JDS: ಮೈಚಳಿ ಬಿಟ್ಟು ಪಕ್ಷ ಸಂಘಟಿಸಿ, ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ, ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ

Kannadaprabha News   | Kannada Prabha
Published : May 10, 2026, 11:55 AM IST
JDS Nikhil kumaraswamy

ಸಾರಾಂಶ

ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮುಖಂಡರು ವೈಮನಸ್ಸು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ರಾಜ್ಯ ಸರ್ಕಾರದ ವೈಫಲ್ಯ ಜನರ ಮುಂದಿಟ್ಟು, ಮುಂಬರುವ ಚುನಾವಣೆಗಳಲ್ಲಿ ಯುವಶಕ್ತಿಯ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ.

ದೊಡ್ಡಬಳ್ಳಾಪುರ (ಮೇ.10): ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ಧ. ಸ್ಥಳೀಯ ನಾಯಕರು ಸ್ವಪ್ರತಿಷ್ಠೆ ಹಾಗೂ ವೈಮನಸ್ಯ ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಜೆಡಿಎಸ್ ರಜತ ಮಹೋತ್ಸವದ ಪ್ರಯುಕ್ತ ‘ಜನರೊಂದಿಗೆ ಜನತಾದಳ-ಸಶಕ್ತ ಜನತಾದಳ, ಸಮೃದ್ಧ ಕರ್ನಾಟಕ’ ಧ್ಯೇಯದೊಂದಿಗೆ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಂಬರುವ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಅಧಿಕಾರ ಸಿಗಬೇಕು. ಜೆಡಿಎಸ್ ಎಲ್ಲಿದೆ ಎಂದು ಅಪಹಾಸ್ಯ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ಅದಕ್ಕೆ ಕಾರ್ಯಕರ್ತರು ಸಜ್ಜಾಗಿದ್ದು, ಮುಖಂಡರಲ್ಲಿನ ಪ್ರತಿಷ್ಠೆ ಇಂದಿಗೇ ಮುಕ್ತಾಯವಾಗಬೇಕು. ಕ್ಷೇತ್ರದಲ್ಲಿ ನಮ್ಮ ಪಕ್ಷದ ಸ್ಥಿತಿ ಹೇಗೆನ್ನುವ ಆತಂಕ ಬೇಡ. ಕಾಲವೇ ಎಲ್ಲವನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.

ಯುವ ಸಮುದಾಯ ನಿರ್ಣಾಯಕ:

ದಕ್ಷಿಣ ಭಾರತದ ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡುವ ಶಕ್ತಿ ಯುವ ಸಮುದಾಯಕ್ಕಿದೆ ಎನ್ನುವುದು ಸಾಬೀತಾಗಿದೆ. ಪ್ರಧಾನಿ ಮೋದಿ ಅವರ ವಿಕಸಿತ ಭಾರತವನ್ನು ಬೆಂಬಲಿಸಬೇಕಿದೆ. ಯುವಶಕ್ತಿ, ಜೆಡಿಎಸ್ ಅಧಿಕಾರಕ್ಕೆ ತರಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.

ರಾಜ್ಯ ಸರ್ಕಾರದ ವೈಫಲ್ಯವನ್ನು ಜನರ ಮುಂದಿಡಿ:

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಿಂದುಳಿದವರ ಪರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ಹಿಂದುಳಿದ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವೆಲ್ಲವು ಬೇರೆಡೆಗೆ ಹೋಗುತ್ತಿದೆ. 3 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಅಹಿಂದ ವರ್ಗದ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟಿದ್ದ ಹಣ ವಿನಿಯೋಗವಾಗಿಯೇ ಇಲ್ಲ. ಪರಿಶಿಷ್ಟ ಜಾತಿ, ಪಂಗಡಕ್ಕಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಮಹಿಳೆಯರಿಗೆ ₹2 ಸಾವಿರ ಗೃಹಲಕ್ಷ್ಮೀ ಹಣ ನೀಡಿದ ಮಾತ್ರಕ್ಕೆ ಅವರ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರಿಗೆ ಸಾಂವಿಧಾನಿಕವಾಗಿ ದೊರೆಯಬೇಕಿರುವ ಹಕ್ಕುಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗಗಳೆ ದೊರೆಯದಾಗಿವೆ. ಸರ್ಕಾರ ಕಾಟಾಚಾರಕ್ಕೆ ಉದ್ಯೋಗ ಮೇಳ ನಡೆಸುವ ಮೂಲಕ ವಿದ್ಯಾವಂತರನ್ನು ವಂಚಿಸುತ್ತಿದೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ಕಿತ್ತು ಹಾಕದೇ ಇದ್ದರೆ ಯುವ ಸಮುದಾಯಕ್ಕೆ ಉದ್ಯೋಗ ದೊರೆಯಲು ಸಾಧ್ಯವೇ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರು ಜನರ ಮುಂದಿಡಬೇಕು ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Vijay: ಕೊನೆಗೂ ತಮಿಳುನಾಡು ಮುಖ್ಯಮಂತ್ರಿ ಗದ್ದುಗೆ ಏರಿದ ನಟ ವಿಜಯ್: ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಿಂಚಿಂಗ್!
ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್​ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್​ ಶಾಕ್​