ಇನ್ನು ಮುಂದೆ ಯಾರಾದರೂ ದೇಶವನ್ನು ತುಂಡರಿಸುವಂತಹ ರಾಷ್ಟ್ರದ್ರೋಹಿ ಹೇಳಿಕೆಗಳ ನೀಡಿದರೆ, ಅಂತಹವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದ ಕೆ.ಎಸ್.ಈಶ್ವರಪ್ಪ
ದಾವಣಗೆರೆ(ಫೆ.09): ಜವಾಹರ ಲಾಲ್ ನೆಹರು ಕಾಲದಿಂದಲೂ ದೇಶ ಒಡೆಯುವ ಕೆಲಸವನ್ನೇ ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಅದೇ ಜಿನ್ನಾ ಸಂಸ್ಕೃತಿಯೇ ಕಾಂಗ್ರೆಸ್‌ನಲ್ಲಿ ಮುಂದುವರಿಯುತ್ತಿದೆ. ಬಿಜೆಪಿ ಯಾವುದೇ ಕಾರಣಕ್ಕೂ ದೇಶ ಒಡೆಯಲು ಬಿಡುವುದೇ ಇಲ್ಲ. ಮುಂದಿನ ದಿನಗಳಲ್ಲಿ ಪಾಕಿಸ್ಥಾನವನ್ನೂ ಭಾರತದೊಳಗೆ ಸೇರಿಸಿ, ಅಖಂಡ ಭಾರತ ಮಾಡುತ್ತೇವೆ. ಇದು ನಮ್ಮ ಸಂಕಲ್ಪ ಎಂದು ಮಾಜಿ ಡಿಸಿಎಂ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಬಿಜೆಪಿ ನೂತನ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಇನ್ನು ಮುಂದೆ ಯಾರಾದರೂ ದೇಶವನ್ನು ತುಂಡರಿಸುವಂತಹ ರಾಷ್ಟ್ರದ್ರೋಹಿ ಹೇಳಿಕೆಗಳ ನೀಡಿದರೆ, ಅಂತಹವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದರು.
ಭಾರತ್ ಬ್ರಾಂಡ್ ಪಂಚ ಗ್ಯಾರಂಟಿಗೂ ಮಿಗಿಲಾದದ್ದು: ಯಡಿಯೂರಪ್ಪ
ಕರ್ನಾಟಕಕ್ಕೆ ಕೇಂದ್ರ ಅನುದಾನವನ್ನೇ ನೀಡಿಲ್ಲವೆಂದು ದೆಹಲಿಯಲ್ಲಿ ಸಿಎಂ, ಡಿಸಿಎಂ ಇತರರು ಪ್ರತಿಭಟಿಸುವ ಮೂಲಕ ರಾಜ್ಯದ ಮಾನ ತೆಗೆದಿದ್ದಾರೆ. ನಿಜವಾಗಿಯೂ ಅನುದಾನ ನೀಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ. ಆಗ ಕೇಂದ್ರ ಸರ್ಕಾರವೇ ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ನೀಡುತ್ತದೆ. ಹಿಂದೆ ಯುಪಿಎ ಸರ್ಕಾರದಲ್ಲಿ ನೀಡುತ್ತಿದ್ದ ಅನುದಾನವೆಷ್ಟು, ನರೇಂದ್ರ ಮೋದಿ ಸರ್ಕಾರ ನೀಡಿದ ಅನುದಾನವೆಷ್ಟು ಎಂಬ ಬಗ್ಗೆ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ತಾಕೀತು ಮಾಡಿದರು.
ಮಾಗಡಿ ಬಾಲಕೃಷ್ಣಗೆ ಈಶ್ವರಪ್ಪ ಚಾಟಿ
ಕಾಂಗ್ರೆಸ್ ಪಕ್ಷದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಬಿಜೆಪಿಯಲ್ಲಿ ಗಂಡಸರೇ ಇಲ್ಲವೆಂದರೆ, ಸಚಿವ ರಾಮಲಿಂಗಾ ರೆಡ್ಡಿ ಅನುದಾನವನ್ನೇನು ಅವರಪ್ಪನ ಮನೆಯಿಂದ ಕೊಡುತ್ತಾರಾ ಎಂಬುದಾಗಿ ಉಡಾಫೆಯಾಗಿ ಮಾತನಾಡುತ್ತಾರೆ. ಒಂದು ಕಡೆ ಸಿದ್ದರಾಮಯ್ಯ ರಾಜ್ಯದ ಸಂಸದರು ದೆಹಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತಾರೆ. ಕಾಂಗ್ರೆಸ್ಸಿನವರದ್ದು ವಿಚಿತ್ರ ಮನಸ್ಥಿತಿ. ಬಿಜೆಪಿಯಲ್ಲಿ ಗಂಡಸರು ಇಲ್ಲವೆಂದಿರುವ ಮಾಗಡಿ ಶಾಸಕ ಬಾಲಕೃಷ್ಣಗೆ ಒಂದು ಮಾತು ಹೇಳುತ್ತೇನೆ. ಗಂಡಸುತನವನ್ನು ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸುತ್ತಾರೆ. ನಾನು ಈ ಮಾತನ್ನು ಕೆಟ್ಟದಾಗಿ ಹೇಳುತ್ತಿಲ್ಲ ಎಂಬುದಾಗಿ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.