
ನವದೆಹಲಿ(ಫೆ.09): ‘ಜೀವನದ ಅಂತ್ಯ ಕಾಲದಲ್ಲಿ ರಾಜಕೀಯ ದಾರಿಯನ್ನೇ ದೇವೇಗೌಡರು ಬದಲಿಸಿದ್ದಾರೆ’ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಡಿದ ಮಾತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಯಲ್ಲಿ ಕೆರಳಿಸಿತು. ‘ಕೆಲವು ಕಾಂಗ್ರೆಸ್ಸಿಗರ ಧೋರಣೆಯ ಕಾರಣ ನಾನು ಬಿಜೆಪಿಗೆ ಬೆಂಬಲ ನೀಡಬೇಕಾಯಿತು’ ಎಂದು ತಿರುಗೇಟು ನೀಡಿದರು.
ಖರ್ಗೆ ಮಾತುಗಳಿಗೆ ಉತ್ತರವಾಗಿ ಮಾತನಾಡಿದ ದೇವೇಗೌಡ, ‘ಜೆಡಿಎಸ್ ಪಕ್ಷವನ್ನು ಕೆಲವು ಕಾಂಗ್ರೆಸ್ಸಿಗರು ನಾಶ ಮಾಡಲು ಮುಂದಾದರು. ಹೀಗಾಗಿ ಪಕ್ಷ ಉಳಿಸಿಕೊಳ್ಳಲು ಬಿಜೆಪಿಗೆ ಬೆಂಬಲ ನೀಡಿದ್ದೇನೆ’ ಎಂದು ಹೇಳಿದರಲ್ಲದೆ, ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನದ ಬಗ್ಗೆಯೂ ಪ್ರಸ್ತಾಪಿಸಿದರು. ಅಲ್ಲದೆ ಕಾಂಗ್ರೆಸ್‌ನಲ್ಲಿನ ಹೈಕಮಾಂಡ್ ಸಂಸ್ಕೃತಿಯನ್ನೂ ತರಾಟೆಗೆ ತೆಗೆದುಕೊಂಡ ಅವರು, ಖರ್ಗೆ ಅವರು ಪ್ರಧಾನಿಯಾದರೆ ಕಾಂಗ್ರೆಸ್ ಹೈಕಮಾಂಡ್ ಸಹಿಸುತ್ತಾ ಎಂದು ಪ್ರಶ್ನಿಸಿದರು.
'ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು'; ದೇವೇಗೌಡರ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯೆ ಏನು?
‘2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಕೆಲವು ಕಾಂಗ್ರೆಸ್ ನಾಯಕರೇ ಕಾರಣ. ತಮ್ಮ ಪುತ್ರನ ಬದಲಾಗಿ, ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ತಾವು ಸಲಹೆ ನೀಡಿದರೂ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿತ್ತು. ಆದರೆ 13 ತಿಂಗಳ ಒಳಗೆ ಅವರನ್ನು ಕೆಳಗಿಳಿಸಿದ್ದು ಯಾರು? ಅದು ಖರ್ಗೆ ಅವರಲ್ಲ. ಆದರೆ ಕಾಂಗ್ರೆಸ್ ನಾಯಕರು. ಅಂದೇ ನಾನು ಕುಮಾರಸ್ವಾಮಿ ಅವರಿಗೆ ಬಿಜೆಪಿ ಜತೆ ಹೋಗಲು ಸೂಚಿಸಿದೆ. ಕಾಂಗ್ರೆಸ್ ಬೆಳೆಯಲು ಬಿಡುವುದಿಲ್ಲ ಎಂದೂ ಹೇಳಿದೆ ಎಂದರು.
ಖರ್ಗೆ ಶುದ್ಧಹಸ್ತ:
ಖರ್ಗೆ ಅವರೊಬ್ಬ ಶುದ್ಧ ವ್ಯಕ್ತಿ. ನನ್ನ ರಾಜಕೀಯ ಜೀವನದಲ್ಲಿ ಖರ್ಗೆ ಅವರು ಸಹಾಯ ಮಾಡಿದ್ದಾರೆ. ಆದರೆ ಪ್ರಧಾನಿ ಅಭ್ಯರ್ಥಿ ಸ್ಥಾನ ಅಥವಾ ನಾಯಕ ಹುದ್ದೆಗೆ ತಮ್ಮನ್ನು ಯಾರೋ ಒಬ್ಬರು ಸೂಚಿಸಿದಾಗ ಏನಾಯಿತು? ನಿಮ್ಮ ಸ್ನೇಹಿತರೇ ಅದಕ್ಕೆ ಆಕ್ಷೇಪ ಎತ್ತಿದರು ಎಂದು ಟಾಂಗ್ ನೀಡಿದರು.
‘ನಾನು ನನ್ನ ರಾಜಕೀಯ ಜೀವನದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ವೈಯಕ್ತಿಕ ಲಾಭದಾಸೆಗೆ ಜಿಗಿದವನಲ್ಲ. ಈಗ ಬಿಜೆಪಿ ಬೆಂಬಲಿಸುತ್ತಿರುವುದಕ್ಕೂ ವೈಯಕ್ತಿಕ ಲಾಭ ಏನಿಲ್ಲ. ಪ್ರಧಾನಿ ಮೋದಿ ಅವರ ಪ್ರೀತಿ ಹಾಗೂ ವಿಶ್ವಾಸವನ್ನಷ್ಟೇ ಲಾಭವಾಗಿ ಪಡೆದುಕೊಂಡಿದ್ದೇನೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.