತಾದಳ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿ ಈವರೆಗೂ ನಾನು ಪಕ್ಷ ಸಂಘಟನೆಗಾಗಿ ಹಲವು ರೀತಿಯಲ್ಲಿ ಶ್ರಮಿಸಿ ದ್ದೇನೆ. ಆದರೆ, ಪಕ್ಷದಲ್ಲಿ ನಡೆಯುತ್ತಿರುವ ಪಕ್ಷಪಾತದಿಂದ ಬೇಸರ ವಾಗಿದೆ. ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಹಲವು ನಾಯಕರು ಪಕ್ಷ ತೊರೆದು ಹೋಗಿದ್ದಾರೆ. ಮತ್ತಷ್ಟು ಹಲವು ಶಾಸಕರು, ಮುಖಂಡರು, ಪರಿಷತ್‌ನ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ಮತ್ತು ಪರಿಷತ್ ಸದಸ್ಯರ ಆಯ್ಕೆ ನಡೆದಾಗ ಪಕ್ಷದ ಹಿರಿಯ ಮುಖಂಡರು ಕೆಲ ಹಣವಂತರಿಗೆ ಬೆಲೆ ಕೊಟ್ಟು ಟಿಕೆಟ್ ಆಕಾಂಕ್ಷಿಗಳಾಗಿದ್ದ ನಿಷ್ಠಾವಂತ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದೆ ದ್ರೋಹ ಎಸಗಿದ್ದಾರೆ ಎಂದು ದೂರಿದ್ದಾರೆ.

click me!