ಮುಂಚೆ ನಾವು ಹೇಗೆ ಒಂದೇ ಮಾತರಂ ಎನ್ನುತ್ತಿದ್ದೇವು ಆ ಭಾವನೆ ತರಲು ಕಾಂಗ್ರೆಸ್ ಕಟಿಬದ್ಧವಾಗಿ ಜೋಡೋ ಭಾರತ್ ಪಾದಯಾತ್ರೆ ಹಮ್ಮಿಕೊಂಡಿದೆ: ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ(ಸೆ.09): ದೇಶದಲ್ಲಿ ನಡೆಯುತ್ತಿರುವ ಧರ್ಮ ಮತ್ತು ಜಾತಿಗಳ ಮಧ್ಯದ ವಿಷಬೀಜವನ್ನು ಕಿತ್ತೊಗೆದು ಮತ್ತೆ ಭಾರತೀಯರು ಎಲ್ಲರೂ ಒಂದಾಗಬೇಕು ಎಂಬ ಸದುದ್ದೇಶದಿಂದ ಕಾಂಗ್ರೆಸ್ ಪಕ್ಷ ಸಹಮನಸ್ಸಿನ ಎಲ್ಲರನ್ನು ಕರೆದುಕೊಂಡು ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದೊಡ್ಡ ಪಾದಯಾತ್ರೆಯಾಗಿದ್ದು ಎಲ್ಲರೂ ಇದರಲ್ಲಿ ಭಾಗಿಯಾಗಬೇಕು. ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶ ಎಂದರೆ ನಮ್ಮ ದೇಶ ಶಾಂತಿಪ್ರಿಯ ದೇಶ, ವಿವಿಧ ಭಾಷೆ, ಅನೇಕ ಧರ್ಮ, ಜಾತಿ ಇದ್ದರೂ ನಾವು ಒಂದೇ ಎನ್ನುವ ಸಮನ್ವಯ, ಭ್ರಾತೃತ್ವವನ್ನು ಸಾರುವ ದೇಶವಾಗಿದೆ. ಆದರೆ ಇತ್ತಿಚಿನ ಅಹಿತಕರ ಘಟನೆ, ಜಾತಿ-ಜಾತಿಗಳ ಮಧ್ಯ ಜಗಳ, ಧರ್ಮ-ಧರ್ಮಗಳನ್ನು ಒಡೆದಾಳುವ ನೀತಿ. ಭಾರತ ದೇಶದಲ್ಲಿ ಹುಟ್ಟಿದವರು ಕೂಡ ನೀವು ಭಾರತ ದೇಶದ ಪ್ರಜೆಗಳಲ್ಲ ಎಂಬ ನೀತಿ. ಇದನ್ನು ಕಿತ್ತೊಗೆಯಲು ಭಾರತ್ ಜೋಡೋ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.
ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi
ಇದರಲ್ಲಿ ಅನೇಕ ಜನರು ಸ್ವಯಂಪ್ರೇರಿತರಾಗಿ ವಯಸ್ಕರರು, ಯುವಕರು, ಮಹಿಳೆಯರು ಭಾಗಿಯಾಗಿದ್ದಾರೆ. ಇನ್ನು ನಾಲ್ಕು ಶಾಸಕರಿಗೆ ಒಂದೊಂದು ಜವಾಬ್ದಾರಿ ಕೊಟ್ಟಿದ್ದಾರೆ. ನನಗೆ ಮತ್ತು ಸತೀಶ ಜಾರಕಿಹೊಳಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಮೊಳಕಾಲ್ಮೂರಿನಲ್ಲಿ ಪಾದಯಾತ್ರೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಹಾಗೂ ಯಮಕನಮರಡಿ ಕ್ಷೇತ್ರಗಳಿಂದ ತಲಾ ಐದು ಸಾವಿರ ಕಾರ್ಯಕರ್ತರೊಂದಿಗೆ ನಾವು ಭಾಗವಹಿಸಲಿದ್ದೇವೆ ಎಂದರು.
ನಮ್ಮ ದೇಶ ಮಹಾತ್ಮ ಗಾಂಧೀಜಿ ಅವರು ಹುಟ್ಟಿದ ದೇಶ. ಅವರನ್ನು ನಮ್ಮ ದೇಶದಲ್ಲಿ ಮಹಾತ್ಮ ಎಂದು ಕರೆಯುತ್ತಾರೆ. ಗಾಂಧೀಜಿ ಅವರು ಬ್ರಿಟಿಷರಿಗೆ ವೈರಿಗಳು ಎನ್ನುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಈ ವಿಚಾರಗಳನ್ನು ನಮಗೆ ಕಲಿಸಿ ಕೊಟ್ಟಿದ್ದಾರೆ. ಆದರೆ ಇಂದು ಮನೆ ಪಕ್ಕದವರನ್ನು ಸಂಶಯ ರೀತಿಯಲ್ಲಿ ನೋಡುವ ಭಾವನೆ ಭಿತ್ತರಿಸಲಾಗುತ್ತಿದೆ. ಇದರ ವಿರುದ್ಧವಾಗಿ ಭಾವನೆಗಳನ್ನು ಒಂದು ಮಾಡಬೇಕು. ಇಡೀ ದೇಶವನ್ನು ಒಗ್ಗೂಡಿಸಬೇಕು. ಮುಂಚೆ ನಾವು ಹೇಗೆ ಒಂದೇ ಮಾತರಂ ಎನ್ನುತ್ತಿದ್ದೇವು ಆ ಭಾವನೆ ತರಲು ಕಾಂಗ್ರೆಸ್ ಕಟಿಬದ್ಧವಾಗಿ ಜೋಡೋ ಭಾರತ್ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.