ಜೆಡಿಎಸ್-ಕಾಂಗ್ರೆಸ್-ಬಿಜೆಪಿ ಎಲ್ಲವೂ ಒಂದೇ, ಭಿನ್ನವೇನಿಲ್ಲ| ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿಕೆ| ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಶಿಕ್ಷಣ ಮಂತ್ರಿ ಮಾಡಲಿಲ್ಲ| ಸಭಾಪತಿಯಾಗಿ ಮುಂದುವರಿಸಲಿಲ್ಲ| ಯಡಿಯೂರಪ್ಪ, ಸಿದ್ದರಾಮಯ್ಯ ಕರೆದರೂ ಹೋಗಲಿಲ್ಲ|
ಬಳ್ಳಾರಿ(ಅ.23): ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ಒಂದೇ. ಈ ಹಿಂದಿನ ಬದ್ಧತೆ, ಸೈದ್ಧಾಂತಿಕತೆ ಯಾರಲ್ಲೂ ಉಳಿದಿಲ್ಲ. ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಮರ್ಯಾದೆ ಇದ್ದವರು ಇಲ್ಲಿರಬಾರದು ಎನಿಸುತ್ತದೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರು ಬೇಸರದಿಂದ ನುಡಿದಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಅಂತರಾಳದ ಮಾತುಗಳನ್ನು ಹೊರ ಹಾಕಿದ್ದಾರೆ. ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಾನು ಶಿಕ್ಷಣ ಸಚಿವನಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟುಕೆಲಸ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಅದಾಗಲಿಲ್ಲ. ಬಹಳ ಬೇಸರವಾಯಿತು. ಸಭಾಪತಿ ಸ್ಥಾನದಲ್ಲಿದ್ದಾಗಲೂ ಏನಾದರೂ ಕೆಲಸ ಮಾಡಬೇಕು ಎಂಬ ಕನಸಿತ್ತು. ಆರೇಳು ತಿಂಗಳಲ್ಲಿ ಮಾದರಿಯ ಕೆಲಸ ಮಾಡಿದ್ದೆ. ಆದರೆ, ಅಲ್ಲೂ ಮುಂದುವರಿಯಲು ಆಗಲಿಲ್ಲ. ಕೆಳಗಿಳಿಯಬೇಕು ಅಂದ್ರು, ಇಳಿದೆ. ರಾಜಕಾರಣ ವ್ಯವಸ್ಥೆಯಲ್ಲಿ ಏನೇನು ಆಗುತ್ತಿರುತ್ತದೆ. ಸಿದ್ಧಾಂತ, ಪಕ್ಷ ಬದ್ಧತೆ ಇಟ್ಟುಕೊಂಡ ನಮ್ಮಂಥವರು ಎಲ್ಲವನ್ನೂ ಸಹಿಸಿಕೊಂಡು ಇರಬೇಕಾಗುತ್ತದೆ ಎಂದು ಬೇಸರಗೊಂಡರು.
undefined
ಕಾಂಗ್ರೆಸ್‌ನ ಹುಟ್ಟುಗುಣ ಸುಟ್ಟರೂ ಹೋಗದು: ಸಿಟಿ ರವಿ
ಯಡಿಯೂರಪ್ಪ ಕರೆದ್ರು ಹೋಗಲಿಲ್ಲ...
ಯಡಿಯೂರಪ್ಪ ಅವರು ನನಗಿಂತ ಜೂನಿಯರ್. ಅವರು ಮಂತ್ರಿಗಳಾಗಿ ಮುಖ್ಯಮಂತ್ರಿಯೂ ಆದರು. ನಮಗೆ ಅದೃಷ್ಟವಿಲ್ಲ. ನಾವು ಇಲ್ಲಿಯೇ ಇದ್ದೇವೆ. ಯಡಿಯೂರಪ್ಪ ಅವರು ನನಗೆ ಆತ್ಮೀಯರು. ಎರಡು ಬಾರಿ ಪಕ್ಷಕ್ಕೆ ಕರೆದರೂ ಹೋಗಿಲ್ಲ. ಸಿದ್ದರಾಮಯ್ಯ ಸಹ ಆತ್ಮೀಯ ಸ್ನೇಹಿತರು, ಅವರು ಸಹ ಕರೆದರೂ ಹೋಗಲಿಲ್ಲ. ನಮ್ಮಂತಹವರು ಏನಾದರೂ ಮಾಡಿದರೆ ಈ ವರೆಗೆ ಉಳಿಸಿಕೊಂಡು ಬಂದಿರುವ ಘನತೆ, ಗೌರವ ಹಾಳಾಗುತ್ತದೆ ಎಂದು ಎಲ್ಲೂ ಹೋಗುವ ನಿರ್ಧಾರ ಕೈಗೊಳ್ಳಲಿಲ್ಲ. ಹೀಗಾಗಿ ಜೆಡಿಎಸ್‌ನಲ್ಲಿಯೇ ಇದ್ದೇನೆ. ಇಲ್ಲಿಯೇ ಇರುತ್ತೇನೆ ಎಂದು ಹೊರಟ್ಟಿಅವರು ಸ್ಪಷ್ಟಪಡಿಸಿದರು.
ಜನತಾ ಪರಿವಾರ ಒಂದು ಗೂಡಿಸುವ ಪ್ರಯತ್ನ ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಹೊರಟ್ಟಿಅವರು, ಯಾವ ಪರಿವಾರ ಒಂದುಗೂಡಿಸುತ್ತೀರಿ? ಎಲ್ಲರೂ ಬಿಜೆಪಿ, ಕಾಂಗ್ರೆಸ್ ಹೋಗಿ ಬೇರು ಬಿಟ್ಟಾರ. ಎಲ್ಲಿ ಪರಿವಾರ? ಹೋಗು, ನಿನ್ನ ಪರಿವಾರ ನೋಡ್ಕೋ ಅಂತಾರ. ಮಹಿಮಾ ಪಟೇಲ್ ಹೇಳಿದ, ಚುನಾವಣೆಯಲ್ಲಿ ದುಡ್ಡುಕೊಡಲ್ಲ. ಮದ್ಯ ಕುಡಿಸಲ್ಲ ಅಂದ, ಸೋತು ಹೋದ. ಬದ್ಧತೆ ಇಟ್ಟುಕೊಂಡು ರಾಜಕಾರಣ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಕೇಳಿದರು. ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಜೆಡಿಎಸ್ ಮುಖಂಡ ನಾರಾ ಪ್ರತಾಪ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.