ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಜತೆಗೆ ಮೈತ್ರಿಗೆ ರೆಡಿ: ದೇವೇಗೌಡ

Kannadaprabha News   | Kannada Prabha
Published : Feb 26, 2026, 06:32 AM IST
HD Deve Gowda Latest News

ಸಾರಾಂಶ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವಂತವಾಗಿ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿದ್ದ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು, ಇದೀಗ ಯೂ-ಟರ್ನ್‌ ಹೊಡೆದಿದ್ದು, ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.  

ಬೆಂಗಳೂರು: ರಾಜ್ಯದ ನಗರ ಮತ್ತು ಜಿಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಎನ್‌ಡಿಎ ಜೊತೆಗೆ ಹೋಗಬೇಕು ಎಂಬ ಆಕಾಂಕ್ಷೆ ಇದೆ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ವಂತ ಶಕ್ತಿಯಿಂದ ಹೋರಾಡಲಿದೆ ಎಂದು ಗೌಡರು ಗುಡುಗಿದ್ದರು. ಇದೀಗ ಯೂ-ಟರ್ನ್‌ ಹೊಡೆದಿರುವ ಅವರು, ಜೆಡಿಎಸ್‌-ಬಿಜೆಪಿ ಮೈತ್ರಿ ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬುಧವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎನ್‌ಡಿಎಯಲ್ಲಿ ಇದ್ದೇವೆ. ಮುಂಬರುವ ನಗರ ಪಾಲಿಕೆಗಳು, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ನಾವು ಎನ್‌ಡಿಎಯ ಜೊತೆಗೆ ಹೋಗಬೇಕು ಎಂಬ ಆಕಾಂಕ್ಷೆಯಿದೆ. ಬಿಜೆಪಿ ರಾಷ್ಟ್ರೀಯ ಪಕ್ಷ, ನಮ್ಮದು ಪ್ರಾದೇಶಿಕ ಪಕ್ಷ. ಬಿಜೆಪಿಯವರು ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಣಯದ ಮೇರೆಗೆ ನಾವು ಮುಂದಿನ ಹೆಜ್ಜೆ ಇರಿಸುತ್ತೇವೆ ಎನ್ನುವ ಮುಖಾಂತರ ನಾವು ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಸಿದ್ಧ ಎಂಬ ಸೂಚನೆ ನೀಡಿದರು.

ರಾಜ್ಯ ಸರ್ಕಾರವು ಬೆಂಗಳೂರು ನಗರವನ್ನು ಐದು ನಗರ ಪಾಲಿಕೆ ಮಾಡಿ ವಿಂಗಡಿಸಿದೆ. ನಾವೇನು ಮಾಡಬೇಕು ಎಂಬುದರ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದೇವೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ನಾವು ಎನ್‌ಡಿಎ ಜೊತೆಗೇ ಹೋಗುತ್ತೇವೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸೀಟು ಹಂಚಿಕೆ ಕೊಂಚ ಕಷ್ಟವಾಗಬಹುದು. ಪಕ್ಷದ ನಾಯಕರು, ಮುಖಂಡರು ಕುಳಿತು ಚರ್ಚಿಸುತ್ತೇವೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ಚರ್ಚಿಸಿಕೊಂಡು ಇಲ್ಲಿಗೆ ಬರಬಹುದು. ಬಳಿಕ ನಾವೆಲ್ಲ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಿದ್ದೇವೆ ಎಂದು ದೇವೇಗೌಡರು ಹೇಳಿದರು.

ಸಿದ್ದು ಹೇಳಿಕೆಗೆ ನೋ ರಿಯಾಕ್ಷನ್‌:

ಜೆಡಿಎಸ್‌ ಕುಟುಂಬ ರಾಜಕಾರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತ ಪ್ರಶ್ನೆಗೆ, ಇದಕ್ಕೆ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ. ಈ ಪಕ್ಷ ನಡೆದು ಬಂದ ದಾರಿ, ಜನತಾ ಪಾರ್ಟಿಯಿಂದ ಜೆಡಿಎಸ್‌ ಆಗಿದೆ. ಇದರ ಬಗ್ಗೆ ವಿಶ್ಲೇಷಿಸುವುದು ಕಷ್ಟ. ನನಗೆ ಪ್ರತಿಯೊಂದರ ಜ್ಞಾಪಕ ಶಕ್ತಿ ಇದೆ. ಅಂತಹ ಸನ್ನಿವೇಶ ಬಂದರೆ ನಾನೇ ಎಲ್ಲ ವಿಷಯ ಹೇಳುತ್ತೇನೆ ಎಂದರು.

ವಿಜಯಪುರ ಸಮಾವೇಶಕ್ಕೆ ಹೋಗುವೆ:

ಇದೇ ಫೆ.27ಕ್ಕೆ ವಿಜಯಪುರದಲ್ಲಿ ಜೆಡಿಎಸ್‌ ಸಮಾವೇಶ ನಡೆಯಲಿದೆ. ಈಗಾಗಲೇ ಪೂರ್ವ ಸಿದ್ಧತೆಗಳು ನಡೆದಿವೆ. ಈ ಸಮಾವೇಶಕ್ಕೆ ನನಗೂ ಆಹ್ವಾನವಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ನಾನು ಹೆಲಿಕಾಪ್ಟರ್‌ನಲ್ಲಿ ವಿಜಯಪುರಕ್ಕೆ ತೆರಳಲಿದ್ದೇವೆ. ನೀರಾವರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಲಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ದೇವೇಗೌಡರು ಪ್ರತಿಕ್ರಿಯಿಸಿದರು.

ನನಗೆ ಕೊನೆ ಅಧಿವೇಶನ: ಗೌಡ

ಇದೇ ಜೂನ್‌ಗೆ ನನ್ನ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿಯಲಿದೆ. ಏಪ್ರಿಲ್‌ ಅಂತ್ಯಕ್ಕೆ ಅಧಿವೇಶನ ಮುಗಿಯಲಿದೆ. ಈ ಅಧಿವೇಶನದಲ್ಲಿ ಏನು ಪ್ರಸ್ತಾಪಿಸಬೇಕು ಎಂದು ಯೋಚಿಸುತ್ತಿದ್ದೇನೆ. ನಾನು ದೆಹಲಿಗೆ ಹೋಗುವ ಮುನ್ನ ನಿಮ್ಮನ್ನು ಭೇಟಿಯಾಗುವೆ. ರಾಜ್ಯಸಭಾ ಅವಧಿ ಮುಗಿದರೂ ನಿಮ್ಮನ್ನು ಭೇಟಿಯಾಗುವೆ. ಮುಂದಿನ ದಿನಗಳಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡುವ ಸನ್ನಿವೇಶ ಬರಲಿದೆ ಎಂದು ದೇವೇಗೌಡರು ಹೇಳಿದರು.

-

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೊದಲ ಬಾರಿಯ ಶಾಸಕರಿಗೆ ಸಚಿವ ಸ್ಥಾನ ಇಲ್ಲ : ಸಿಎಂ
ರಾಹುಲ್ ಗಾಂಧಿ ನೆಗೆಟಿವ್ ಪಾಲಿಟಿಕ್ಸ್‌ನ ಪೋಸ್ಟರ್ ಬಾಯ್, ವಿದೇಶಿ ಶಕ್ತಿಗಳ ಕೈಗೊಂಬೆ, ಪಿಯೂಷ್ ಗೋಯಲ್ ಗಂಭೀರ ಆರೋಪ!