ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದರಿಂದ ನಮ್ಮ ಪಕ್ಷಕ್ಕೇನೂ ಆತಂಕವಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ನ.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದರಿಂದ ನಮ್ಮ ಪಕ್ಷಕ್ಕೇನೂ ಆತಂಕವಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ ಹಾಗೂ ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ.
ಅವರು ಮಾಜಿ ಮುಖ್ಯಮಂತ್ರಿಗಳು. ಸಚಿವರಾಗಿದ್ದವರು. ಉಪಮುಖ್ಯಮಂತ್ರಿಯಾಗಿದ್ದವರು. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಕ್ಷುಲ್ಲಕ ಮಾತುಗಳು ನಮಗೆ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಕೋಲಾರದಲ್ಲಿ ನಮ್ಮ ಯಾವುದೇ ಕಾರ್ಯತಂತ್ರ ಬದಲಾಗಲ್ಲ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳಿದ್ದಾರೆ. ಸಿದ್ದರಾಮಯ್ಯ ಅಷ್ಟೆಅಲ್ಲ, ಯಾರೇ ನಿಂತರೂ ನಮ್ಮ ಪಕ್ಷಕ್ಕೆ ಆತಂಕ ಇಲ್ಲ ಎಂದರು.
Channapatna: ಮುನಿದ ಮುಖಂಡರ ಮನೆಯ ಕದ ತಟ್ಟಿದ ಎಚ್.ಡಿ.ಕುಮಾರಸ್ವಾಮಿ
ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಎಂದರೆ ನಮ್ಮ ಪಕ್ಷಕ್ಕೆ ಕೈಕೊಟ್ಟು ಹೋದ ಹಾಲಿ ಶಾಸಕ ಶ್ರೀನಿವಾಸ್‌ಗೌಡ. ಅವರು ನಮಗೆ ಮಾಡಿದ ದ್ರೋಹವೇ ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ. ಸಿದ್ದರಾಮಯ್ಯ ಅವರಿಗೆ ನಕಾರಾತ್ಮಕ ಅಂಶಗಳು ಇರುವುದೇ ಅಲ್ಲಿ ಎಂದು ತಿಳಿಸಿದರು. ಕಳೆದ ಚುನಾವಣೆಯಲ್ಲಿ ಕೊನೆ ಸಮಯದಲ್ಲಿ ನಾನು ಮೂರು ದಿನ ಬಾದಾಮಿಗೆ ಹೋಗದೆ ಇದ್ದಿದ್ದರೆ ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸಿದ್ದರಾಮಯ್ಯ ಅವರು ಸೋಲುತ್ತಿದ್ದರು.
ಬಾದಾಮಿ ಸೇರಿದಂತೆ ಹಲವೆಡೆ ನಾನು ಅಂತಿಮ ಕ್ಷಣದಲ್ಲಿ ಪ್ರಚಾರ ಮಾಡಿದ್ದೆ. ಜನರಿಂದ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಯಿತು. ನಮ್ಮ ಅಭ್ಯರ್ಥಿ 28 ಸಾವಿರ ಮತ ಪಡೆದರು. ಆಗ ಸಿದ್ದರಾಮಯ್ಯ ಚಿಕ್ಕ ಅಂತರದಲ್ಲಿ ಗೆದ್ದರು. ಇಲ್ಲವಾಗಿದ್ದರೆ ಹತ್ತು ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು. ಹಾಗೆ ನೋಡಿದರೆ ಅವರ ಗೆಲುವಿಗೆ ನಾನೇ ಕಾರಣ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ನನ್ನಿಂದ ರಾಜಕೀಯ ಮರುಜನ್ಮ ಸಿಕ್ಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ 10 ಸ್ಥಾನ ಗೆಲ್ಲಲಿದೆ: ಎಚ್.ಡಿ.ಕುಮಾರಸ್ವಾಮಿ
18 ಅಥವಾ 20ರಂದು ಪಂಚರತ್ನ ರಥಯಾತ್ರೆ: ಈ ತಿಂಗಳ 18 ಅಥವಾ 20ರಂದು ಪಂಚರತ್ನ ರಥಯಾತ್ರೆಯನ್ನು ಮತ್ತೆ ಆರಂಭ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು. ಮಳೆಯಿಂದಾಗಿ ಯಾತ್ರೆ ಮುಂದೂಡಲ್ಪಟ್ಟಿತ್ತು. ಇನ್ನೆರಡು ಮೂರು ದಿನಗಳಲ್ಲಿ ಯಾತ್ರೆಯ ದಿನಾಂಕ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.