ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ವೈಫಲ್ಯಗಳನ್ನು ಸಾಧನೆಗಳಂತೆ ಬಿಂಬಿಸಿಕೊಂಡು ಸುಳ್ಳು ಹೇಳಿಸಿದ್ದಾರೆ. ಬಿದ್ದಿರುವ ಮನೆಗೆ ಪರಿಹಾರ ಪಡೆಯಲು 50 ಸಾವಿರ ರು.ಗಳಿಂದ 1 ಲಕ್ಷ ಲಂಚ ಕೇಳುತ್ತಿದ್ದಾರೆ.
ವಿಧಾನಸಭೆ (ಫೆ.17): ‘ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ವೈಫಲ್ಯಗಳನ್ನು ಸಾಧನೆಗಳಂತೆ ಬಿಂಬಿಸಿಕೊಂಡು ಸುಳ್ಳು ಹೇಳಿಸಿದ್ದಾರೆ. ಬಿದ್ದಿರುವ ಮನೆಗೆ ಪರಿಹಾರ ಪಡೆಯಲು 50 ಸಾವಿರ ರು.ಗಳಿಂದ 1 ಲಕ್ಷ ಲಂಚ ಕೇಳುತ್ತಿದ್ದಾರೆ. ತುತ್ತು ಕೊಟ್ಟ ರೈತನಿಗೆ ಸರ್ಕಾರ ಕುತ್ತು ತಂದಿದೆ. ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿದರೆ ಡಬಲ್ ಎಂಜಿನ್ ಸರ್ಕಾರದ ವೈಫಲ್ಯಗಳು, ಈ ಸರ್ಕಾರ ತಂದಿಟ್ಟಿರುವ ಸಂಕಷ್ಟಗಳು ಗೊತ್ತಾಗುತ್ತವೆ’ ಎಂದು ಜೆಡಿಎಸ್ ಸದಸ್ಯ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಜ್ಯಪಾಲರ ಭಾಷಣದ ಬಗ್ಗೆ ಮಾತನಾಡಿದ ಅವರು, ರೈತರು ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವೇ ಇಲ್ಲ. ಡಬಲ್ ಎಂಜಿನ್ ಸರ್ಕಾರದಿಂದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದಂತಾಗಿದೆ. ಕೊರೋನಾ ಅವಧಿಯಲ್ಲಿ ಸಾಧನೆ ಮಾಡಿದ್ದೇವೆ ಎಂದು ಸುಳ್ಳು ಹೇಳಿದ ಸರ್ಕಾರ ಹಳ್ಳಿಗಳಿಗೆ ಬಸ್ಸು ಸ್ಥಗಿತಗೊಳಿಸಿದೆ. ಮಕ್ಕಳು 6-8 ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಬೇಕಾದ ದುಸ್ಥಿತಿ ಬಂದಿದೆ. ನಮ್ಮ ಅವಧಿಯಲ್ಲಿ ನೀಡುತ್ತಿದ್ದ ಸೈಕಲ್‌ಗಳನ್ನೂ ನಿಲ್ಲಿಸಿ ಮಕ್ಕಳನ್ನು ಶೋಷಿಸುತ್ತಿದ್ದೀರಿ ಎಂದು ಟೀಕಿಸಿದರು.
