ವಿಧಾನಮಂಡಲ ಅಧಿವೇಶನ ಮುಂದೂಡಿಕೆಯಾದ ತಕ್ಷಣ ವಿದ್ಯುತ್ ಏರಿಕೆಯಾಗಿದೆ. ಏನೀ ಹುನ್ನಾರ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು (ಸೆ.25): ವಿಧಾನಮಂಡಲ ಅಧಿವೇಶನ ಮುಂದೂಡಿಕೆಯಾದ ತಕ್ಷಣ ವಿದ್ಯುತ್ ಏರಿಕೆಯಾಗಿದೆ. ಏನೀ ಹುನ್ನಾರ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನವರಾತ್ರಿಗೆ ಹಬ್ಬದ ಶುಭಾಶಯ ಹೇಳಬೇಕಿದ್ದ ಸರ್ಕಾರ, ಕರೆಂಟ್ ಶಾಕ್ ಕೊಟ್ಟು ಜನರು ಕಂಗೆಡುವಂತೆ ಮಾಡಿದೆ.
ಪ್ರತಿ ಯೂನಿಟ್‌ಗೆ 24ರಿಂದ 43 ಪೈಸೆ ಹೆಚ್ಚಿಸಿರುವುದು ಅವೈಜ್ಞಾನಿಕ, ಅನಪೇಕ್ಷಿತ, ಖಂಡನೀಯ ಎಂದಿದ್ದಾರೆ. ಇಂಧನ ಹೊಂದಾಣಿಕೆ ಶುಲ್ಕದ ನೆಪದಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ. ಕಳೆದ ಜುಲೈನಲ್ಲಿ ಬರೆ ಎಳೆದಿತ್ತು. ಈಗ ಮತ್ತೆ ದರ ಹೆಚ್ಚಿಸಿದೆ. ಕಲ್ಲಿದ್ದಲು ಬೆಲೆ ಹೆಚ್ಚಳದಿಂದ ವಿದ್ಯುತ್ ದರವನ್ನೂ ಏರಿಸಲಾಗುತ್ತಿದೆ ಎಂದು ಇಂಧನ ಸಚಿವರು ಹೇಳುವ ಮಾತು ಒಪ್ಪುವ ರೀತಿ ಇಲ್ಲ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಉತ್ಪಾದನೆ ಉತ್ತಮವಾಗಿದೆ. ಆದರೂ ಖರೀದಿ ವೆಚ್ಚದಲ್ಲಿ 1,244 ಕೋಟಿ ರು. ಹೆಚ್ಚಳ ಆಗಿದೆ ಎನ್ನುವ ಲೆಕ್ಕವನ್ನು ನಂಬಲು ಆಗುತ್ತಿಲ್ಲ ಎಂದಿದ್ದಾರೆ.
ಎಚ್‌ಡಿಕೆ ಆರೋಪ ಸುಳ್ಳು, ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನಲ್ಲಿ ಅಕ್ರಮ ಆಗಿಲ್ಲ: ಸಚಿವ ಅಶ್ವತ್ಥ್
ರಾಜ್ಯ ಬಿಜೆಪಿ ಸರ್ಕಾರ ಜನರ ಪರ ಇಲ್ಲ ಎನ್ನುವುದು ಸತ್ಯ. ಜಾಗತಿಕ ಪೇಟೆಯಲ್ಲಿ ಕಚ್ಚಾತೈಲದ ಬೆಲೆ ನಿರಂತರ ಇಳಿದರೂ ದೇಶದಲ್ಲಿ ತೈಲಬೆಲೆ ಇಳಿಸದ ಕೇಂದ್ರ ಸರ್ಕಾರದ ಹಾದಿಯಲ್ಲಿಯೇ ರಾಜ್ಯ ಸರ್ಕಾರವೂ ಸಾಗಿದೆ. ವಿದ್ಯುತ್ ದರದ ನಿರಂತರ ಏರಿಕೆ ಬಗ್ಗೆ ಗಂಭೀರ ಅನುಮಾನಗಳಿವೆ. ವಿದ್ಯುತ್ ಸೋರಿಕೆ, ಕಳವು ತಡೆಯಲಾಗದ, ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳದ ಬಿಜೆಪಿ ಸರ್ಕಾರ ಅದಕ್ಷತೆಯ ಆಡುಂಬೊಲ, ‘ಬಡವರನ್ನು ಸುಲಿದು ಬಿಸ್ನೆಸ್ ಕ್ಲಾಸಿನ ಜೇಬು ತುಂಬು’ ಎನ್ನುವುದು ಬಿಜೆಪಿ ತತ್ವ. ಅದನ್ನೇ ಕರ್ನಾಟಕದಲ್ಲಿಯೂ ಎಗ್ಗಿಲ್ಲದೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಜೆಡಿಎಸ್ ಮತ್ತೆ ಸಮ್ಮಿಶ್ರ ಸರ್ಕಾರ ಮಾಡಲ್ಲ: ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿ ಚುನಾವಣೆಗಳಲ್ಲೂ ಹೊಂದಾಣಿಕೆ ಮಾಡಿಕೊಳ್ಳುವುದು ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆ, ಎರಡು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದಾರೆ. ಇದನ್ನು ಪ್ರತಿ ಸಂದರ್ಭದಲ್ಲೂ ಗಮನಿಸುತ್ತಿದ್ದೇನೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪಂಚರತ್ನ ಕಾರ್ಯಕ್ರಮ ಬರುತ್ತಿದೆ. ಮೊದಲನೇಯದಾಗಿ 100 ಕ್ಷೇತ್ರ ಆಯ್ಕೆ ಮಾಡಲಾಗಿದೆ. ರಥೋತ್ಸವದ ಮೂಲಕ 8 ಎಲ್‌ಇಡಿ ವಾಹನಗಳು ಪ್ರತಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲಿವೆ. ರಾಜ್ಯಾದ್ಯಂತ ಮಳೆಯಿಂದ ಪಂಚರತ್ನ ಕಾರ್ಯಕ್ರಮ ತಡವಾಗಿದೆ ಎಂದರು. ಪಕ್ಷದ ಕಾರ್ಯಕರ್ತರು ನಮ್ಮನ್ನು ಪ್ರೀತಿಸುತ್ತಾರೆ. 123 ವಿಷಯ ಇಟ್ಟುಕೊಂಡು ಜನರ ಬಳಿಗೆ ಹೊರಟಿದ್ದೇವೆ. ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್-ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದನದಲ್ಲಿ ದೊಡ್ಡ ಹಗರಣ ಬಯಲು ಮಾಡುವೆ: ಎಚ್.ಡಿ.ಕುಮಾರಸ್ವಾಮಿ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಪಕ್ಷದಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಸೂಕ್ತ ಅಭ್ಯರ್ಥಿಯನ್ನು ಪಕ್ಷದ ನಾಯಕರ ಕುಮಾರಸ್ವಾಮಿ ಅವರು ಹಾಕುತ್ತಾರೆ ಎಂದರು. ಜೆಡಿಎಸ್ ಭದ್ರಕೋಟಿ ಅಂದರೆ ಅದು ಕೆ.ಆರ್.ಪೇಟೆ ಕ್ಷೇತ್ರ. ಕಳೆದ ಉಪ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಆದಷ್ಟುಬೇಗ ಆ ಗೊಂದಲಕ್ಕೆ ತೆರೆ ಎಳೆದು ಮತ್ತೆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ತೆಗೆದುಕೊಳ್ಳುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದರು.