* ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡ
* ಜನತಾ ಪರ್ವ 1.0 ಕಾರ್ಯಗಾರದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
* ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಬೇಡವೇ ಎಂದು ಕಿಡಿಕಾರಿದ ದೊಡ್ಡಗೌಡ್ರು
ಬೆಂಗಳೂರು, (ಸೆ.27): ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಮಾಜಿ ಮುಖ್ಯಮನಮತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ. ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಗುಡುಗಿದರು.
2023ಕ್ಕೆ ಜಾತ್ಯತೀತ ಜನತಾದಳದ ಹಾಗೂ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜನತಾ ಸರಕಾರ ರಚನೆ ಮಾಡುವ ಗುರಿಯೊಂದಿಗೆ ಬಿಡದಿ ಬಳಿಯ ತೋಟದ ಮನೆಯಲ್ಲಿ ಆರಂಭವಾದ 4 ದಿನಗಳ ಜನತಾ ಪರ್ವ 1.0 ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ದೇವೇಗೌಡ್ರು, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಪರೋಕ್ಷ ಚಾಲೆಂಜ್
ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಬೇಡವೇ. ತಾವು ನಾಯಕರಾಗಿ ಬಂದಿದ್ದು ಎಲ್ಲಿಂದ, ಬೆಳೆದದ್ದು ಎಲ್ಲಿ? ಎಂಬುದನ್ನು ಅರಿತು ಮಾತನಾಡಬೇಕು. ಅವರ ಜತೆ ಇವರ ಜತೆ ಹೋಗುವ ಪಕ್ಷ ಎಂದು ದೂರುವ ಮುನ್ನ ಸಮ್ಮಿಶ್ರ ಸರಕಾರ ರಚನೆ ಮಾಡುವುದಕ್ಕೆ ಯಾರು ಯಾರ ನಮ್ಮ ಮನೆ ಬಾಗಿಲಿಗೆ ಬಂದರು ಎನ್ನುವುದು ನನಗೆ, ನಿಮಗೆ ಮಾತ್ರವಲ್ಲ ಇಡೀ ದೇಶಕ್ಕೆ ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಅಪಮಾನಗಳನ್ನು ಸಹಿಸಿದ್ದೇನೆ, ಎದುರಿಸಿದ್ದೇನೆ. ಅಪಾರ ಕಾರ್ಯಕರ್ತರ ಜತೆ ಅಂತಹ ಎಲ್ಲ ನೋವುಗಳನ್ನು ನುಂಗಿದ್ದೇನೆ. ನಮ್ಮನ್ನು ನೋಡಿ ಅಪಹಾಸ್ಯ ಮಾಡುವವರಿಗೆ 2023ರಲ್ಲೇ ಉತ್ತರ ನೀಡೋಣ ಎಂದು ಪಕ್ಷದ ನಾಯಕರಿಗೆ ಆತ್ಮವಿಶ್ವಾಸ ತುಂಬಿಸಿದರು.
ಬಿಜೆಪಿ ಧರಿದ್ರ ಸರ್ಕಾರ ಅಂತಾರೆ. ಈ ಸರ್ಕಾರ ತಂದವರು ಯಾರು ಸತ್ಯ ಹೇಳಬೇಕು. 5 ಕೆ.ಜಿ ಅಕ್ಕಿ ಕೊಟ್ಟೆ ಅದು ಇದು ಅಂತಾರೆ. ಆದರೂ 78 ಸೀಟೇ ಬಂದಿದ್ದು. ಸೆಕ್ಯುಲರ್ ಪಾರ್ಟಿ ಮಾಡಿಕೊಂಡು ಬಂದ ದೇವೇಗೌಡರನ್ನು 'ಬಿ' ಟೀಂ ಅಂದರು. ಅದನ್ನು ರಾಹುಲ್ ಗಾಂಧಿ ಬಾಯಲ್ಲಿ ಹೇಳಿಸಿದರು ಎಂದು ವಾಗ್ದಾಳಿ ನಡೆಸಿದರು.