ಉಪಚುನಾವಣೆ ನಡೆಯುವ ಎಲ್ಲಾ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಬಿಜೆಪಿಗೆ ನೆರವಾಗಿ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮುಂದಾಗಿದೆ.
ಬೆಂಗಳೂರು [ನ.12] : ಐದಾರು ಕ್ಷೇತ್ರಗಳಲ್ಲಿ ಮಾತ್ರ ಪ್ರಬಲ ಸ್ಪರ್ಧೆ ನೀಡುವ ಸಾಮರ್ಥ್ಯವಿದ್ದರೂ ಉಪಚುನಾವಣೆ ನಡೆಯುವ ಎಲ್ಲಾ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ನಿಲ್ಲಿಸುವ ಮೂಲಕ ಬಿಜೆಪಿಗೆ ನೆರವಾಗಿ ಕಾಂಗ್ರೆಸ್ಸನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮುಂದಾಗಿದೆ.
ಈ ಸುಳಿವು ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ನಾವು ಗೆಲ್ಲಲಾಗದಿದ್ದರೂ 5ರಿಂದ 6 ಸ್ಥಾನಗಳಲ್ಲಿ ಪ್ರಬಲ ಪೈಪೋಟಿ ನೀಡುವುದು ನಿಶ್ಚಿತ. ಆದರೆ, ಎಲ್ಲ 15 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೊಂದಿಗೂ ಈ ಉಪ ಚುನಾವಣೆಯಲ್ಲಿ ಮೈತ್ರಿಗೆ ಹೋಗೋದಿಲ್ಲ. ಹಿಂದೆಯೂ ನಾವು ಮೈತ್ರಿ ಅರಸಿ ಯಾರ ಬಳಿಯೂ ಹೋಗಿಲ್ಲ. ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಹುರಿಯಾಳುಗಳ ಎಲ್ಲಾ ಸ್ಥಾನಗಳ ಸ್ಪರ್ಧೆಯಿಂದ ಯಾರಿಗೆ ಲಾಭ- ಯಾರಿಗೆ ನಷ್ಟ ಎಂಬುದನ್ನು ನಾನೇಕೆ ಹೇಳಬೇಕೆಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಮತ್ತೆ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕರ ಅತೃಪ್ತಿ ಸ್ಫೋಟ...
ಕಾಂಗ್ರೆಸ್ ಮುಖಂಡರು ಎಲ್ಲ15 ಸ್ಥಾನಗಳಲ್ಲಿ ಗೆಲ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಅವರು 15 ಸೀಟು ಗೆದ್ದರೆ ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ನಾವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಮಾತ್ರಕ್ಕೆ ಎಲ್ಲಾ ಕಡೆ ಗೆಲ್ಲುತ್ತೇವೆ ಎಂದು ಹೇಳಲಾಗದು. ಸೋಲು, ಗೆಲುವು ಮತದಾರರಿಗೆ ಬಿಟ್ಟ ವಿಚಾರ. ಹಾಗಂತ ನಾವು ಚುನಾವಣೆಯಿಂದ ದೂರ ಸರಿಯೋದಿಲ್ಲ.
ಕಾರ್ಯಕರ್ತರನ್ನು ನಮ್ಮ ಪಕ್ಷಕ್ಕೆ ಹಿಡಿದಿಟ್ಟುಕೊಳ್ಳಲಾದರೂ ನಾವು ಈ ಬಾರಿ ಎಲ್ಲಾ ಕಡೆ ಕಣದಲ್ಲಿರುತ್ತೇವೆ. ಪಕ್ಷ ಉಳಿಸುವುದಕ್ಕಾಗಿಯೇ ಇಂತಹ ಹೋರಾಟ. ಬೆಳಗಾವಿಯ 2 ಕಡೆ ಹಾಗೂ ಉಳಿದಂತೆ 4ರಿಂದ 5 ಕಡೆ ಪ್ರಬಲ ಪೈಪೋಟಿ ನೀಡುತ್ತೇವೆ ಎಂದರು.
ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