ಸ್ವಂತ ಶಕ್ತಿ ಮೇಲೆ ಜೆಡಿಎಸ್ ಅಧಿಕಾರಕ್ಕೆ ಬರುವಂತೆ ಆಶೀರ್ವದಿಸಿ: ಎಚ್.ಡಿ.ಕುಮಾರಸ್ವಾಮಿ
ರೈತರು ಸಾಲು-ಸಾಲು ಸಂಕಷ್ಟಕ್ಕೆ ಸಿಲುಕಿದ್ದಾರೆ. ತುತ್ತು ಕೊಟ್ಟ ರೈತನಿಗೆ ಸರ್ಕಾರ ಕುತ್ತು ತಂದಿದೆ. ಅಡಿಕೆ ಬೆಳೆಗೆ ರೋಗ ತಗುಲಿದೆ. ನೆಟೆ ರೋಗದಿಂದ ತೊಗರಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳೆ ವಿಮೆ ಇನ್ನೂ ರೈತರಿಗೆ ಸಿಗುತ್ತಿಲ್ಲ. ಹತ್ತಿ, ತೊಗರಿ, ಕಬ್ಬು, ತೆಂಗು ಸೇರಿದಂತೆ ಎಲ್ಲಾ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನನ್ನ ಅವಧಿಯಲ್ಲಿ ಮಾಡಿದ್ದ ಸಾಲ ಮನ್ನಾದಲ್ಲಿ ಸಮರ್ಪಕ ದಾಖಲೆ ಸಲ್ಲಿಸಿಲ್ಲ ಎಂದು ಬಾಕಿ ಉಳಿದಿದ್ದ 1,890 ಕೋಟಿ ರು.ಗಳ ಸಾಲ ಮನ್ನಾ ಇನ್ನೂ ರೈತರಿಗೆ ನೀಡಿಲ್ಲ. ಜತೆಗೆ ಬ್ಯಾಂಕ್‌ಗಳಿಂದ ನೋಟಿಸ್ ನೀಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿ.ಸೋಮಣ್ಣ ಅವರು ನಾವು ಕಟ್ಟಿರುವ ಮನೆ ತೋರಿಸುತ್ತೇವೆ ಬನ್ನಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕುತ್ತಿದ್ದರು. ಪ್ರವಾಹದಿಂದ ಬಿದ್ದಿರುವ ಮನೆಗಳಿಗೆ ಪರಿಹಾರ ಪಡೆಯಲು 50 ರಿಂದ 1 ಲಕ್ಷ ರು. ಲಂಚ ಕೇಳುತ್ತಿದ್ದಾರೆ. ಮತ್ತೊಬ್ಬ ಸಚಿವ ಪರಿಹಾರ ಪಡೆಯಲು ಜನರೇ ಮುಂದೆ ಬರುತ್ತಿಲ್ಲ ಎನ್ನುತ್ತಾರೆ. ಈ ರೀತಿ ಲಂಚ ಕೇಳಿದರೆ ಜನ ಎಲ್ಲಿಂದ ತಗೊಂಡು ಬರುತ್ತಾರೆ? ಬನ್ನಿ ವಾಸ್ತವ ತೋರಿಸುತ್ತೇನೆ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲು ಎಸೆದರು.
ನಾವೆಂದೂ ಮತಗಳಿಗಾಗಿ ಆಮಿಷವೊಡ್ಡಲ್ಲ: ಶಾಸಕಿ ಅನಿತಾ ಕುಮಾರಸ್ವಾಮಿ
ತಾಜ್ ಹೋಟೆಲ್‌ಗೆ ಆಟ ಆಡಲು ಹೋಗಿದ್ನಾ?: ಕುಮಾರಸ್ವಾಮಿ ತಾಜ್ ವೆಸ್ಟೆಂಡ್‌ನಲ್ಲಿ ಇರುತ್ತಿದ್ದರು, ಹೀಗಾಗಿ ಸರ್ಕಾರ ಬಿದ್ದು ಹೋಗಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ನಾನೇನು ತಾಜ್ ವೆಸ್ಟೆಂಡ್‌ಗೆ ಆಟ ಆಡಲು ಹೋಗಿದ್ನಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ 19 ಗಂಟೆ ಕೆಲಸ ಮಾಡಿದ್ದೇನೆ. ಗೃಹ ಕಚೇರಿ ಬಳಿ ನಿತ್ಯ 5 ಸಾವಿರ ಜನ ಬಡವರು ಕಷ್ಟ ಹೇಳಿಕೊಂಡು ಬರುತ್ತಿದ್ದರು. 109 ಕೋಟಿ ರು. ಮೆಡಿಕಲ್ ಬಿಲ್ ನೀಡಿದ್ದೇನೆ. ನನ್ನ ಬಳಿ ಯಾರೂ ಸೂಟ್‌ಕೇಸ್ ಹಿಡಿದು ಬರುತ್ತಿರಲಿಲ್ಲ. ನನಗೆ ಬಂಗಲೆಯೂ ಸಿಗದಂತೆ ಮಾಡಿದ್ದರು. ಹೀಗಾಗಿ ಕೆಲಸ ಮಾಡಲು ತಾಜ್ ವೆಸ್ಟೆಂಡ್‌ಗೆ ಹೋಗಿದ್ದೇನೆಯೇ ಹೊರತು ಆಟ ಆಡಲು ಹೋಗಿದ್ನಾ ಎಂದು ಪ್ರಶ್ನಿಸಿದರು.