ವಿಧಾನ ಪರಿಷತ್‌ನ ಮೂರು ಶಿಕ್ಷಕರ ಕ್ಷೇತ್ರ ಹಾಗೂ ಮೂರು ಪದವೀಧರರ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದ್ದು, ಈಗಾಗಲೇ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಬೆಂಗಳೂರು (ಜೂ.07): ವಿಧಾನ ಪರಿಷತ್‌ನ ಮೂರು ಶಿಕ್ಷಕರ ಕ್ಷೇತ್ರ ಹಾಗೂ ಮೂರು ಪದವೀಧರರ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದ್ದು, ಈಗಾಗಲೇ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯ ಗಳಿಸಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ತೆರಳಿ ಸತತ 5ನೇ ಬಾರಿಗೆ ಆಯ್ಕೆ ಬಯಸಿದ್ದ ಮರಿತಿಬ್ಬೇಗೌಡ ಸೋಲನುಭವಿಸಿದ್ದಾರೆ. ಮತ ಎಣಿಕೆ ಕಾರ್ಯವು ತಡರಾತ್ರಿಯವರೆಗೆ ನಡೆದಿರುವ ಕಾರಣ ಫಲಿತಾಂಶದ ಸ್ಪಷ್ಟ ಚಿತ್ರಣ ಶುಕ್ರವಾರ ಸಿಗಲಿದೆ.
ಮೂರುವರೆ ದಶಕದ ಬಳಿಕ ಕಾಂಗ್ರೆಸ್ ವಶಕ್ಕೆ: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಬಿಜೆಪಿ ಕಸಿದುಕೊಂಡಿತ್ತು. ಇದೀಗ ಬಿಜೆಪಿ ತೆಕ್ಕೆಯಲ್ಲಿದ್ದ ವಿಧಾನ ಪರಿಷತ್ ನ ಬೆಂಗಳೂರು ಪದವೀಧರ ಕ್ಷೇತ್ರವನ್ನು ಕಾಂಗ್ರೆಸ್ ವಶ ಪಡಿಸಿಕೊಂಡಿರುವುದು ಕೈ ಪಾಳಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ವಿಧಾನ ಪರಿಷತ್ ಗೆ ಬೆಂಗಳೂರು ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರವರು ಪ್ರತಿಸ್ಪರ್ಧಿಯಾದ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಅ.ದೇವೇಗೌಡ ಅವರನ್ನು ಸುಮಾರು ಮತಗಳಿಂದ ಮಣಿಸಿ ಮೇಲ್ಮನೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಪಟ್ಟಣಕ್ಕೆ ಡಿಕೆಸು ನಿಲ್ಲಿಸುವ ಚಿಂತನೆಯಿಲ್ಲ: ಡಿ.ಕೆ.ಶಿವಕುಮಾರ್
ಈ ಮೂಲಕ ಬಿಜೆಪಿ ಪಕ್ಷದ ಭದ್ರಕೋಟೆ ಆಗಿದ್ದ ಬೆಂಗಳೂರು ಪದವೀಧರ ಕ್ಷೇತ್ರ ಮೂರುವರೆ ದಶಕಗಳ ನಂತರ ಕಾಂಗ್ರೆಸ್ ಪಾಲಾಗಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರವರ ಸೋಲಿನಿಂದ ಕಂಗ್ಗೆಟ್ಟಿದ್ದ ಕೈ ಪಾಳಯದಲ್ಲಿ ಪರಿಷತ್ ಫಲಿತಾಂಶ ಹೊಸ ಚೈತನ್ಯ ಮೂಡಿಸಿದೆ.
ಮೈತ್ರಿ ಪಕ್ಷಗಳಿಗೆ ಮುಖಭಂಗ: ಬೆಂಗಳೂರು ಪದವೀಧರ ಕ್ಷೇತ್ರದ ಪ್ರತಿ ಚುನಾವಣೆಯಲ್ಲಿ ಬಿಜೆಪಿ , ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸಿ ಅ.ದೇವೇಗೌಡ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ನಿಂದ ರಾಮೋಜಿಗೌಡ ಸ್ಪರ್ಧೆ ಮಾಡಿದ್ದರು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ , ನೂತನ ಸಂಸದ ಡಾ.ಸಿ.ಎನ್ . ಮಂಜುನಾಥ್ , ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಸೇರಿದಂತೆ ಅನೇಕರು ಅ.ದೇವೇಗೌಡರ ಪರ ಮತಯಾಚನೆ ಮಾಡಿದ್ದರು.
ಲಿಂಗಾಯತ ಧರ್ಮ ಅರ್ಥೈಸಿಕೊಳ್ಳುವ ಅಗತ್ಯವಿದೆ: ಸಚಿವ ಸತೀಶ ಜಾರಕಿಹೊಳಿ
ಇನ್ನು ಕಾಂಗ್ರೆಸ್ ನ ರಾಮೋಜಿಗೌಡ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕರು ಪ್ರಚಾರ ನಡೆಸಿದ್ದರು. ಅಂತಿಮವಾಗಿ ರಾಮೋಜಿಗೌಡರವರು ಅ.ದೇವೇಗೌಡ ಅವರನ್ನು ಮಣಿಸುವ ಮೂಲಕ ಬಿಜೆಪಿ - ಜೆಡಿಎಸ್ ಮಿತ್ರ ಪಕ್ಷಗಳು ಮುಖಭಂಗ ಅನುಭವಿಸುವಂತೆ ಮಾಡಿದ್ದಾರೆ.